Vinesh Phogat: ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ; ನೀರಜ್ ಚೋಪ್ರಾ ಹೇಳಿದ್ದೇನು?
ಕುಸ್ತುಪಟು ವಿನೇಶ್ ಫೋಗಟ್ ಅವರಿಗೆ ಬೆಳ್ಳಿ ಪದಕ ನೀಡುವ ಬಗ್ಗೆ ಕ್ರೀಡಾ ನ್ಯಾಯಮಂಡಳಿ (ಸಿಎಎಸ್) ಇಂದು ನಿರ್ಧಾರ ಪ್ರಕಟಿಸಲಿದೆ. ವಿನೇಶ್ ಫೋಗಟ್ ಪಟ್ಟಿರುವ ಶ್ರಮಕ್ಕೆ ಆಕೆಗೆ ಬೆಳ್ಳಿ ಪದಕ ಸಿಗಲೇಬೇಕು ಎಂದು ಭಾರತೀಯ ಕ್ರೀಡಾಭಿಮಾನಿಗಳು ಆಗ್ರಹಿಸಿದ್ದರು. ಹಲವು ಮಾಜಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟುಗಳು ಕೂಡ ವಿನೇಶ್ ಅವರ ಬೆಂಬಲಕ್ಕೆ ನಿಂತಿದ್ದು, ನ್ಯಾಯ ಸಿಗುವ ಭರವಸೆಯಲ್ಲಿದ್ದಾರೆ.
50 ಕೆಜಿ ವಿಭಾಗದ ಕುಸ್ತಿಯಲ್ಲಿ ಫೈನಲ್ ಪ್ರವೇಶಿಸಿದ್ದ ವಿನೇಶ್ ಫೋಗಟ್ ಫೈನಲ್ ಪಂದ್ಯದ ದಿನ ನಡೆದ ತೂಕದ ಪರೀಕ್ಷೆಯಲ್ಲಿ 100 ಗ್ರಾಂ ಹೆಚ್ಚಾಗಿದ್ದಾರೆ ಎಂದು ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಿತ್ತು. ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದ ಭಾರತೀಯ ಅಭಿಮಾನಿಗಳಿಗೆ ಇದು ಆಘಾತ ಕೊಟ್ಟಿತ್ತು. ಬಳಿಕ ಸಿಎಎಸ್‌ನ ತಾತ್ಕಾಲಿಕ ವಿಭಾಗಕ್ಕೆ ಅನರ್ಹತೆ ಕ್ರಮವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.

ನೀರಜ್ ಚೋಪ್ರಾ ಹೇಳಿದ್ದೇನು?
ಭಾರತಕ್ಕೆ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದುಕೊಟ್ಟ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಕೂಡ ಈಗ ವಿನೇಶ್ ಫೋಗಟ್ ಅವರ ಬೆಂಬಲಕ್ಕೆ ನಿಂತಿದ್ದಾರೆ. 'ಇಂಡಿಯಾ ಹೌಸ್' ನಲ್ಲಿ ಐಒಸಿ ಸದಸ್ಯೆ ಮತ್ತು ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿಯವರ ಅಭಿನಂದನಾ ಸಮಾರಂಭದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿನೇಶ್ ಫೋಗಟ್‌ಗೆ ಪದಕ ಬರಬೇಕು ಎಂದು ನಾನು ಆಶಿಸುತ್ತೇನೆ, ಆದರೆ ಆಕೆಗೆ ಪದಕ ಬರದೇ ಇದ್ದರೂ ಆಕೆ ದೇಶಕ್ಕಾಗಿ ಆಡಿದ್ದನ್ನು ಜನ ಮರೆಯಬಾರದು ಎಂದು ಹೇಳಿದ್ದಾರೆ.
"ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ ಸಿಕ್ಕರೆ ಅದಕ್ಕಿಂತ ಖುಷಿಯ ವಿಚಾರ ಮತ್ತೊಂದಿಲ್ಲ. ಜನ ಕೂಡ ಆಕೆಗೆ ಪದಕ ಸಿಗಲಿ ಎಂದು ಬಯಸುತ್ತಾರೆ. ಒಂದು ವೇಳೆ ಆಕೆ ಅನರ್ಹಗೊಳ್ಳದೇ ಇದ್ದರೆ ಭಾರತಕ್ಕೆ ಖಚಿತವಾಗಿ ಪದಕ ಸಿಗುತ್ತಿತ್ತು. ಪದಕ ಆಕೆಯ ಕೊರಳಲ್ಲಿ ಇಲ್ಲದೇ ಇದ್ದರೆ ಅದು ನಿಜಕ್ಕೂ ನೋವು ಮಾಡುತ್ತದೆ" ಎಂದು ಹೇಳಿದ್ದಾರೆ.
ಇಂದು ಆಕೆಯನ್ನು ಜನ ಚಾಂಪಿಯನ್ ಎಂದು ಕರೆಯುತ್ತಿದ್ದಾರೆ. ಆದರೆ ಆಕೆ ಕುಸ್ತಿಯನ್ನು ಆಡುವುದನ್ನು ಬಿಟ್ಟ ಬಳಿಕ ಜನ ಬೇಗನೆ ಮರೆತುಬಿಡುತ್ತಾರೆ ಎಂದು ನನಗೆ ಭಯವಾಗುತ್ತಿದೆ. ಆದರೆ ಹಾಗೆ ಆಗಬಾರದು, ಆಕೆ ಪದಕ ಪಡೆಯಲಿ, ಪಡೆಯದೇ ಇರಲಿ ದೇಶಕ್ಕಾಗಿ ಆಕೆ ಮಾಡಿದ್ದನ್ನು ಜನ ಮರೆಯಬಾರದು ಎಂದರು.












Click it and Unblock the Notifications