WPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ಹ್ಯಾಟ್ರಿಕ್ ಸೋಲು; ಎರಡನೇ ಬಾರಿ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್
ಮುಂಬೈನ ಬ್ರಬೌರ್ನ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2025ರ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಎರಡನೇ ಬಾರಿ ಮುಂಬೈ ಇಂಡಿಯನ್ಸ್ ಪ್ರಶಸ್ತಿ ಗೆದ್ದುಕೊಂಡಿತ್ತು, ಮೂರು ಆವೃತ್ತಿಯಲ್ಲಿ ನೇರವಾಗಿ ಫೈನಲ್ ಪ್ರವೇಶಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಸೋತು ಮುಖಭಂಗ ಅನುಭವಿಸಿದೆ.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 149 ರನ್ ಕಲೆಹಾಕಿತು. ಮೊದಲ ಆರು ಓವರ್ ಗಳಲ್ಲಿ ಕೇವಲ 20 ರನ್ ಗಳಿಸಿದ್ದ ಮುಂಬೈ ಇಂಡಿಯನ್ಸ್‌ಗೆ ನಾಯಕಿ ಹರ್ಮನ್‌ಪ್ರೀತ್ ಆಸರೆಯಾದರು.

ನ್ಯಾಟ್ ಸಿವರ್ ಬ್ರಂಟ್ ಮತ್ತು ಹರ್ಮನ್‌ಪ್ರೀತ್ ಕೌರ್ ಮೂರನೇ ವಿಕೆಟ್‌ಗೆ 89 ರನ್ ಕಲೆಹಾಕಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ 44 ಎಸೆತಗಳಲ್ಲಿ 9 ಬೌಂಡರಿ 2 ಎಸೆತಗಳಲ್ಲಿ 66 ರನ್ ಗಳಿಸಿದರೆ, ನ್ಯಾಟ್ ಸಿವರ್ ಬ್ರಂಟ್ 28 ಎಸೆತಗಳಲ್ಲಿ 30 ರನ್ ಗಳಿಸಿದರು. ಅಮನ್‌ಜೋತ್ ಕೌರ್ ಎಸೆತಗಳಲ್ಲಿ 14 ರನ್ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಮಾರಿಜನ್ನೆ ಕಾಪ್, ಜೆಸ್ ಜೊನಾಸೆನ್ ಮತ್ತು ಎನ್ ಚರಣಿ ತಲಾ ಎರಡು ವಿಕೆಟ್ ಪಡೆದರು. ಅನ್ನಾಬೆಲ್ ಸದರ್ಲ್ಯಾಂಡ್ 1 ವಿಕೆಟ್ ಪಡೆದುಕೊಂಡರು.
ಈ ಸವಾಲಿನ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಆರಂಭಿಕ ಆಘಾತ ಅನುಭವಿಸಿತು. ನಾಯಕಿ ಮೆಗ್ ಲ್ಯಾನಿಂಗ್ 13 ರನ್ ಗಳಿಸಿದರೆ, ಶೆಫಾಲಿ ವರ್ಮಾ 4 ರನ್ ಗಳಿಸಿ ಔಟಾದರು. ಜೆಸ್ ಜೊನಾಸೆನ್ 13 ರನ್ ಗಳಿಸಿ ಔಟಾದರೆ, ಜೆಮಿಮಾ ರೋಡ್ರಿಗಸ್ 30 ರನ್ ಗಳಿಸಿದರು. ಅನ್ನಾಬೆಲ್ ಸದರ್ಲ್ಯಾಂಡ್ ಕೇವಲ 2 ರನ್ ಗಳಿಸಿದರೆ, ಮಾರಿಜನ್ನೆ ಕಾಪ್ 26 ಎಸೆತಗಳಲ್ಲಿ 40 ರನ್ ಗಳಿಸಿ ಹೋರಾಟ ಕೊಟ್ಟರು.
ನಿಕ್ಕಿ ಪ್ರಸಾದ್ 23 ಎಸೆತಗಳಲ್ಲಿ ಅಜೇಯ 25 ರನ್ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲುವಿನ ಆಸೆ ಮೂಡಿಸಿದರೂ ತಂಡದ ಸೋಲು ತಪ್ಪಿಸಲು ಆಗಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ದುರಾದೃಷ್ಟ ಹೆಗಲೇರಿದೆ. ಸತತವಾಗಿ ಮೂರು ವರ್ಷ ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದರೂ ಒಂದು ಬಾರಿ ಕೂಡ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನು ಒತ್ತಡಕ್ಕೆ ಸಿಲುಕಿ ಸೋತಿದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.












Click it and Unblock the Notifications