ಎಂಎಸ್ ಧೋನಿ ವಿಚಾರದಲ್ಲಿ ಸಿಎಸ್ಕೆ ಮ್ಯಾನೇಜ್ಮೆಂಟ್ ಮಹಾಮೋಸ; ರೊಚ್ಚಿಗೆದ್ದ ಭಾರತೀಯ ಮಾಜಿ ಕ್ರಿಕೆಟರ್
CSK MS Dhoni: ಇನ್ನೇನು ಐಪಿಎಲ್ 2026 ಹಬ್ಬ ಮುಕ್ತಾಯದ ಹಂತದಲ್ಲಿದೆ. ಆದರೆ ಈ ಸೀಸನ್ ಪೂರ್ತಿ ಚೆನ್ನೈ ಸೂಪರ್ ಕಿಂಗ್ಸ್ ಪರ ಸ್ಟಾರ್ ಆಟಗಾರ ಎಂಎಸ್ ಧೋನಿ ಅವರು ಆಡದಿರುವುದು ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಅವರ ಅಲಭ್ಯತೆ ಕುರಿತು ಮ್ಯಾನೇಜ್ಮೆಂಟ್ ನೀಡಿದ ಕಾರಣಗಳಿಗೆ ಭಾರತದ ಮಾಜಿ ಕ್ರಿಕೆಟರ್ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದು ಯಾವ ಲೆವೆಲ್ಗೆ ಅಂದ್ರೆ ಅಭಿಮಾನಿಗಳಿಗೆ ಮೋಸ ಮಾಡಿದೆ ಎಂಬ ರೀತಿಯಲ್ಲಿ ಟೀಕಿಸಿದ್ದಾರೆ.
ಟೂರ್ನಿ ಆರಂಭಕ್ಕೂ ಮುನ್ನವೇ ಧೋನಿ ಅವರು ಗಾಯದ ಸಮಸ್ಯೆಗೆ ಒಳಗಾದರು. ಇದರಿಂದಾಗಿ ಅವರು ಮೊದಲ ಎರಡು ವಾರಗಳ ಕಾಲ ಆಡುವುದಿಲ್ಲ ಎಂದು ಸಿಎಸ್ಕೆ ಮ್ಯಾನೇಜ್ಮೆಂಟ್ ತಿಳಿಸಿತ್ತು. ಚೇತರಿಸಿಕೊಳ್ಳುತ್ತಿದ್ದ ಸಮಯದಲ್ಲಿ ಅವರು ಮತ್ತೆ ಅದೇ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ತಂಡದ ಕೋಚ್ ಮಾಹಿತಿ ನೀಡಿದ್ದರು. ಇದರಿಂದಾಗಿ ಅವರು ಮೈದಾನಕ್ಕೆ ಮರಳುವಿಕೆ ಮತ್ತಷ್ಟು ವಿಳಂಬವಾಯಿತು.

ಧೋನಿ ಮೈದಾನಕ್ಕೆ ಬರಲು ಕಾರಣ ಏನು?
ಟೂರ್ನಿಯ ಕೊನೆಯ ಹಂತದಲ್ಲಿ ಧೋನಿ ಅವರು ಹೆಬ್ಬೆರಳಿನ ಗಾಯದಿಂದ ಬಳಲುತ್ತಿದ್ದಾರೆ ಎಂದು ಮ್ಯಾನೇಜ್ಮೆಂಟ್ ತಿಳಿಸಿತ್ತು. ಇನ್ನೂ ಮೇ 18ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಲೀಗ್ ಪಂದ್ಯಕ್ಕಾಗಿ ಧೋನಿ ಚೆಪಾಕ್ ಮೈದಾನಕ್ಕೆ ಬಂದಿದ್ದರೂ ಅವರು ಪಂದ್ಯವಾಡಲು ಬರಲಿಲ್ಲ. ಬದಲಾಗಿ ಪಂದ್ಯದ ಬಳಿಕ ಕೇವಲ ಫೋಟೋ ಶೂಟ್ ಮತ್ತು ಅಭಿಮಾನಿಗಳಿಗೆ ಮುಖ ತೋರಿಸುವ ಸಲುವಾಗಿ ಮೈದಾನಕ್ಕೆ ಆಗಮಿಸಿದ್ದರು.
ಪಂದ್ಯಕ್ಕೂ ಮುನ್ನವೇ ಕ್ಯಾಂಪ್ ತೊರೆದ 'ಥಲಾ'
ಇನ್ನೂ ಮೇ 21ರಂದು ಅಹಮದಾಬಾದ್ನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಅನುಭವಿಸಿದ ಸೋಲಿನಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2026ರ ಪ್ಲೇಆಫ್ ರೇಸ್ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಈ ನಿರ್ಣಾಯಕ ಪಂದ್ಯಕ್ಕೂ ಮುನ್ನವೇ ಎಂ.ಎಸ್.ಧೋನಿ ತಂಡದ ಕ್ಯಾಂಪ್ ತೊರೆದಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಕೋಚ್ ಮೈಕಲ್ ಹಸ್ಸಿ ಹೇಳಿದ್ದೇನು?
ಗುಜರಾತ್ ಟೈಟಾನ್ಸ್ ವಿರುದ್ಧ 89 ರನ್ಗಳ ಭಾರಿ ಅಂತರದಿಂದ ಸೋತ ಸಿಎಸ್ಕೆ ಈ ಬಾರಿಯ ಟೂರ್ನಿಯಲ್ಲಿ ತನ್ನ ಹೋರಾಟವನ್ನು ಕೊನೆಗೊಳಿಸಿತು. ಇನ್ನೂ ಹೆಬ್ಬೆರಳಿನ ಗಾಯದಿಂದ ಬಳಲುತ್ತಿದ್ದ ಧೋನಿ ಅಹಮದಾಬಾದ್ನಲ್ಲಿ ನಡೆದ ಪಂದ್ಯಕ್ಕೂ ಮುನ್ನವೇ ಮನೆಗೆ ಮರಳಿದ್ದರು. ಪ್ಲೇಆಫ್ಗೆ ಅರ್ಹತೆ ಪಡೆದರೆ ಮಾತ್ರ ಅವರು ತಂಡಕ್ಕೆ ಮರಳಿ ಸೇರಿಕೊಳ್ಳಲಿದ್ದಾರೆ ಎಂದು ಕೋಚ್ ಮೈಕಲ್ ಹಸ್ಸಿ ತಿಳಿಸಿದ್ದರು.
ಸಿಎಸ್ಕೆ ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶ
ಮೈದಾನದಲ್ಲಿ ಧೋನಿ ಅವರ ಅನುಪಸ್ಥಿತಿ ಮತ್ತು ಸಿಎಸ್ಕೆ ತಂಡದ ಈ ನೀರಸ ಪ್ರದರ್ಶನವು ಲಕ್ಷಾಂತರ ಅಭಿಮಾನಿಗಳಿಗೆ ತೀವ್ರ ನಿರಾಸೆ ತಂದಿದೆ. ಇಡೀ ಸೀಸನ್ನಲ್ಲಿ ಧೋನಿ ಒಂದೂ ಪಂದ್ಯ ಆಡದಿರುವುದು ಚರ್ಚೆಗೆ ಗ್ರಾಸವಾಗಿದೆ. ಇನ್ನೂ 1983ರ ವಿಶ್ವಕಪ್ ವಿಜೇತ ತಂಡದ ಆಟಗಾರ ಮತ್ತು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೃಷ್ಣಮಾಚಾರಿ ಶ್ರೀಕಾಂತ್ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ಬಗ್ಗೆ ಮಾತನಾಡಿದ್ದು, 'ಎಂಎಸ್ ಧೋನಿ ವಿಶ್ವದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್ ಧೋನಿ ಅವರ ಲಭ್ಯತೆಯ ಬಗ್ಗೆ ಅಭಿಮಾನಿಗಳಿಗೆ ಮತ್ತು ಕ್ರೀಡಾಲೋಕಕ್ಕೆ ಮೊದಲೇ ಹೆಚ್ಚಿನ ಸ್ಪಷ್ಟತೆಯನ್ನು ನೀಡಬೇಕಿತ್ತು,' ಎಂದು ಶ್ರೀಕಾಂತ್ ಹೇಳಿದ್ದಾರೆ.
'ಅಭಿಮಾನಿಗಳೊಗೆ ಮೋಸ ಮಾಡಿದ ಮ್ಯಾನೇಜ್ಮೆಂಟ್'
'ಮ್ಯಾನೇಜ್ಮೆಂಟ್ನವರು ಧೋನಿ ಮುಂದಿನ ಪಂದ್ಯಕ್ಕೆ ಸಿದ್ಧರಾಗುತ್ತಾರೆ ಎಂದು ಪದೇ ಪದೇ ಹೇಳುತ್ತಲೇ ಬಂದರು. ಅದಾದ ನಂತರ ಧೋನಿ ನೆಟ್ಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಯಾವುದೋ ವಿಡಿಯೋ ತೋರಿಸಿ ಅಭಿಮಾನಿಗಳೊಗೆ ಮಂಕುಬೂದಿ ಎರಚುವ ಕೆಲಸ ಮಾಡಿದರು. ಆಮೇಲೆ ಅವರಿಗೆ ಮತ್ತೆ ಗಾಯವಾಗಿದೆ ಎಂದು ಹೇಳುತ್ತಾ ಕಾಲ ಕಳೆದರು. ಮೊದಲು ಇಂತಹ ಮೂರ್ಖತನದ ಕೆಲಸಗಳನ್ನು ನಿಲ್ಲಿಸಬೇಕು. ಅದರ ಬದಲಿಗೆ ಧೋನಿ ಈ ಇಡೀ ಸೀಸನ್ ಆಡುವುದಿಲ್ಲ ಎಂದು ನೇರವಾಗಿ ಹೇಳಬೇಕಿತ್ತು,' ಎಂದು ಶ್ರೀಕಾಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ ನಾಯಕ ಋತುರಾಜ್ ಗಾಯಕ್ವಾಡ್ ಅವರು 'ಧೋನಿ ಮುಂದಿನ ಪಂದ್ಯಕ್ಕೆ ಲಭ್ಯವಿರುತ್ತಾರೆ ಎಂದು ಹೇಳುತ್ತಲೇ ಬಂದರು. ಮ್ಯಾನೇಜ್ಮೆಂಟ್ ಮತ್ತು ನಾಯಕ ಯಾವುದೇ ವಿಚಾರವನ್ನು ಮುಚ್ಚಿಡಬಾರದಿತ್ತು. ಅವರು ಈ ಇಡೀ ಸೀಸನ್ ಆಡುವುದಿಲ್ಲ ಎಂದು ನೀವು ನೇರವಾಗಿ ಹೇಳಿದ್ದರೆ ಅಭಿಮಾನಿಗಳು ಅದನ್ನು ಒಪ್ಪಿಕೊಂಡು ಸುಮ್ಮನಾಗುತ್ತಿದ್ದರು,' ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ ಐಪಿಎಲ್ ಇತಿಹಾಸದ 19 ಸೀಸನ್ಗಳಲ್ಲಿ ಎಂಎಸ್ ಧೋನಿ ಅವರು ಒಂದು ಪಂದ್ಯವನ್ನು ಆಡದ ಮೊದಲ ಸೀಸನ್ ಇದಾಗಿದೆ. ಸಿಎಸ್ಕೆ ತಂಡವು ಪ್ಲೇಆಫ್ಗೆ ಅರ್ಹತೆ ಪಡೆಯದ ಕಾರಣ ಈ ಸೀಸನ್ನಲ್ಲಿ ಧೋನಿ ಬ್ಯಾಟಿಂಗ್ ನೋಡುವ ಅಭಿಮಾನಿಗಳ ಆಸೆ ಕೊನೆಗೂ ಈಡೇರದಂತಾಗಿದೆ. ಜೊತೆಗೆ ಮ್ಯಾನೇಜ್ಮೆಂಟ್ ಮುಚ್ಚಿಟ್ಟ ವಿಚಾರದ ಕುರಿತು ಆಕ್ರೋಶಗಳು ಭುಗಿಲೆದ್ದಿವೆ.












Click it and Unblock the Notifications