Ind vs Eng: ಟಿ20 ಸರಣಿಗೆ ಭಾರತ ತಂಡ; ವಾಪಸಾದ ಶಮಿ, ಪಂತ್‌ಗೆ ಗೇಟ್‌ಪಾಸ್!
ಜನವರಿ 22ರಿಂದ ಪ್ರಾರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಐದು ಟಿ20 ಪಂದ್ಯಗಳ ಸರಣಿಗೆ ಬಿಸಿಸಿಐ ಭಾರತ ತಂಡವನ್ನು ಘೋಷಿಸಿದೆ. ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಗಾಯಗೊಂಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದ ವೇಗದ ಬೌಲರ್ ಮೊಹಮ್ಮದ್ ಶಮಿ ಭಾರತ ತಂಡಕ್ಕೆ ವಾಪಸಾತಿ ಮಾಡಿದ್ದಾರೆ. ಐಪಿಎಲ್‌ನ ದುಬಾರಿ ಆಟಗಾರ ರಿಷಬ್ ಪಂತ್‌ಗೆ ಭಾರತ ಟಿ20 ತಂಡದಿಂದ ಗೇಟ್‌ಪಾಸ್ ನೀಡಲಾಗಿದೆ.
ಮೊಹಮ್ಮದ್ ಶಮಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡ ಬಳಿಕ ದೇಶೀಯ ಕ್ರಿಕೆಟ್‌ಗೆ ವಾಪಸಾತಿ ಮಾಡಿದ್ದರು. ಮೊಣಕಾಲಿನ ಊತದ ಸಮಸ್ಯೆ ಕಾಣಿಸಿಕೊಂಡ ಬಳಿಕ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗಿಡಲಾಗಿತ್ತು. ಆದರೆ ಸೈಯದ್ ಮುಷ್ತಾಕ್ ಅಲಿ, ವಿಜಯ್ ಹಜಾರೆ ಟ್ರೋಫಿಯಲ್ಲಿ ಬಂಗಳಾ ತಂಡಕ್ಕೆ ಆಡುವ ಮೂಲಕ ಶಮಿ ತಾವು ಫಿಟ್ ಆಗಿರುವ ಸಂದೇಶ ನೀಡಿದ್ದರು.

ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಭಾರತ ಬೌಲಿಂಗ್ ವಿಭಾಗಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಈಗ ಶಮಿ ವಾಪಸಾತಿ ಮಾಡಿರುವುದು ತಂಡದ ಬೌಲಿಂಗ್‌ಗೆ ಶಕ್ತಿ ತಂದಿದೆ.
ರಿಷಬ್ ಪಂತ್‌ಗೆ ಗೇಟ್‌ಪಾಸ್
ಅಚ್ಚರಿ ಎನ್ನುವಂತೆ ಇಂಗ್ಲೆಂಡ್ ವಿರುದ್ದದ ಟಿ20 ಸರಣಿಗೆ ರಿಷಬ್ ಪಂತ್‌ರನ್ನು ಆಯ್ಕೆ ಮಾಡಿಲ್ಲ. ಧ್ರುವ್ ಜುರೆಲ್ ಮತ್ತು ಸಂಜು ಸ್ಯಾಮ್ಸನ್‌ರನ್ನು ವಿಕೆಟ್ ಕೀಪರ್ ಗಳಾಗಿ ಆಯ್ಕೆ ಮಾಡಲಾಗಿದೆ. ರಿಷಬ್ ಪಂತ್‌ರನ್ನು ಕಳಪೆ ಫಾರ್ಮ್ ಕಾರಣಕ್ಕಾಗಿ ಹೊರಗಿಡಲಾಗಿದೆಯಾ ಅಥವಾ ಅವರಿಗೆ ವಿಶ್ರಾಂತಿ ನೀಡಿದೆಯಾ ಎನ್ನುವ ಬಗ್ಗೆ ಬಿಸಿಸಿಐ ಯಾವುದೇ ಸ್ಪಷ್ಟನೆ ನೀಡಿಲ್ಲ.
ಆಲ್‌ರೌಂಡರ್ ಶಿವಂ ದುಬೆ ತಂಡದಲ್ಲಿ ಅವಕಾಶ ಪಡೆಯಲು ವಿಫಲರಾಗಿದ್ದು, ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ನಿತೀಶ್ ಕುಮಾರ್ ರೆಡ್ಡಿ ಅವರಿಗೆ ಟಿ20 ಸರಣಿಯಲ್ಲಿ ಅವಕಾಶ ನೀಡಲಾಗಿದೆ.
ಉಳಿದಂತೆ ಸೂರ್ಯಕುಮಾರ್ ಯಾದವ್ ನಾಯಕತ್ವದ ಅದೇ ತಂಡವನ್ನೇ ಮತ್ತೆ ಆಯ್ಕೆ ಮಾಡಲಾಗಿದೆ. ಮೊಹಮ್ಮದ್ ಶಮಿ ಜೊತೆಗೆ, ಹರ್ಷಿತ್ ರಾಣಾ ಮತ್ತು ಅರ್ಷದೀಪ್ ಸಿಂಗ್ ವೇಗದ ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದ್ದು, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ ಮತ್ತು ವಾಷಿಂಗ್ಟನ್ ಸುಂದರ್ ಪ್ರಮುಖ ಸ್ಪಿನ್ನರ್ ಆಗಿದ್ದಾರೆ.
ಟಿ20 ಸರಣಿಗೆ ಮಾತ್ರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಘೋಷಿಸಲು ಇನ್ನಷ್ಟು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಧ್ರುವ್ ಜುರೆಲ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ (ಉಪನಾಯಕ), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ವಾಷಿಂಗ್ಟನ್ ಸುಂದರ್.












Click it and Unblock the Notifications