MI Vs DC: ಅಂತೂ ಮುಂಬೈ ಇಂಡಿಯನ್ಸ್ ನಾಯಕನಾಗಿ ಮೊದಲ ಪಂದ್ಯ ಗೆದ್ದ ಹಾರ್ದಿಕ್ ಪಾಂಡ್ಯ
ಸತತ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದ್ದ ಮುಂಬೈ ಇಂಡಿಯನ್ಸ್ ಕೊನೆಗೂ ಐಪಿಎಲ್ 2024ರ ಮೊದಲ ಗೆಲುವು ಸಾಧಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 29 ರನ್‌ಗಳ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್ ಗೆಲುವಿನ ಖಾತೆ ತೆರೆಯಿತು.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. 7 ಓವರ್ ಗಳಲ್ಲಿ ಈ ಜೋಡಿ ಮೊದಲ ವಿಕೆಟ್‌ಗೆ 80 ರನ್ ಕಲೆಹಾಕಿತು.

ರೋಹಿತ್ ಶರ್ಮಾ 27 ಎಸೆತಗಳಲ್ಲಿ 6 ಬೌಂಡರಿ 3 ಸಿಕ್ಸರ್ ಸಹಿತ 49 ರನ್ ಗಳಿಸಿದರು. ಇಶಾನ್ ಕಿಶಾನ್ 23 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 42 ರನ್ ಗಳಿಸಿದರು. ಗಾಯಗೊಂಡ ಬಳಿಕ ಚೇತರಿಸಿಕೊಂಡ ಸೂರ್ಯಕುಮಾರ್ ಯಾದವ್ ಮೊದಲ ಪಂದ್ಯದಲ್ಲೇ ಸೊನ್ನೆಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಡೇವಿಡ್, ಶೆಫರ್ಡ್ ಸ್ಫೋಟಕ ಇನ್ನಿಂಗ್ಸ್
ನಾಯಕ ಹಾರ್ದಿಕ್ ಪಾಂಡ್ಯ 33 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 39 ರನ್ ಗಳಿಸಿದರು. ತಿಲಕ್ ವರ್ಮಾ 6 ರನ್ ಗಳಿಸಿ ಔಟಾದರು. ಕೊನೆಯ ಓವರ್ ಗಳಲ್ಲಿ ಟಿಮ್ ಡೇವಿಡ್ ಮತ್ತು ರೊಮಾರಿಯೋ ಶೆಫರ್ಡ್ ಅಬ್ಬರಿಸಿದರು. ಟಿಮ್ ಡೇವಿಡ್ 21 ಎಸೆತಗಳಲ್ಲಿ 2 ಬೌಂಡರಿ 4 ಸಿಕ್ಸರ್ ಸಹಿತ ಅಜೇಯ 45 ರನ್ ಗಳಿಸಿದರೆ, ರೊಮಾರಿಯೋ ಶೆಫರ್ಡ್ 10 ಎಸೆತಗಳಲ್ಲಿ 3 ಬೌಂಡರಿ 4 ಸಿಕ್ಸರ್ ಸಹಿತ ಅಜೇಯ 39 ರನ್ ಗಳಿಸಿದರು.
20ನೇ ಓವರ್ ನಲ್ಲಿ 32 ರನ್ ಸಿಡಿಸಿದ ಶೆಫರ್ಡ್ ಮುಂಬೈ ತಂಡ ದೊಡ್ಡ ಮೊತ್ತ ಕಲೆಹಾಕಲು ಕಾರಣವಾಯಿತು. ಅಂತಿಮವಾಗಿ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 234 ರನ್ ಗಳಿಸಿತು.
ಟ್ರಿಸ್ಟನ್ ಸಬ್ಸ್ ಹೋರಾಟ ವ್ಯರ್ಥ
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್, 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 205 ರನ್ ಗಳಿಸುವ ಮೂಲಕ 29 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಡೇವಿಡ್ ವಾರ್ನರ್ 8 ಎಸೆತಗಳಲ್ಲಿ 10 ರನ್ ಗಳಿಸಿ ವಿಫಲವಾದರು. ಪೃಥ್ವಿ ಶಾ 40 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಹಿತ 66 ರನ್ ಗಳಿಸಿದರು.
ಅಭಿಷೇಕ್ ಪೊರೆಲ್ 31 ಎಸೆತಗಳಲ್ಲಿ 41 ರನ್ ಗಳಿಸಿದರೆ, ಟ್ರಿಸ್ಟಾನ್ ಸಬ್ಸ್ 25 ಎಸೆತಗಳಲ್ಲಿ 3 ಬೌಂಡರಿ 7 ಸಿಕ್ಸರ್ ಸಹಿತ ಅಜೇಯ 71 ರನ್ ಗಳಿಸಿದರೂ ತಂಡಕ್ಕೆ ಗೆಲುವು ತಂದುಕೊಡಲು ಆಗಲಿಲ್ಲ. ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ಹಾರ್ದಿಕ್ ಪಾಂಡ್ಯ ಮೊದಲ ಬಾರಿಗೆ ಗೆಲುವಿನ ನಗೆ ಬೀರಿದರು.












Click it and Unblock the Notifications