ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಫಾರ್ಮ್ ಬಗ್ಗೆ ಮುಖ್ಯ ಕೋಚ್ ಜಯವರ್ಧನೆ ಹೇಳಿದ್ದೇನು ಗೊತ್ತಾ?
Mumbai Indians IPL 2026: ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ (ಏಪ್ರಿಲ್ 23) ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಹೋನಾಯ ಸೋಲನುಭವಿಸಿತು. ಈ ಸೋಲಿನ ನಂತರ, ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಇದು ಇದೀಗ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.
ಋತುರಾಜ್ ಗಾಯಕ್ವಾಡ್ ನಾಯಕತ್ವದ ಸಿಎಸ್‌ಕೆ ವಿರುದ್ಧ ಮುಂಬೈ ತಂಡವು 103 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿದೆ. ಇದು ಮುಂಬೈ ತಂಡಕ್ಕೆ ತನ್ನ ತವರಿನ ಮೈದಾನದಲ್ಲಿ ಎದುರಾದ ಅತಿ ದೊಡ್ಡ ಸೋಲಾಗಿದೆ. ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಯವರ್ಧನೆ, ತಂಡದ ಸದ್ಯದ ಪರಿಸ್ಥಿತಿಯನ್ನು ಒಪ್ಪಿಕೊಂಡಿದ್ದಾರೆ.

ಐಪಿಎಲ್ 2026ರ ಸೀಸನ್‌ನ ಆರಂಭದಲ್ಲಿ ತಮ್ಮ ತಂಡವು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅವರು ತಿಳಿಸಿದ್ದಾರೆ. ಮತ್ತೊಂದೆಡೆ ಮುಂಬೈ ಇಂಡಿಯನ್ಸ್‌ನಂತಹ ಬಲಿಷ್ಠ ತಂಡವು ತವರು ಮೈದಾನದಲ್ಲೇ ಇಷ್ಟು ದೊಡ್ಡ ಅಂತರದ ಸೋಲು ಕಂಡಿರುವುದು ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ಮುಂಬೈ ಲೆಕ್ಕಾಚಾರ ತಲೆಕೆಳಗಾಗಿಸಿದ ಸಂಜು
ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಜಯವರ್ಧನೆ ಅವರಿಗೆ ಸಾಕಷ್ಟು ಕಠಿಣ ಪ್ರಶ್ನೆಗಳು ಎದುರಾದವು. ಮುಂಬೈ ಇಂಡಿಯನ್ಸ್ ತಂಡವು ಕಳೆದ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಅದೇ ಆತ್ಮವಿಶ್ವಾಸದೊಂದಿಗೆ ಈ ಪಂದ್ಯದಲ್ಲೂ ಕಣಕ್ಕಿಳಿದಿತ್ತು ಮತ್ತು ಅದೇ ಲಯವನ್ನು ಮುಂದುವರಿಸುವ ಭರವಸೆಯಲ್ಲಿತ್ತು. ಆದರೆ, ಸಂಜು ಸ್ಯಾಮ್ಸನ್ ಸಿಡಿಸಿದ ಅಜೇಯ ಸ್ಫೋಟಕ ಶತಕವು ಮುಂಬೈ ಇಂಡಿಯನ್ಸ್ ಬೌಲರ್‌ಗಳ ಲೆಕ್ಕಾಚಾರವನ್ನೆಲ್ಲ ತಲೆಕೆಳಗಾಗಿಸಿತು.
ಎಂಐ ಕಳಪೆ ಪ್ರದರ್ಶನದ ಬಗ್ಗೆ ಕೋಚ್ ಹೇಳಿದ್ದೇನು?
"ಆಡಿದ 7 ಪಂದ್ಯಗಳಲ್ಲಿ ಕೇವಲ 2 ಗೆಲುವುಗಳೊಂದಿಗೆ 4 ಅಂಕಗಳನ್ನು ಹೊಂದಿರುವುದು ತಂಡದ ಹಿನ್ನಡೆಯನ್ನು ತೋರಿಸುತ್ತದೆ. ತಂಡವು ಸತತವಾಗಿ ಒಳ್ಳೆಯ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ನಾವು ಉತ್ತಮ ಲಯ ಕಂಡುಕೊಂಡಿದ್ದೇವೆ ಎಂದು ಭಾವಿಸಿದ್ದೆವು, ಆದರೆ ಮತ್ತೆ ಅದನ್ನು ಕಳೆದುಕೊಂಡಿದ್ದೇವೆ," ಎಂದು ಜಯವರ್ಧನೆ ಅಸಮಾಧಾನ ಹೊರಹಾಕಿದರು.
ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ವಿಫಲ
"ಇಷ್ಟು ದೊಡ್ಡ ಅಂತರದಲ್ಲಿ ಸೋತಾಗ ಅದನ್ನು ವಿಶ್ಲೇಷಿಸುವುದು ಕೂಡ ಕಷ್ಟವಾಗುತ್ತದೆ. ನಾವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪವರ್‌ಪ್ಲೇ ಅವಧಿಯಲ್ಲಿ ವೈಫಲ್ಯ ಕಂಡೆವು. ಇದರಿಂದಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಮುಂದಿನ ಏಳು ಪಂದ್ಯಗಳಿಗೆ ನಾವು ಏನು ಮಾಡಬೇಕೆಂದುಬರ ಕುರಿತು ಗಂಭೀರವಾಗಿ ಕುಳಿತು ಯೋಚಿಸಬೇಕಿದೆ. ನಮಗೆ ಏನು ಅಗತ್ಯವಿದೆ ಎಂಬುದು ನಿಖರವಾಗಿ ತಿಳಿದಿದೆ, ನಾವು ಅದರಂತೆಯೇ ಯೋಜನೆ ರೂಪಿಸಿ ಮುಂದಿನ ಪಂದ್ಯಗಳಲ್ಲಿ ಶಕ್ತಿಮೀರಿ ಪ್ರಯತ್ನಿಸುತ್ತೇವೆ," ಎಂದು ಅವರು ತಿಳಿಸಿದರು.
ಮುಂಬೈ ಇಂಡಿಯನ್ಸ್ ಕೋಚ್‌ಗೆ ಈ ಸೀಸನ್‌ನಲ್ಲಿ ತಂಡದ ಬೌಲಿಂಗ್ ವಿಭಾಗವೇ ಅತಿದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬೌಲಿಂಗ್ ವಿಭಾಗವು ಕೆಲವೊಮ್ಮೆ ಮಾತ್ರ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಅಲ್ಲದೆ, ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಅಂದರೆ ದುಬಾರಿ ಓವರ್ ಮಾಡಿದ ತಂಡಗಳಲ್ಲಿ ಮುಂಬೈ ಅಗ್ರಸ್ಥಾನದಲ್ಲಿದೆ ಎಂಬುದನ್ನು ಅವರು ಹೇಳಿದ್ದಾರೆ.
"ಈ ಏಳು ಪಂದ್ಯಗಳನ್ನು ಗಮನಿಸಿದರೆ ನಮ್ಮ ಬೌಲಿಂಗ್‌ನಲ್ಲಿ ದೊಡ್ಡ ಸಮಸ್ಯೆ ಇರುವುದು ಎದ್ದು ಕಾಣುತ್ತದೆ. ಅಹಮದಾಬಾದ್‌ನಲ್ಲಿ ಬೌಲಿಂಗ್ ಚೆನ್ನಾಗಿತ್ತು ಮತ್ತು ಇಲ್ಲಿಯೂ ಕೂಡ ಕೆಲವು ಓವರ್‌ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ ಎಂದು ಭಾವಿಸುತ್ತೇನೆ. ಆದರೆ, ಸಮಸ್ಯೆಯಿರುವುದು ನಮ್ಮ ಯೋಜನೆಗಳ ಅನುಷ್ಠಾನ ಮತ್ತು ಸ್ಥಿರತೆಯಲ್ಲಿ," ಎಂದು ಅವರು ಹೇಳಿದರು.
ಹಾರ್ದಿಕ್ ನಾಯಕತ್ವದ ಬಗ್ಗೆ ಕೋಚ್ ಹೇಳಿದ್ದೇನು?
ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಈ ಸೀಸನ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಆದರೂ ತಂಡದ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಅವರು ಯಾರನ್ನೂ ದೂಷಿಸಲು ನಿರಾಕರಿಸಿದ್ದಾರೆ. ಹಾರ್ದಿಕ್ ಅವರ ನಾಯಕತ್ವದ ಒತ್ತಡ ಅಥವಾ ಫಾರ್ಮ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಇದು ಕೇವಲ ಒಬ್ಬ ವ್ಯಕ್ತಿಯ ಸಮಸ್ಯೆಯಲ್ಲ, ಬದಲಿಗೆ ಇಡೀ ತಂಡವಾಗಿ ನಾವು ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಎಡವಿದ್ದೇವೆ. ಆರಂಭಿಕ ವಿಕೆಟ್ ಪಡೆಯುವಲ್ಲಿ ಮತ್ತು ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ನಾವು ಒಟ್ಟಾರೆಯಾಗಿ ಸೋತಿದ್ದೇವೆ" ಎಂದು ಸ್ಪಷ್ಟಪಡಿಸಿದ್ದಾರೆ.
"ಬ್ಯಾಟಿಂಗ್ ವಿಭಾಗದಲ್ಲೂ ಅಲ್ಲಲ್ಲಿ ಉತ್ತಮ ಪ್ರದರ್ಶನ ಬಂದರೂ ಸ್ಥಿರತೆಯ ಕೊರತೆ ಕಾಡುತ್ತಿದೆ. ಮುಂದಿನ ಪಂದ್ಯಗಳಲ್ಲಿ ಸುಧಾರಣೆಗೆ ಒತ್ತು ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ. ಸದ್ಯ ಅಂಕಪಟ್ಟಿಯಲ್ಲಿ ಹಿನ್ನಡೆ ಅನುಭವಿಸಿರುವ ಮುಂಬೈ ತಂಡಕ್ಕೆ ಐದು ದಿನಗಳ ಕಾಲಾವಕಾಶವಿದ್ದು, ಏಪ್ರಿಲ್ 29ರಂದು ವಾಂಖೆಡೆ ಮೈದಾನದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯಲಿರುವ ಪಂದ್ಯದ ಮೂಲಕ ಗೆಲುವಿನ ಹಳಿಗೆ ಮರಳುವ ಭರವಸೆಯಲ್ಲಿದೆ.












Click it and Unblock the Notifications