Major League Cricket: ಪೂರನ್ ಅಬ್ಬರ: ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಆದ ಎಂಐ ನ್ಯೂಯಾರ್ಕ್
ಇಂಡಿಯನ್ ಪ್ರೀಮಿಯರ್ ಲೀಗ್‌ನ ಯಶಸ್ವಿ ಫ್ರಾಂಚೈಸಿಯಾದ ಮುಂಬೈ ಇಂಡಿಯನ್ಸ್ ಒಡೆತನದ ಎಂಐ ನ್ಯೂಯಾರ್ಕ್ ತಂಡ ಅಮೆರಿಕ ನೆಲದಲ್ಲಿ ನಡೆದ ಮೊದಲ ಟಿ20 ಲೀಗ್‌ನಲ್ಲಿ ಚಾಂಪಿಯನ್ ಆಗಿದೆ. ಹೌದು, ಯುಎಸ್‌ನಲ್ಲಿ ನಡೆದ ಮೇಜರ್ ಲೀಗ್ ಕ್ರಿಕೆಟ್‌ನ ಮೊದಲ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಸಿಯಾಟಲ್ ಓರ್ಕಾಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದಿ ಎಂಐ ನ್ಯೂಯಾರ್ಕ್ ಪ್ರಶಸ್ತಿ ಗೆದ್ದುಕೊಂಡಿದೆ.
ಡಲ್ಲಾಸ್‌ನ ಗ್ರಾಂಡ್ ಪ್ರೈರಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸಿಯಾಟಲ್ ಓರ್ಕಾಸ್ ವಿರುದ್ಧ ಟಾಸ್ ಗೆದ್ದ ಎಂಐ ನ್ಯೂಯಾರ್ಕ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಕ್ವಿಂಟನ್ ಡಿ ಕಾಕ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಸಿಯಾಟಲ್ ಓರ್ಕಾಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತು.

ಕ್ವಿಂಟನ್ ಡಿ ಕಾಕ್ 52 ಎಸೆತಗಳಲ್ಲಿ 9 ಬೌಂಡರಿ 4 ಸಿಕ್ಸರ್ ಸಹಿತ 87 ರನ್ ಸಿಡಿಸಿ ಮಿಂಚಿದರು. ಶುಭಂ ರಂಜನೆ 16 ಎಸೆತಗಳಲ್ಲಿ 29, ಡ್ವಾನ್ ಪ್ರೆಟೋರಿಯಸ್ 7 ಎಸೆತಗಳಲ್ಲಿ 21 ರನ್ ಗಳಿಸಿದ್ದು ಹೊರತುಪಡಿಸಿ ಉಳಿದ ಬ್ಯಾಟರ್ ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾದರು.
ಟ್ರೆಂಟ್ ಬೋಲ್ಟ್ ಮತ್ತು ರಶೀದ್ ಖಾನ್ ತಲಾ ಮೂರು ವಿಕೆಟ್ ಪಡೆಯುವ ಮೂಲಕ ಸಿಯಾಟಲ್ ಓರ್ಕಾಸ್ ತಂಡಕ್ಕೆ ಕಡಿವಾಣ ಹಾಕಿದರು. ಸ್ಟೀವನ್ ಟೇಲರ್ ಮತ್ತು ಡೇವಿಡ್ ವೀಸ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಪೂರನ್ ಅಬ್ಬರಕ್ಕೆ ಕಂಗಾಲಾದ ಓಕಾರ್ಸ್
ಸವಾಲಿನ ಮೊತ್ತವನ್ನು ಬೆನ್ನತ್ತಿದ ಎಂಐ ನ್ಯೂಯಾರ್ಕ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಸ್ಟೀವನ್ ಟೇಲರ್ ಶೂನ್ಯಕ್ಕೆ ಔಟಾದರೆ, ಶಾಯನ್ ಜಹಾಂಗಿರ್ 10 ರನ್ ಗಳಿಸಿ ಔಟಾದರು. ನಂತರ ಬಂದ ನಾಯಕ ನಿಕೋಲಸ್ ಪೂರನ್ ಅಬ್ಬರಿಸಿದರು.
ಕೇವಲ 55 ಎಸೆತಗಳಲ್ಲಿ 10 ಬೌಂಡರಿ 13 ಸಿಕ್ಸರ್ ಸಹಿತ ಅಜೇಯ 137 ರನ್ ಗಳಿಸಿ ಸೀಯಾಟಲ್ ಓಕಾರ್ಸ್ ತಂಡದ ಬೌಲರ್ ಗಳ ಬೆವರಿಳಿಸಿದರು. ಪೂರನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಎಂಐ ನ್ಯೂಯಾರ್ಕ್ ಕೇವಲ 16 ಓವರ್ ಗಳಲ್ಲೇ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು. ಡೆವಾಲ್ಡ್ ಬ್ರೆವಿಸ್ 18 ಎಸೆತಗಳಲ್ಲಿ 20 ರನ್ ಗಳಿಸಿದರೆ, ಟಿಮ್ ಡೇವಿಡ್ ಅಜೇಯ 10 ರನ್ ಗಳಿಸಿ ನಾಯಕನಿಗೆ ಜೊತೆಯಾದರು.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 5 ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡದ ಫ್ರಾಂಚೈಸಿ ಒಡೆತನದ ಎಂಐ ನ್ಯೂಯಾರ್ಕ್ ಅಮೆರಿಕದಲ್ಲಿ ನಡೆದ ಟಿ20 ಲೀಗ್‌ನ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಜೇಯ ಶತಕ ಸಿಡಿಸಿದ ಪೂರನ್ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರೆ, ಆಲ್‌ರೌಂಡರ್ ಕೆಮರಾನ್ ಗ್ರೀನ್ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು.












Click it and Unblock the Notifications