ನಾಲ್ಕು ಮೇಡನ್ ಓವರ್, 3 ವಿಕೆಟ್; ವಿಶ್ವಕಪ್‌ನಲ್ಲಿ ಹೊಸ ದಾಖಲೆ ಬರೆದ ಆರ್‌ಸಿಬಿ ಬೌಲರ್!
ಸೋಮವಾರ ಟ್ರಿನಿಡಾಡ್‌ನಲ್ಲಿ ನಡೆದ ಪಪುವಾ ನ್ಯೂಗಿನಿಯಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಬೌಲರ್ ಲಾಕಿ ಫರ್ಗುಸನ್ ಹೊಸ ವಿಶ್ವದಾಖಲೆ ಬರೆದಿದ್ದಾರೆ. ನಾಲ್ಕು ಓವರ್ ಮೇಡನ್ ಮಾಡಿದ ಅವರು, ಮೂರು ವಿಕೆಟ್ ಪಡೆದುಕೊಂಡರು.
ಲಾಕಿ ಫರ್ಗುಸನ್ ಟಿ20 ವಿಶ್ವಕಪ್‌ನಲ್ಲಿ ನಾಲ್ಕು ಓವರ್ ಮೇಡನ್ ಮಾಡಿದ ಮೊದಲ ಬೌಲರ್ ಎನ್ನುವ ದಾಖಲೆ ಬರೆದಿದ್ದಾರೆ. ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ಬೌಲರ್ ಆಗಿದ್ದಾರೆ. ಇದಕ್ಕೂ ಮೊದಲು ಕೆನಡಾದ ಸಾದ್ ಬಿನ್ ಜಾಫರ್ ಮಾತ್ರ 2021ರಲ್ಲಿ ಪನಾಮ ವಿರುದ್ಧ ಈ ಸಾಧನೆ ಮಾಡಿದ್ದರು.

ಸೋಮವಾರ ನಡೆದ ಟಿ20 ವಿಶ್ವಕಪ್‌ನ ನ್ಯೂಜಿಲೆಂಡ್‌ನ ಅಂತಿಮ ಪಂದ್ಯದಲ್ಲಿ ಪಪುವಾ ನ್ಯೂಗಿನಿ ವಿರುದ್ಧ ಲಾಕಿ ಫರ್ಗುಸನ್ ಅವರು ತಮ್ಮ ನಾಲ್ಕು ಓವರ್‌ಗಳಲ್ಲಿ ಒಂದೇ ಒಂದು ರನ್ ಬಿಟ್ಟುಕೊಡದೆ ನಂಬಲಾಗದ ಬೌಲಿಂಗ್ ಮಾಡಿದರು.
ಫರ್ಗುಸನ್ ತನ್ನ ಬೌಲಿಂಗ್‌ನಲ್ಲಿ ಮೂರು ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು, ಈ ಮೂಲಕ ಪಂದ್ಯಾವಳಿಯ ಇತಿಹಾಸದಲ್ಲಿ ಈ ಅಸಾಮಾನ್ಯ ಸಾಧನೆಯನ್ನು ಸಾಧಿಸಿದ ಮೊದಲ ಆಟಗಾರರಾದರು.
78 ರನ್‌ಗಳಿಗೆ ಪಪುವಾ ನ್ಯೂಗಿನಿಯಾ ಆಲೌಟ್
ಟರೌಬಾದಲ್ಲಿ ಮಳೆಯಿಂದ ತಡವಾದ ಪಂದ್ಯದಲ್ಲಿ ಟಾಸ್ ಗೆದ್ದ ಕೇನ್ ವಿಲಿಯಮ್ಸನ್ ಬೌಲಿಂಗ್ ಮಾಡಲು ನಿರ್ಧರಿಸಿದರು. ಪಪುವಾ ನ್ಯೂಗಿನಿಯಾ ಕೇವಲ 78 ರನ್‌ಗಳಿಗೆ ಆಲೌಟ್ ಆಯಿತು.
ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ ಫರ್ಗುಸನ್ ಅವರನ್ನು ಪರಿಚಯಿಸಲಾಯಿತು. ಅವರು ಪಂದ್ಯದ ತನ್ನ ಮೊದಲ ಎಸೆತದಲ್ಲಿಯೇ ಒಂದು ವಿಕೆಟ್ ಪಡೆದರು, ನಾಯಕ ಅಸ್ಸಾದ್ ವಾಲಾ ಅವರನ್ನು 6 ರನ್‌ಗಳಿಗೆ ಔಟ್ ಮಾಡಿದರು.
ಟಿ20 ವಿಶ್ವಕಪ್‌ನಿಂದ ಹೊರಬಿದ್ದ ನ್ಯೂಜಿಲೆಂಡ್
ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಕೆಟ್ಟ ಪ್ರದರ್ಶನ ನೀಡಿದೆ. ಅಫ್ಘಾನಿಸ್ತಾನದ ವಿರುದ್ಧ ಹೀನಾಯ ಸೋಲಿನ ಬಳಿಕ ನ್ಯೂಜಿಲೆಂಡ್ ಸುಧಾರಿಸಿಕೊಳ್ಳಲಿಲ್ಲ, ಬಳಿಕ ವೆಸ್ಟ್ ಇಂಡೀಸ್ ವಿರುದ್ಧ ಕೂಡ ಸೋತಿದ್ದರಿಂದ ಅವರು ಟೂರ್ನಿಯಿಂದ ಹೊರಬೀಳಬೇಕಾಯಿತು.
ಸಿ ಗುಂಪಿನಲ್ಲಿ ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ತಂಡಗಳು ಸೂಪರ್ 8 ಹಂತಕ್ಕೆ ಕ್ವಾಲಿಫೈ ಆಗಿದ್ದು, ನ್ಯೂಜಿಲೆಂಡ್ ಪಂದ್ಯಾವಳಿಯಿಂದ ಹೊರಬಿದ್ದಿದೆ.
ಭಾರತ, ಯುಎಸ್‌ಎ, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ತಂಡಗಳು ಸೂಪರ್ 8 ಹಂತಕ್ಕೆ ಅರ್ಹತೆ ಪಡೆದುಕೊಂಡಿವೆ.
ಜೂನ್ 19ರಿಂದ ಸೂಪರ್ 8 ಹಂತದ ಪಂದ್ಯಗಳು ಆರಂಭವಾಗಲಿದೆ. ಯುಎಸ್‌ಎ ಮತ್ತು ದಕ್ಷಿಣ ಆಫ್ರಿಕಾ ಸೂಪರ್ 8 ಹಂತದ ಮೊದಲ ಪಂದ್ಯವನ್ನಾಡಲಿವೆ.












Click it and Unblock the Notifications