Kuldeep Yadav: 92 ವರ್ಷಗಳ ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಕುಲದೀಪ್ ಯಾದವ್
ಗುರುವಾರ ಧರ್ಮಶಾಲಾದಲ್ಲಿ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದ 1 ನೇ ದಿನದಂದು ಭಾರತ ಸ್ಪಷ್ಟ ಮೇಲುಗೈ ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 218 ರನ್‌ಗಳಿಗೆ ಆಲೌಟ್ ಆಗಿದೆ. ಕುಲದೀಪ್ ಯಾದವ್, ಅಶ್ವಿನ್ ಇಂಗ್ಲೆಂಡ್ ತಂಡಕ್ಕೆ ಮಾರಕವಾದರು.
ಕುಲದೀಪ್ ಯಾದವ್ 5 ವಿಕೆಟ್ ಪಡೆಯುವ ಮೂಲಕ ಮಿಂಚಿದರು. 72 ರನ್ ನೀಡಿದ ಅವರು 5 ವಿಕೆಟ್ ಪಡೆದು, ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡಿದರು. ಉತ್ತಮ ಆರಂಭ ಪಡೆದ ಇಂಗ್ಲೆಂಡ್ ಬಳಿಕ ಅಲ್ಪ ಮೊತ್ತಕ್ಕೆ ಕುಸಿಯಿತು. ಕುಲದೀಪ್ ಯಾದವ್‌ಗೆ ಜೊತೆಯಾದ ರವಿಚಂದ್ರನ್ ಅಶ್ವಿನ್ 4 ವಿಕೆಟ್ ಪಡೆದರೆ, ಜಡೇಜಾ ಒಂದು ವಿಕೆಟ್ ಪಡೆದುಕೊಂಡರು.

ಹೊಸ ದಾಖಲೆ ಬರೆದ ಕುಲದೀಪ್ ಯಾದವ್
ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ 5 ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 50 ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 50 ವಿಕೆಟ್ ಪಡೆದ ಭಾರತೀಯ ಆಟಗಾರ ಎನ್ನುವ ದಾಖಲೆ ಬರೆದರು.
ಕುಲದೀಪ್ ಅವರು ಕೇವಲ 1871 ಎಸೆತಗಳಲ್ಲಿ 50 ವಿಕೆಟ್ ಪಡೆದರು. ಅಕ್ಷರ್ ಪಟೇಲ್ (2205) ಮತ್ತು ಜಸ್ಪ್ರೀತ್ ಬುಮ್ರಾ (2520) ಅವರ ಸಾಧನೆಯನ್ನು ಹಿಂದೆ ಹಾಕಿದರು. ಭಾರತದ ಟೆಸ್ಟ್ ಇತಿಹಾಸದಲ್ಲಿ ಬೌಲರ್ 2000 ಕ್ಕಿಂತ ಕಡಿಮೆ ಎಸೆತಗಳಲ್ಲಿ 50 ಟೆಸ್ಟ್ ವಿಕೆಟ್ ಪಡೆದ ಮೊದಲ ಭಾರತೀಯ ಕ್ರಿಕೆಟಿಗೆ ಎನಿಸಿಕೊಂಡರು.
ಇಂಗ್ಲೆಂಡ್ 218 ರನ್‌ಗಳಿಗೆ ಆಲೌಟ್ ಆದ ನಂತರ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಅರ್ಧಶತಕ ಗಳಿಸಿದರು. ನಾಯಕ ರೋಹಿತ್ (52 ಬ್ಯಾಟಿಂಗ್, 83 ಎಸೆತ) ಮತ್ತು ಜೈಸ್ವಾಲ್ (57 ರನ್) ಆರಂಭಿಕ ವಿಕೆಟ್‌ಗೆ ಕೇವಲ 20.4 ಓವರ್‌ಗಳಲ್ಲಿ 104 ರನ್‌ಗಳನ್ನು ಕಲೆ ಹಾಕಿತು. ಭಾರತ ಈಗ 83 ರನ್‌ಗಳ ಹಿನ್ನಡೆಯಲ್ಲಿದೆ.
ಜೈಸ್ವಾಲ್ ತಮ್ಮ ಅರ್ಧಶತಕದ ನಂತರ ಔಟಾದರು, ಆಫ್ ಸ್ಪಿನ್ನರ್ ಶೋಯೆಬ್ ಬಶೀರ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಬೆನ್ ಫೋಕ್ಸ್ ಸ್ಟಂಪ್ ಮಾಡಿದರು. ಶುಭಮನ್ ಗಿಲ್ ಔಟಾಗದೆ 26 ರನ್ ಗಳಿಸಿ ರೋಹಿತ್‌ಗೆ ಜೊತೆಯಾಗಿದ್ದಾರೆ.












Click it and Unblock the Notifications