ವೈಭವ್ ಸೂರ್ಯವಂಶಿ ಆಡಿಸದಿದ್ದಕ್ಕೆ ನನ್ನ ಪತ್ನಿ ಕೋಪ ಮಾಡಿಕೊಂಡಿದ್ದಾಳೆ.. ಗಂಭೀರ್ ವಿರುದ್ಧ ಮಾಜಿ ಕ್ರಿಕೆಟರ್ ಅಸಮಾಧಾನ
India Vs Afghanistan: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಂಗಳವಾರ (ಸೆಪ್ಟೆಂಬರ್ 15) ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಎರಡನೇ ಟಿ20 ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನ ಕಳೆದ ಮ್ಯಾಚ್ ವೇಳೆ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರನ್ನು ತಂಡದಿಂದ ಹೊರಗಿಟ್ಟ ಕುರಿತು ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಕೆ.ಶ್ರೀಕಾಂತ್ ಅವರು ಪ್ರತಿಕ್ರಿಯಿಸಿ, ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಹೆಡ್ ಕೋಚ್ ಗೌತಮ್ ಗಂಭೀರ್ ನೇತೃತ್ವದ ಭಾರತೀಯ ಕ್ರಿಕೆಟ್ ಮ್ಯಾನೇಜ್‌ಮೆಂಟ್ ನಿರ್ಧಾರಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಟಿ20 ಪಂದ್ಯದ ಆಡುವ 11ರ ಬಳಗದಿಂದ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರನ್ನು ಹೊರಗಿಡಲಾಗಿದ್ದು, ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ಓಪನರ್‌ಗಳಾಗಿ ಕಣಕ್ಕಿಳಿಸಿದ ನಿರ್ಧಾರವನ್ನು ವಿರೋಧಿಸಿದ್ದಾರೆ.

ಬೆಂಚ್ ಕಾದಿದ್ದ ವೈಭವ್ ಸೂರ್ಯವಂಶಿ
15 ವರ್ಷದ ಉದಯೋನ್ಮುಖ ಆಟಗಾರ ವೈಭವ್ ಸೂರ್ಯವಂಶಿ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ 'ಪ್ಲೇಯರ್ ಆಫ್ ದಿ ಸೀರಿಸ್' ಪ್ರಶಸ್ತಿ ಪಡೆದಿದ್ದರು. ಆದರೂ ಅವರನ್ನು ಅಫ್ಘಾನಿಸ್ತಾನ ವಿರುದ್ಧ ಮೊದಲ ಪಂದ್ಯದಲ್ಲೇ ಬೆಂಚ್ ಕಾಯಿಸಿದ್ದು ಸರಿಯಲ್ಲ ಎಂದು ಶ್ರೀಕಾಂತ್ ಅವರು ಗೌತರ್ ಗಂಭೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷ್ಣಮಾಚಾರಿ ಶ್ರೀಕಾಂತ್ ಅಚ್ಚರಿ ಹೇಳಿಕೆ
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, 'ಮೊದಲ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಆಡದ ಕಾರಣ ನಾವು ಪಂದ್ಯ ನೋಡುವುದನ್ನು ಬಿಟ್ಟು ಸಿನಿಮಾ ನೋಡಲು ಶುರುಮಾಡಿದೆವು. ಕಳೆದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರನನ್ನೇ ತಂಡದಿಂದ ಹೊರಗಿಡಲಾಗಿದೆಯಲ್ಲ ಎಂದು ನನ್ನ ಪತ್ನಿಯೇ ಗರಂ ಆಗಿ ಪ್ರಶ್ನಿಸುತ್ತಿದ್ದಳು. ಸೂರ್ಯವಂಶಿ ಅವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಮುಂದಿನ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡಿದರೂ, ರನ್ ಗಳಿಸದಿದ್ದರೆ ಮತ್ತೆ ನನ್ನನ್ನು ತೆಗೆದುಹಾಕುತ್ತಾರೇನೋ' ಎಂಬ ಭಯದಲ್ಲೇ ಅವರು ಆಡಬೇಕಾಗುತ್ತದೆ,' ಎಂದು ಗುಡುಗಿದ್ದಾರೆ.
ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ವಿರುದ್ಧ ಆಕ್ರೋಶ
ಸಂಜು ಸ್ಯಾಮ್ಸನ್ ಅವರನ್ನು ನಿರಂತರವಾಗಿ ತಂಡದಿಂದ ಒಳಗೆ-ಹೊರಗೆ ಮಾಡುತ್ತಿರುವ ಮ್ಯಾನೇಜ್‌ಮೆಂಟ್ ಧೋರಣೆಯನ್ನು ಶ್ರೀಕಾಂತ್ ಖಂಡಿಸಿದ್ದಾರೆ. ಇಂಗ್ಲೆಂಡ್ ಪ್ರವಾಸದ ವೇಳೆ ಮೂರು ಪಂದ್ಯಗಳ ನಂತರ ಸಂಜು ಜಾಗಕ್ಕೆ ವೈಭವ್ ಸೂರ್ಯವಂಶಿ ಅವರನ್ನು ತರಲಾಗಿತ್ತು. ಬಳಿಕ ಜಿಂಬಾಬ್ವೆ ಸರಣಿಗೆ ಸ್ಯಾಮ್ಸನ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.
ಭಾರತ ಎಡವುತ್ತಿರುವುದು ಎಲ್ಲಿ?
ಈ ಬಗ್ಗೆ ಮಾತನಾಡಿದ ಶ್ರೀಕಾಂತ್ ಅವರು, 'ಟೀಮ್ ಮ್ಯಾನೇಜ್‌ಮೆಂಟ್ ಸಂಜು ಸ್ಯಾಮ್ಸನ್ ಜೀವನದ ಜೊತೆ ಆಟವಾಡುತ್ತಿದೆ. ಸ್ಯಾಮ್ಸನ್ ಅವರ ಸ್ಥಿತಿ ನೋಡಿ ನನಗೆ ಅಯ್ಯೋ ಅನಿಸುತ್ತಿದೆ. ಒಂದೋ ಅವರಿಗೆ ಸತತವಾಗಿ ಹಲವು ಪಂದ್ಯಗಳಲ್ಲಿ ಅವಕಾಶ ನೀಡಿ, ಇಲ್ಲವೇ ವೈಭವ್ ಸೂರ್ಯವಂಶಿಗೆ ಸತತ ಅವಕಾಶ ನೀಡಿ. ಅದನ್ನು ಬಿಟ್ಟು ಇಬ್ಬರಿಗೂ ಇಲ್ಲಿ ಎರಡೆರಡು ಪಂದ್ಯಗಳ ಅವಕಾಶ ನೀಡುವುದು ಆಟಗಾರರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಭಾರತ ಮಾಡುತ್ತಿರುವ ದೊಡ್ಡ ತಪ್ಪು ಇದೇ,' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಯುವ ಆಟಗಾರರಿಗೆ ಮ್ಯಾನೇಜ್‌ಮೆಂಟ್ ಕನಿಷ್ಠ ಸುರಕ್ಷತೆ ಮತ್ತು ಸತತ ಅವಕಾಶಗಳನ್ನು ನೀಡಬೇಕು. ಪದೇ ಪದೇ ಆಟಗಾರರನ್ನು ಬದಲಾಯಿಸುವುದರಿಂದ ಆರಂಭಿಕ ಬ್ಯಾಟರ್‌ಗಳಲ್ಲಿ ಗೊಂದಲ ಮತ್ತು ಗೊಂದಲ ಉಂಟಾಗುತ್ತದೆ ಎಂಬುದು ಶ್ರೀಕಾಂತ್ ಅವರ ಹೇಳಿಕೆಯ ಅರ್ಥವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಇದೀಗ ಶ್ರೀಕಾಂತ್ ಅವರು ವೈಭವ್ ಸೂರ್ಯವಂಶಿ ಬಗ್ಗೆ ನೀಡಿರುವ ಹೇಳಿಕೆ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ. ಇಂದು ಭಾರತವು ಅಫ್ಘಾನ್ ವಿರುದ್ಧ ಎರಡನೇ ಪಂದ್ಯ ಆಡುತ್ತಿದ್ದು, ಇದರಲ್ಲಾದರೂ ಅವಕಾಶ ನೀಡುತ್ತಾರಾ ಎಂದು ಕಾದುನೋಡಬೇಕಿದೆ.


Click it and Unblock the Notifications
