KL Rahul: ಕನ್ನಡಿಗ ಕೆಎಲ್ ರಾಹುಲ್ ನಿಯತ್ತನಿಗೆ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ ಫಿದಾ, ಟ್ವಿಟ್ ಭಾರಿ ವೈರಲ್
KL Rahul: ಐಪಿಎಲ್ 2027ರ ಆವೃತ್ತಿಗೆ ಇನ್ನೂ ತುಂಬಾ ಸಮಯವಿದ್ದು, ಇದಕ್ಕೂ ಮುನ್ನ ಆಟಗಾರರ ವಿನಿಯಮ ಪ್ರಕ್ರಿಯೆಗಳು ತೆರೆಮರೆಯಲ್ಲಿ ನಡೆದಿವೆ. ಇದನ್ನ ಬೆನ್ನಲ್ಲೇ ಕನ್ನಡಿಗ ಕೆಎಲ್ ರಾಹುಲ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತೊರೆಯಲಿದ್ದಾರೆ ಎಂಬ ವದಂತಿ ಹರಡಿದ್ದು, ಇದೀಗ ಈ ವಿಚಾರಕ್ಕೆ ಮಹತ್ವದ ಸ್ಪಷ್ಟನೆ ಸಿಕ್ಕಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಪಿಎಲ್ 2027ರ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಹಿರಿಯ ಕ್ರಿಕೆಟಿಗ, ಕನ್ನಡಿಗ ಕೆ.ಎಲ್.ರಾಹುಲ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಬೇರೆ ಫ್ರಾಂಚೈಸಿಗೆ ಸ್ಥಳಾಂತರಗೊಳ್ಳಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಇದೀಗ ಈ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ಕೆಕೆಆರ್‌ಗೆ ಸೇರ್ಪಡೆ ವದಂತಿಗೆ ಬ್ರೇಕ್
2026ರ ಆವೃತ್ತಿಯ ಮುಕ್ತಾಯದ ನಂತರ, ವಿವಿಧ ತಂಡಗಳ ನಡುವೆ ಆಟಗಾರರ ವಿನಿಮಯ (ಟ್ರೇಡ್) ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವದಂತಿಗಳು ಹರಿದಾಡುತ್ತಿದ್ದವು. ಅದರಲ್ಲೂ ವಿಶೇಶವಾಗಿ ಸ್ಟಾರ್ ಪ್ಲೇಯರ್, ಕನ್ನಡಿಗ ಕೆಎಲ್ ರಾಹುಲ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.
ಡೆಲ್ಲಿ ಹಾಗೂ ಲಕ್ನೋ ನಡುವೆ ಮಹತ್ವದ ಡೀಲ್
ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಪ್ರಮುಖ ಒಪ್ಪಂದ ನಡೆದಿದ್ದು, ಕುಲದೀಪ್ ಯಾದವ್ ಲಕ್ನೋಗೆ ಹಾಗೂ ರಿಷಭ್ ಪಂತ್ ಮರಳಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರ್ಪಡೆಯಾಗಿದ್ದರು. ಪಂತ್ ಆಗಮನದಿಂದಾಗಿ ರಾಹುಲ್ ತಂಡ ತೊರೆಯಬಹುದು ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ಸಹ-ಮಾಲೀಕ ಪಾರ್ಥ್ ಜಿಂದಾಲ್ ಅವರು ಈ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ರಾಹುಲ್ ಬಗ್ಗೆ ಪಾರ್ಥ್ ಜಿಂದಾಲ್ ಮಹತ್ವದ ಟ್ವಿಟ್
ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿದ ಜಿಂದಾಲ್ ಅವರು, ರಾಹುಲ್ ಅವರನ್ನು 'ಕ್ಲಚ್ ಪ್ಲೇಯರ್' ಅಂದರೆ ಕಠಿಣ ಪರಿಸ್ಥಿತಿಯಲ್ಲಿ ನೆರವಾಗುವ ಆಟಗಾರ ಎಂದು ಬಣ್ಣಿಸಿದ್ದಾರೆ. 'ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ಕೆ.ಎಲ್. ರಾಹುಲ್ ಅತ್ಯಂತ ನಂಬಿಕಸ್ಥ ಆಟಗಾರ. ಅವರು ಯಾವಾಗಲೂ ತಮಗಿಂತ ತಂಡಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ನಮ್ಮ ನಡುವೆ ಇನ್ನೂ ಸಾಧಿಸಬೇಕಾದ ಕಾರ್ಯಗಳು ಉಳಿದಿವೆ. ಡೆಲ್ಲಿ ಫ್ರಾಂಚೈಸಿಯನ್ನು ಮತ್ತಷ್ಟು ಉತ್ತುಂಗಕ್ಕೆ ಒಯ್ಯಲು ನಾವು ಒಟ್ಟಾಗಿ ಶ್ರಮಿಸಲಿದ್ದೇವೆ,' ಎಂದು ಬರೆದುಕೊಂಡಿದ್ದಾರೆ.
ಕೆಎಲ್ ರಾಹುಲ್ ಟ್ವಿಟ್‌ನಲ್ಲೇನಿದೆ?
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಕೆಎಲ್ ರಾಹುಲ್ ಅವರು, 'ಧನ್ಯವಾದಗಳು, ಮುಂಬರುವ ಆವೃತ್ತಿಗಾಗಿ ಕಾತುರದಿಂದ ಕಾಯುತ್ತಿದ್ದೇನೆ,' ಎಂದು ತಿಳಿಸುವ ಮೂಲಕ ತಾವು ಡೆಲ್ಲಿ ತಂಡದಲ್ಲೇ ಉಳಿಯುವುದನ್ನು ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ. ಇದರಿಂದ ಇಷ್ಟು ಎದಿದ್ದ ವದಂತಿಗಳಿಗೆ ಬ್ರೇಕ್ ಬಿದ್ದಂತಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕೆಎಲ್ ರಾಹುಲ್ ಸಾಧನೆ
ರಾಹುಲ್ 2025ರ ಹರಾಜಿನಲ್ಲಿ ₹14 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ್ದರು. ಕಳೆದ ಎರಡು ಆವೃತ್ತಿಗಳಲ್ಲಿ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದು, 2025ರಲ್ಲಿ 539 ರನ್ ಹಾಗೂ 2026 ರಲ್ಲಿ 593 ರನ್ ಗಳಿಸಿ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದರು. 2026ರ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಅಜೇಯ 152 ರನ್ ಗಳಿಸಿದ್ದು ಅವರ ಶ್ರೇಷ್ಠ ಇನಿಂಗ್ಸ್ ಆಗಿತ್ತು.
ಮುಂಬೈ ತೊರೆಯುತ್ತಾರಾ ಹಾರ್ದಿಕ್ ಪಾಂಡ್ಯ?
ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕುರಿತಾಗಿಯೂ ಟ್ರೇಡ್ ಮಾತುಕತೆಗಳು ನಡೆಯುತ್ತಿವೆ. ಆದರೆ ಯಾವುದೇ ಸೂಕ್ತ ಒಪ್ಪಂದ ಕುದುರದ ಕಾರಣ ಅವರು ನಾಯಕತ್ವವಿಲ್ಲದಿದ್ದರೂ ಮುಂಬೈ ತಂಡದಲ್ಲೇ ಮುಂದುವರಿಯುವ ಸಾಧ್ಯತೆಗಳಿವೆ. ರೋಹಿತ್ ಶರ್ಮಾ ಅವರ ಉಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ಮುಂಬರುವ ಆವೃತ್ತಿಗೆ ನಾಯಕತ್ವ ಬದಲಾವಣೆಗೆ ಸಜ್ಜಾಗುತ್ತಿದೆ ಎನ್ನುವ ಮಾಹಿತಿ ಇದೆ.


Click it and Unblock the Notifications
