KKR vs DC: ಕೆಕೆಆರ್ ಸ್ಪಿನ್ ಬಲೆಗೆ ಬಿದ್ದ ಡೆಲ್ಲಿ ಕ್ಯಾಪಿಟಲ್ಸ್
ದೆಹಲಿಯ ಅರುಣ್ ಜೈಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ 14 ರನ್‌ಗಳ ಗೆಲುವು ಸಾಧಿಸಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಕೆಕೆಆರ್ ಕೊನೆಗೂ ಗೆಲುವಿನ ಲಯಕ್ಕೆ ಮರಳಿದ್ದು ಈ ಗೆಲುವಿನ ಮೂಲಕ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 204 ರನ್ ಕಲೆಹಾಕಿತು. ಸ್ಪೋಟಕ ಆರಂಭ ಪಡೆದರೂ ಅಂತಿಮ ಓವರ್ ಗಳಲ್ಲಿ ಸತತವಾಗಿ ವಿಕೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಕೆಕೆಆರ್ ತಂಡವನ್ನು 204 ರನ್‌ಗಳಿಗೆ ಕಟ್ಟಿಹಾಕಿತು.

ರೆಹಮಾನುಲ್ಲಾ ಗುರ್ಬಾಜ್ 12 ಎಸೆತಗಳಲ್ಲಿ 26 ರನ್ ಗಳಿಸಿದರು. ಸುನಿಲ್ ನರೈನ್ 16 ಎಸೆತಗಳಲ್ಲಿ 26 ರನ್ ಗಳಿಸಿದರು. ನಾಯಕ ಅಜಿಂಕ್ಯ ರಹಾನೆ 26 ರನ್ ಗಳಿಸಿದರೆ, ಆಂಗ್ಕ್ರಿಶ್ ರಘುವಂಶಿ 44 ರನ್ ಗಳಿಸಿದರು. ರಿಂಕು ಸಿಂಗ್ 36 ರನ್ ಗಳಿಸಿದರೆ, ರಸೆಲ್ 17 ರನ್ ಗಳಿಸುವ ಮೂಲಕ ಕೆಕೆಆರ್ 200 ರನ್‌ಗಳ ಗಡಿ ದಾಟಲು ಕೊಡುಗೆ ನೀಡಿದರು. ಮಿಚೆಲ್ ಸ್ಟಾರ್ಕ್ 3 ವಿಕೆಟ್ ಪಡೆದು ಮಿಂಚಿದರೆ, ವಿಪ್ರಜ್ ನಿಗಮ್ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು. ದುಷ್ಮಂತ್ ಚಮೀರಾ ಒಂದು ವಿಕೆಟ್ ಪಡೆದರು.
ಸ್ಪಿನ್ ಬಲೆಗೆ ಬಿದ್ದ ಡೆಲ್ಲಿ ಕ್ಯಾಪಿಟಲ್ಸ್
205 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಅಭಿಷೇಕ್ ಪೊರೆಲ್ (4 ರನ್) ವಿಕೆಟ್ ಕಳೆದುಕೊಂಡಿತು. ಬಳಿಕ ಬಂದ ಕರುಣ್ ನಾಯರ್ ಕೂಡ 15 ರನ್ ಗಳಿಸಿ ಔಟಾದರು. ಕೆಎಲ್ ರಾಹುಲ್ 7 ರನ್ ಗಳಿಸಿದ್ದಾಗ ರನೌಟ್‌ಗೆ ಬಲಿಯಾದರು. ಆದರೆ ಫಾಫ್ ಡುಪ್ಲೆಸಿಸ್ ಮತ್ತು ನಾಯಕ ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಗೆಲುವಿನ ಕಡೆ ಕೊಂಡೊಯ್ದರು. 4ನೇ ವಿಕೆಟ್‌ಗೆ ಈ ಜೋಡಿ 76 ರನ್ ಕಲೆಹಾಕಿದರು.
ಅಕ್ಷರ್ ಪಟೇಲ್ 23 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್ ಸಹಿತ 43 ರನ್ ಗಳಿಸಿ ಔಟಾದರು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ದಾರಿ ಕಳೆದುಕೊಂಡಿತು. ಕೆಕೆಆರ್ ಸ್ಪಿನ್ ಮಾಂತ್ರಿಕರಾದ ಸುನಿಲ್ ನರೈನ್, ವರುಣ್ ಚಕ್ರವರ್ತಿ ಹಾಗೂ ಅನುಕೂಲ್ ರಾಯ್ ಡೆಲ್ಲಿಯನ್ನು ಕಟ್ಟಿಹಾಕಿದರು. ಫಾಫ್ ಡುಪ್ಲೆಸಿಸ್ 45 ಎಸೆತಗಳಲ್ಲಿ 62 ರನ್ ಗಳಿಸಿ ಔಟಾದರು. ವಿಪ್ರಜ್ ನಿಗಮ್ 19 ಎಸೆತಗಳಲ್ಲಿ 38 ರನ್ ಗಳಿಸಿ ಹೋರಾಟ ನೀಡಿದರು ಡೆಲ್ಲಿ ಸೋಲು ತಪ್ಪಿಸಲು ಆಗಲಿಲ್ಲ. ಅಂತಿಮವಾಗಿ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 190 ರನ್ ಗಳಿಸುವ ಮೂಲಕ 14 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಸುನಿಲ್ ನರೈನ್ 3 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ 2 ವಿಕೆಟ್ ಪಡೆದುಕೊಂಡರು. ಅನುಕುಲ್ ರಾಯ್, ವೈಭವ್ ಅರೋರಾ ಮತ್ತು ಆಂಡ್ರೆ ರಸೆಲ್ ತಲಾ 1 ವಿಕೆಟ್ ಪಡೆದುಕೊಂಡರು.












Click it and Unblock the Notifications