ಕಬ್ಬಿನ ಕಾಕಂಬಿಯಿಂದ ರಸ್ತೆ ನಿರ್ಮಾಣ! ಕರ್ನಾಟಕದಲ್ಲಿ ಐಐಟಿ ರೂರ್ಕಿಯ ಹೊಸ ಪ್ರಯೋಗ, ವೆಚ್ಚ 20% ಇಳಿಸುವ ಹೊಸ ತಂತ್ರಜ್ಞಾನ
ಐಐಟಿ ರೂರ್ಕಿ ನಡೆಸಲಿರುವ ಈ ಹೊಸ ಪ್ರಯೋಗ ಸಕ್ಸಸ್ ಆದರೆ, ಕರ್ನಾಟಕ ರಾಜ್ಯವೇ ಪರಿಸರ ಸ್ನೇಹಿ, ಕಡಿಮೆ ವೆಚ್ಚದ ರಸ್ತೆ ನಿರ್ಮಾಣದಲ್ಲಿ ರೂವಾರಿ ಎನಿಸಲಿದೆ. ದೇಶಕ್ಕೆ ಮಾರ್ಗದರ್ಶನ ಮಾಡಲಿದೆ. ಅದೇನು ಅಂತ ನೋಡೋಣ.
ಭಾರತದಲ್ಲಿ ರಸ್ತೆ ನಿರ್ಮಾಣಕ್ಕೆ ಸಾಮಾನ್ಯವಾಗಿ ಬಳಸುವ ಪ್ರಮುಖ ವಸ್ತು ಬಿಟುಮೆನ್ (Bitumen). ಇದು ಕಚ್ಚಾ ತೈಲದಿಂದ ತಯಾರಾಗುವ ಉತ್ಪನ್ನ. ರಸ್ತೆ ಮೇಲ್ಮೈಗೆ ಗಟ್ಟಿತನ ಮತ್ತು ಬಾಳಿಕೆ ನೀಡುತ್ತದೆ. ಆದರೆ ಜಾಗತಿಕ ತೈಲ ಬೆಲೆ ಏರಿದ ಒರಿಣಾಮ ಇದರ ವೆಚ್ಚವೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇಂಧನ ಅವಲಂಬನೆ ಕಡಿಮೆ ಮಾಡಿ ಕಡಿಮೆ ವೆಚ್ಚದ ಮತ್ತು ಪರಿಸರ ಸ್ನೇಹಿ ಪರ್ಯಾಯದ ಮೂಲಕ ರಸ್ತೆ ನಿರ್ಮಾಣದ ಹುಡುಕಾಟ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಐಐಟಿ ರೂರ್ಕಿಯ (IIT Roorkee) ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ನಿಖಿಲ್ ಸಬೂ ಅವರು ಕರ್ನಾಟಕ ಸರ್ಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅವರು "ಬಯೋ-ಬಿಟುಮೆನ್" (Bio-Bitumen) ತಂತ್ರಜ್ಞಾನ ಬಳಸಿ ರಾಜ್ಯದಲ್ಲಿ ಪ್ರಾಯೋಗಿಕ ರಸ್ತೆ ನಿರ್ಮಾಣ ನಡೆಸುವಂತೆ ಸಲಹೆ ನೀಡಿದ್ದಾರೆ.
ಬಯೋ-ಬಿಟುಮೆನ್ ಎಂದರೇನು?
ಸಾಮಾನ್ಯ ಬಿಟುಮೆನ್‌ಗೆ ಪರ್ಯಾಯವಾಗಿ ಅಭಿವೃದ್ಧಿಪಡಿಸಲಾದ ಈ ಹೊಸ ವಸ್ತುವನ್ನು ಕಬ್ಬಿನ ಕಾಕಂಬಿ (Sugarcane Molasses) ಬಳಸಿ ತಯಾರಿಸಲಾಗುತ್ತದೆ. ಈ ಮಿಶ್ರಣದಲ್ಲಿ 75% ವರ್ಜಿನ್ ಬಿಟುಮೆನ್ ಹಾಗೂ 25% ಕಬ್ಬಿನ ಕಾಕಂಬಿ ಇರುತ್ತದೆ. ಕಬ್ಬಿನ ಕಾಕಂಬಿಯನ್ನು ವಿಶೇಷ ರಾಸಾಯನಿಕ ಪ್ರಕ್ರಿಯೆಯ ಮೂಲಕ ಬಿಟುಮೆನ್‌ಗೆ ಮಿಶ್ರಣ ಮಾಡಲಾಗುತ್ತದೆ. ಇದರಿಂದ ರಸ್ತೆ ನಿರ್ಮಾಣಕ್ಕೆ ಬೇಕಾಗುವ ಪೆಟ್ರೋಲಿಯಂ ಆಧಾರಿತ ಬಿಟುಮೆನ್ ಪ್ರಮಾಣ ಕಡಿಮೆಯಾಗುತ್ತದೆ.
ವೆಚ್ಚದಲ್ಲಿ ಎಷ್ಟು ಉಳಿತಾಯ?
ಈ ತಂತ್ರಜ್ಞಾನದ ಪ್ರಮುಖ ಆಕರ್ಷಣೆ ಅದರ ಕಡಿಮೆ ವೆಚ್ಚ. ಪ್ರಸ್ತುತ ವರ್ಜಿನ್ ಬಿಟುಮೆನ್ ಬೆಲೆ ಸುಮಾರು ಪ್ರತಿ ಕೆ.ಜಿ.ಗೆ ₹85 ಇದೆ. ಕಬ್ಬಿನ ಕಾಕಂಬಿ ಬೆಲೆ ಕೇವಲ ₹10 ರಿಂದ ₹15 ಇಷ್ಟೇ ಇದೆ. ಹೀಗಾಗಿ ಬಿಟುಮೆನ್‌ನ ಒಂದು ಭಾಗವನ್ನು ಕಾಕಂಬಿಯಿಂದ ಬದಲಿಸಿದರೆ ರಸ್ತೆ ನಿರ್ಮಾಣ ವೆಚ್ಚದಲ್ಲಿ ಸುಮಾರು 20% ವರೆಗೆ ಉಳಿತಾಯ ಸಾಧ್ಯ ಎಂದು ನಿಖಿಲ್ ಸಬೂ ತಿಳಿಸಿದ್ದಾರೆ. ರಸ್ತೆ ನಿರ್ಮಾಣದಂತಹ ದೊಡ್ಡ ಯೋಜನೆಗಳಲ್ಲಿ ಇದು ಸರ್ಕಾರದ ಮೂಲಸೌಕರ್ಯ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.
ಈ ತಂತ್ರಜ್ಞಾನಕ್ಕೆ ಏಕೆ ಈಗ ಮಹತ್ವ?
ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಏಷ್ಯಾದ ಭೂ ರಾಜಕೀಯ ಉದ್ವಿಗ್ನತೆಗಳಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ. ಕೆಲವು ವರ್ಷಗಳ ಹಿಂದೆ ಪ್ರತಿ ಟನ್ ಬಿಟುಮೆನ್ ಬೆಲೆ ಸುಮಾರು ₹45,000 ಇದ್ದರೆ, ಈಗ ಅದು ₹60,000ರ ಸುತ್ತಮುತ್ತ ಏರಿಳಿತ ಕಾಣುತ್ತಿದೆ. ಇದರಿಂದ ರಸ್ತೆ ನಿರ್ಮಾಣ ಇಲಾಖೆಗಳ ವೆಚ್ಚ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಕಡಿಮೆ ಬೆಲೆಯ ಪರ್ಯಾಯ ವಸ್ತುಗಳು ಸರ್ಕಾರಗಳ ಗಮನ ಸೆಳೆಯುತ್ತಿವೆ.
ಈ ತಂತ್ರಜ್ಞಾನದ ಮತ್ತೊಂದು ವಿಶೇಷತೆ ಎಂದರೆ ಇದನ್ನು ಅಳವಡಿಸಿಕೊಳ್ಳಲು ಹೊಸ ಕಾರ್ಖಾನೆಗಳು ಅಥವಾ ದುಬಾರಿ ಯಂತ್ರೋಪಕರಣಗಳ ಅಗತ್ಯವಿಲ್ಲ. ಈಗಾಗಲೇ ರಸ್ತೆ ನಿರ್ಮಾಣದಲ್ಲಿ ಬಳಸುತ್ತಿರುವ ಡ್ರಮ್ ಮಿಕ್ಸ್ ಪ್ಲಾಂಟ್‌ಗಳಲ್ಲಿಯೇ ಬಯೋ-ಬಿಟುಮೆನ್ ತಯಾರಿಸಬಹುದು. ಅಂದರೆ ಸರ್ಕಾರ ಅಥವಾ ಗುತ್ತಿಗೆದಾರರು ಹೆಚ್ಚುವರಿ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಬೇಕಾಗಿಲ್ಲ. ಮಿಶ್ರಣ ಮಾಡುವಾಗ ಸೂಕ್ತ ತಾಪಮಾನ ಕಾಪಾಡುವುದು ಮಾತ್ರ ಮುಖ್ಯವಾಗುತ್ತದೆ.
ಭಾರತಕ್ಕೆ ಏಕೆ ಅನುಕೂಲ?
ಭಾರತವು ವಿಶ್ವದಲ್ಲೇ ಎರಡನೇ ಅತಿದೊಡ್ಡ ಕಬ್ಬು ಉತ್ಪಾದಕ ರಾಷ್ಟ್ರವಾಗಿದೆ. ಪ್ರತಿ ವರ್ಷ ಸುಮಾರು 13 ರಿಂದ 14 ಮಿಲಿಯನ್ ಟನ್ ಕಬ್ಬಿನ ಕಾಕಂಬಿ ಉತ್ಪಾದನೆಯಾಗುತ್ತದೆ. ಸಕ್ಕರೆ ಉದ್ಯಮದ ಉಪ ಉತ್ಪನ್ನವಾಗಿರುವ ಈ ಕಾಕಂಬಿಯನ್ನು ರಸ್ತೆ ನಿರ್ಮಾಣದಲ್ಲಿ ಬಳಸಿದರೆ ರೈತರು ಮತ್ತು ಸಕ್ಕರೆ ಕಾರ್ಖಾನೆಗಳಿಗೂ ಹೆಚ್ಚುವರಿ ಮಾರುಕಟ್ಟೆ ಸಿಗುವ ಸಾಧ್ಯತೆ ಇದೆ.
ಈಗಾಗಲೇ ಯಶಸ್ವಿಯಾಗಿದೆಯೇ?
ಈ ತಂತ್ರಜ್ಞಾನ ಕೇವಲ ಪ್ರಯೋಗಾಲಯ ಮಟ್ಟದಲ್ಲೇ ಉಳಿದಿಲ್ಲ. ಈಗಾಗಲೇ ಮೂರು ಪ್ರಾಯೋಗಿಕ ರಸ್ತೆ ಯೋಜನೆಗಳಲ್ಲಿ ಇದನ್ನು ಬಳಸಲಾಗಿದೆ. ಅವುಗಳಲ್ಲಿ ಉತ್ತರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 709ADಯಲ್ಲಿ 650 ಮೀಟರ್ ಉದ್ದದ ರಸ್ತೆ ಹಾಗೂ ಉತ್ತರಾಖಂಡದ ಎರಡು ರಸ್ತೆ ವಿಭಾಗಗಳು ಸೇರಿವೆ.
2022ರ ನವೆಂಬರ್‌ನಲ್ಲಿ ನಿರ್ಮಿಸಲಾದ ಉತ್ತರ ಪ್ರದೇಶದ ರಸ್ತೆ ಸೇರಿದಂತೆ ಈ ಎಲ್ಲಾ ಪರೀಕ್ಷಾ ರಸ್ತೆಗಳು ಮೂರು ವರ್ಷಗಳಿಗೂ ಹೆಚ್ಚು ಕಾಲ ಭಾರೀ ವಾಹನ ಸಂಚಾರವನ್ನು ಸಹಿಸಿಕೊಂಡು ಯಾವುದೇ ಪ್ರಮುಖ ನಿರ್ವಹಣೆ ಅಗತ್ಯವಿಲ್ಲದೆ ಉತ್ತಮವಾಗಿ ಕಾರ್ಯನಿರ್ವಹಿಸಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಏನಾಗಬಹುದು?
ನಿಖಿಲ್ ಸಬೂ ಅವರು ಕರ್ನಾಟಕದ ಲೋಕೋಪಯೋಗಿ ಇಲಾಖೆ (PWD) ಹಾಗೂ ಮುಖ್ಯಮಂತ್ರಿಗಳ ಕಚೇರಿಗೆ ಪತ್ರ ಬರೆದು ಪ್ರಾಯೋಗಿಕ ರಸ್ತೆ ನಿರ್ಮಾಣಕ್ಕೆ ಅನುಮತಿ ಕೋರಿದ್ದಾರೆ. ಈ ಯೋಜನೆ ಜಾರಿಯಾದರೆ ಸ್ಥಳೀಯ ಹವಾಮಾನ, ಮಳೆ, ವಾಹನ ಸಂಚಾರ ಮತ್ತು ರಸ್ತೆ ಬಳಕೆಯ ಪರಿಸ್ಥಿತಿಗಳಲ್ಲಿ ಬಯೋ-ಬಿಟುಮೆನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಪರಿಶೀಲಿಸಬಹುದು. ಅದರ ಜೊತೆಗೆ ಐಐಟಿ ರೂರ್ಕಿ ತಾಂತ್ರಿಕ ನೆರವು ಮತ್ತು ಕಾರ್ಯಕ್ಷಮತೆ ಮೇಲ್ವಿಚಾರಣೆಯ ಜವಾಬ್ದಾರಿಯನ್ನೂ ವಹಿಸಿಕೊಳ್ಳಲು ಸಿದ್ಧವಿದೆ.
ಕಬ್ಬಿನ ಕಾಕಂಬಿಯಿಂದ ರಸ್ತೆ ನಿರ್ಮಿಸುವ ಈ ಬಯೋ-ಬಿಟುಮೆನ್ ತಂತ್ರಜ್ಞಾನ ಯಶಸ್ವಿಯಾದರೆ ರಸ್ತೆ ನಿರ್ಮಾಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಬಹುದು. ಇದು ರಸ್ತೆ ನಿರ್ಮಾಣ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ ಪೆಟ್ರೋಲಿಯಂ ಅವಲಂಬನೆಯನ್ನು ಇಳಿಸಬಹುದು, ಕೃಷಿ ಉತ್ಪನ್ನಗಳಿಗೆ ಹೊಸ ಬಳಕೆಯನ್ನು ಒದಗಿಸಬಹುದು ಮತ್ತು ಪರಿಸರ ಸ್ನೇಹಿ ಮೂಲಸೌಕರ್ಯ ನಿರ್ಮಾಣಕ್ಕೆ ದಾರಿ ಮಾಡಿಕೊಡಬಹುದು. ಕರ್ನಾಟಕದಲ್ಲಿ ಈ ಪ್ರಾಯೋಗಿಕ ಯೋಜನೆ ಅನುಮೋದನೆ ಪಡೆದರೆ, ಭವಿಷ್ಯದಲ್ಲಿ ದೇಶದ ಇತರ ರಾಜ್ಯಗಳಿಗೂ ಇದು ಮಾದರಿಯಾಗುವ ಸಾಧ್ಯತೆ ಇದೆ.
(ಬರಹ: ಭವಾನಿ ಭಟ್)














Click it and Unblock the Notifications