ಪ್ರಿಯಾಂಕ್ ಖರ್ಗೆ ರಾಜ್ಯಕ್ಕೆ ಗೃಹ ಸಚಿವರೋ, ಕೇಂದ್ರಕ್ಕೋ? RSS ನೋಂದಣಿ ಆಗ್ರಹಕ್ಕೆ ವಿಜಯೇಂದ್ರ ಪ್ರಶ್ನೆ
ಬೆಂಗಳೂರು: ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿದ ನಂತರ ಒಂದು ಬಿಡದಿ ಟೌನ್‌ಶಿಪ್ ಹಾಗೂ ಮತ್ತೊಂದೆಡೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್‌ಗೆ ಪತ್ರ ಬರೆದು, ಲೆಕ್ಕ ಕೇಳುತ್ತಿರುವ ವಿಷಯಗಳು ಕಾವು ಪಡೆದುಕೊಳ್ಳುತ್ತಿವೆ. ಇದಕ್ಕೆ ಬಿಜೆಪಿ ನಾಯಕರು ಉತ್ತರಿಸುತ್ತಿದ್ದು, ಇಂದು ಬಿಡದಿಗೆ ಭೇಟಿ ನೀಡಿ ರೈತರ ಸಂಕಟವನ್ನೂ ಆಲಿಸಿದ್ದಾರೆ. ದಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದು, ಪ್ರಿಯಾಂಕ್ ಖರ್ಗೆ ಕೇಂದ್ರ ಗೃಹ ಸಚಿವರಾ? ಎಂದು ಪ್ರಶ್ನಿಸಿದ್ದಲ್ಲದೇ, ಬಿಡದಿ ಯೋಜನೆ ಕಾಂಗ್ರೆಸ್ ಸರಕಾರದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಆದ್ಯತೆ ನೀಡಲು ಹಾಕ್ಕೊಂಡ ಪ್ಲ್ಯಾನ್ ಎಂದು ಆರೋಪಿಸಿದ್ದಾರೆ. ಅಲ್ಲದೇ ಇಷ್ಟು ವರ್ಷ ಸುಸೂತ್ರವಾಗಿ ನಡೆದುಕೊಂಡು ಬಂದ ಗ್ಯಾರಂಟಿ ಯೋಜನೆಗೆ ಈಗ್ಯಾಕೆ ಅನೇಕ ಶರತ್ತುಗಳನ್ನು ವಿಧಿಸಲಾಗುತ್ತಿದೆ ಎಂದೂ ಪ್ರಶ್ನಿಸಿದ್ದಾರೆ. ಇನ್ನೇನು ಹೇಳಿದ್ದಾರೆ ವಿಜಯೇಂದ್ರ?
- ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಪ್ರಮುಖ ಆದ್ಯತೆ ರಿಯಲ್ ಎಸ್ಟೇಟ್. ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ತಮ್ಮ ಸರ್ಕಾರದ ಆದ್ಯತೆ ರಿಯಲ್ ಎಸ್ಟೇಟ್ ಎಂಬುದನ್ನು ತೋರಿಸಿದ್ದಾರೆಯೇ ಹೊರತು, ಈ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯಿಲ್ಲ. ಅಕ್ರಮವಾಗಿ ರೈತರ ಜಮೀನು ಕಸಿಯಲು ಮುಂದಾಗಿರುವ ಕಾಂಗ್ರೆಸ್ ಸರಕಾರ, ಬಿಡದಿಯಲ್ಲಿ ಟೌನ್‌ಶಿಪ್ ಮಾಡಲು ಮುಂದಾಗಿದೆ. ಅನ್ನದಾತರಿಗೆ ನೆರವಾಗಬೇಕಾದ ಸರಕಾರ, ರಿಯಲ್ ಎಸ್ಟೇಟ್ ದಂಧೆಗೆ ಇಳಿದಿದೆ. ಭಂಡತನ ಬಿಟ್ ಮುಖ್ಯಮಂತ್ರಿಗಳು ರೈತರ ಸಮಸ್ಯೆಗಳನ್ನು ಆಲಿಸಬೇಕೇ ಹೊರತು, ಒಕ್ಕಲೆಬ್ಬಿಸಬಾರದು. ಟೌನ್‍ಶಿಪ್‍ಗಾಗಿ ಭೂಸ್ವಾಧೀನವನ್ನು ನಿಲ್ಲಿಸಬೇಕು.

ಗ್ಯಾರಂಟಿ ಅನುಷ್ಠಾನ ಸಮಿತಿ ಕತ್ತೆ ಕಾಯುತ್ತಿದೆಯೇ?
ಬಹು ನಿರೀಕ್ಷಿತ ಗ್ಯಾರಂಟಿ ಯೋಜನೆಗಳಲ್ಲಿ ಅಕ್ರಮ ಆಗೋವರೆಗೆ ಅನುಷ್ಠಾನ ಸಮಿತಿಗಳು ಕತ್ತೆ ಕಾಯುತ್ತಿದ್ದವೇ? ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಆದಾಯ ತೆರಿಗೆ ಪಾವತಿಸುವವರು ಗೃಹಲಕ್ಷ್ಮಿ ಸದುಪಯೋಗ ಪಡೆಯುತ್ತಿದ್ದಾರೆನ್ನಲಾಗಿದೆ. ಗ್ಯಾರಂಟಿ ಜಾರಿ ಮಾಡುವಾಗ ಕಾಕಾ ಪಾಟೀಲ್, ಮಹಾದೇವಪ್ಪಗೆ ಫ್ರೀ ಎಂದಿದ್ದರು. ಈಗ ಹೇಗೆ ಅವರೆಲ್ಲ ತೆರಿಗೆ ಪಾವತಿದಾರರಾಗುತ್ತಾರೆ ಎನ್ನುತ್ತಿರುವುದ್ಯಾಕೆ? ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರಿಗೆ ಸಚಿವ ಸಂಪುಟ ದರ್ಜೆ ನೀಡಲಾಗಿದೆ. ಜಿಲ್ಲೆಯಲ್ಲಿ ಅಧ್ಯಕ್ಷರಿದ್ದಾರೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನುಷ್ಠಾನ ಸಮಿತಿ ಇದೆ. ಇವರೆಲ್ಲ ಕತ್ತೆ ಕಾಯುತ್ತಿದ್ದಾರೆಯೇ?ಗ್ಯಾರಂಟಿಗಳಿಂದ ಸರ್ಕಾರಕ್ಕೆ ಈಗ ಹೊರೆ ಆಗ್ತಾ ಇದೆ. ಸಮಿತಿಗಳಿಗೆ, ಅಧ್ಯಕ್ಷರಿಗೆ ಕಚೇರಿ, ವೇತನ, ಇತರ ಸೌಲಭ್ಯಗಳಿಗೆ ನೂರಾರು ಕೋಟಿ ವ್ಯಯಿಸಲಾಗುತ್ತಿದೆ. ಇದು ಸರ್ಕಾರದ ವೈಫಲ್ಯ. ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೇ ಒಂದೊಂದೇ ನೆಪ ಹೇಳಿಕೊಂಡು ಈಗ ಸೌಲಭ್ಯಗಳಿಗೆ ಕತ್ತರಿ ಹಾಕಲಾಗುತ್ತಿದೆ.
ಎಸ್‍ಐಆರ್‍ನಲ್ಲಿ ಸರ್ಕಾರದ ಧ್ವಂಧ್ವ ನಿಲುವು...
ಎಸ್‍ಐಆರ್ ವಿಚಾರದಲ್ಲಿ ರಾಜ್ಯ ಸರ್ಕಾರವೇ ದ್ವಂದ್ವ ನಿಲುವು ತೋರಿಸುತ್ತಿದ್ದು, ಅಧಿಕಾರಿಗಳನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಬಿಎಲ್‍ಒಗಳಿಗೆ ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೇ ಅನ್ಯ ದೇಶದ ಪೌರತ್ವ ಹೊಂದಿದ್ದಾರೆ. ಇನ್ನೊಂದು ದೇಶದ ಪೌರತ್ವ ಇಟ್ಟುಕೊಂಡು ಅಕ್ರಮವಾಗಿ ಸುಳ್ಳು ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ಡಿ.ಕೆ. ಶಿವಕುಮಾರ್ ಹಾಗೂ ಪ್ರಿಯಾಂಕ್ ಖರ್ಗೆ ಅವರು ಬೆಳಕು ಚೆಲ್ಲಬೇಕು. ಚುನಾವಣಾ ಆಯೋಗ ಅಕ್ರಮ ವಲಸಿಗರ ಪತ್ತೆಗೆ, ಮತಪಟ್ಟಿಯಲ್ಲಿ ಎರಡು ಕಡೆ ಹೆಸರಿದ್ದರೆ, ಮೃತಪಟ್ಟವರ ಹೆಸರು ಸೇರಿದ್ದರೆ ಸರಿಪಡಿಸಲು ಎಸ್‍ಐಆರ್ ಮಾಡುತ್ತಿದೆ. ಸಾಂವಿಧಾನಿಕ ಸಂಸ್ಥೆ ವಿರುದ್ಧ ಅಧಿಕಾರಿಗಳನ್ನು, ಜನರನ್ನು ಕಾಂಗ್ರೆಸ್ ಎತ್ತಿ ಕಟ್ಟುತ್ತಿದೆ.
ರಾಜ್ಯ ಸರ್ಕಾರ ಸುಧಾರಣೆಗಳನ್ನು ಮಾಡಲಿ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಫಲಾನುಭವಿಗಳಿಗೆ ಕತ್ತರಿ ಹಾಕುತ್ತಿದ್ದೇವೆ ಎಂಬ ಸತ್ಯವನ್ನು ಜನರ ಮುಂದೆ ಮುಚ್ಚಿಡಲಿ. ಈ ಸರ್ಕಾರದ ಯೋಗ್ಯತೆಗೆ ಮೂರು ವರ್ಷದಲ್ಲಿ ಜನರಿಗೆ ಮನೆ ನೀಡಲಿಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ, ಗಂಗಾ ಕಲ್ಯಾಣ ಅಕ್ರಮ ತನಿಖೆ ಮಾಡಲಿಲ್ಲ. ಹೈನುಗಾರಿಕೆಗೆ ಪ್ರೋತ್ಸಾಹ ಧನ ನೀಡಲಿಲ್ಲ ಎಂದು ಹೇಳಿದರು.
ಬಾಯಿ ಚಪಲದ ಮಾತಿಗೆ ಉತ್ತರ ಕೊಡಲ್ಲ
ಆರ್‍ಎಸ್‍ಎಸ್ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಒಂದಲ್ಲ ಒಂದು ಹೇಳಿಕೆ ಪ್ರತಿದಿನ ನೀಡುತ್ತಾ ಇದ್ದಾರೆ. ಅವರ ಬಾಯಿ ಚಪಲಕ್ಕೆ ಉತ್ತರ ಕೊಡಲ್ಲ. ಅವರು ರಾಜ್ಯದ ಗೃಹ ಸಚಿವರು. ಅವರು ಮಾಡಬೇಕಾದ ಕೆಲಸ ತುಂಬಾ ಇವೆ. ಅಕ್ರಮ ನುಸುಳುಕೋರರು, ಲವ್ ಜಿಹಾದ್, ಹಿಂದೂ ಕಾರ್ಯಕರ್ತರ ಹತ್ಯೆ ಬಗ್ಗೆ ಗಮನ ಹರಿಸಲಿ. ಅದನ್ನು ಬಿಟ್ಟು ಬೇರೆ ಮಾತನಾಡುತ್ತಾರೆ ಎಂದರು.














Click it and Unblock the Notifications