NEET ಪೇಪರ್ ಲೀಕ್ ಎಫೆಕ್ಟ್: ಮರುಪರೀಕ್ಷೆ ಪ್ರಶ್ನೆಪತ್ರಿಕೆ ಸಾಗಿಸಲು ಬಂತು ವಾಯುಪಡೆ ಹೆಲಿಕಾಪ್ಟರ್
ತಮಿಳುನಾಡು: ಇತ್ತೀಚೆಗಷ್ಟೇ ರಾಷ್ಟ್ರಮಟ್ಟದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ನೀಟ್-ಯುಜಿ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ಬೆನ್ನಲ್ಲೇ, ಇದೀಗ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಸಂಪೂರ್ಣವಾಗಿ ಎಚ್ಚೆತ್ತುಕೊಂಡಿದೆ. ಈ ಬಾರಿ ಯಾವುದೇ ರೀತಿಯ ಅಕ್ರಮ ಅಥವಾ ಪೇಪರ್ ಲೀಕ್ ನಡೆಯದಂತೆ ತಡೆಯಲು ಇಡೀ ಪರೀಕ್ಷಾ ವ್ಯವಸ್ಥೆಯನ್ನು ಉನ್ನತ ಮಟ್ಟದ ಸೇನಾ ಕಾರ್ಯಾಚರಣೆಯ ಮಾದರಿಯಲ್ಲಿ ಬಿಗಿಬಂದೋಬಸ್ತ್ ಮಾಡಲಾಗಿದೆ.
ಇದೇ ಜೂನ್ 21ರಂದು ದೇಶಾದ್ಯಂತ ನಡೆಯಲಿರುವ ನೀಟ್ ಮರುಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಅತ್ಯಂತ ಗೌಪ್ಯವಾಗಿ ಮತ್ತು ಸುರಕ್ಷಿತವಾಗಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಇದೇ ಮೊದಲ ಬಾರಿಗೆ ಭಾರತೀಯ ವಾಯುಪಡೆ ಮತ್ತು ಸೇನಾ ಹೆಲಿಕಾಪ್ಟರ್ ಹಾಗೂ ಸಾರಿಗೆ ವಿಮಾನಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ.

ಹಿಂದಿನ ತಿಂಗಳು ನಡೆದಿದ್ದ ನೀಟ್ ಪರೀಕ್ಷೆಯಲ್ಲಿ ಭಾರಿ ಪ್ರಮಾಣದ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ಕೇಳಿಬಂದ ಕಾರಣದಿಂದ ಆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಹೀಗಾಗಿ, ಲಕ್ಷಾಂತರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮರುಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಸರ್ಕಾರ 7 ಹಂತದ ಬಲವಾದ ಭದ್ರತಾ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ಈ ಭದ್ರತಾ ಕ್ರಮದ ಪ್ರಮುಖ ಭಾಗವಾಗಿ, ದೆಹಲಿಯಿಂದ ತಮಿಳುನಾಡಿನ ಮಧುರೆ ನಗರಕ್ಕೆ ಪ್ರಶ್ನೆಪತ್ರಿಕೆಗಳನ್ನು ವಿಶೇಷ ವಿಮಾನದಲ್ಲಿ ಬಿಗಿ ಭದ್ರತೆಯೊಂದಿಗೆ ಕಳುಹಿಸಲಾಗುತ್ತದೆ. ಆನಂತರ, ಮಧುರೆಯಿಂದ ತಿರುನೆಲ್ವೇಲಿಗೆ ಭಾರತೀಯ ಸೇನೆಯ ಹೆಲಿಕಾಪ್ಟರ್ ಮೂಲಕ ಅಂತಿಮ ಹಂತದ ಸಾಗಾಟ ಮಾಡಲಾಗುತ್ತದೆ. ಈ ಸಂಪೂರ್ಣ ಕಾರ್ಯಾಚರಣೆಯು ವಾಯುಪಡೆ ಅಧಿಕಾರಿಗಳ ನೇರ ಉಸ್ತುವಾರಿಯಲ್ಲಿ ನಡೆಯಲಿದೆ.
ಯಶಸ್ವಿ ಸೇನಾ ಹೆಲಿಕಾಪ್ಟರ್‌ನ ಪ್ರಾಯೋಗಿಕ ಲ್ಯಾಂಡಿಂಗ್
ಈಗಾಗಲೇ ಹೆಲಿಕಾಪ್ಟರ್ ಸಾಗಾಟದ ಅಂತಿಮ ಸಿದ್ಧತೆಗಳು ಶುರುವಾಗಿದ್ದು, ತಮಿಳುನಾಡಿನ ತಿರುನೆಲ್ವೇಲಿಯ ಆರ್ಮ್ಡ್ ರಿಸರ್ವ್ ಗ್ರೌಂಡ್‌ನಲ್ಲಿ ಸೇನಾ ಹೆಲಿಕಾಪ್ಟರ್‌ನ ಪ್ರಾಯೋಗಿಕ ಲ್ಯಾಂಡಿಂಗ್ ಅನ್ನು ಜೂನ್ 16 ರಂದು ಯಶಸ್ವಿಯಾಗಿ ನಡೆಸಲಾಗಿದೆ. ಈ ಅಣಕು ಕಾರ್ಯಾಚರಣೆಯ ಮೂಲಕ ಭದ್ರತಾ ಸಿಬ್ಬಂದಿಯು ಹೆಲಿಕಾಪ್ಟರ್ ಇಳಿಯುವಿಕೆ ಮತ್ತು ಪ್ರಶ್ನೆಪತ್ರಿಕೆಗಳ ಟ್ರಂಕ್‌ಗಳನ್ನು ಎಷ್ಟು ವೇಗವಾಗಿ ಹಾಗೂ ಸುರಕ್ಷಿತವಾಗಿ ಸ್ಥಳಾಂತರಿಸಬಹುದು ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ. ಆಕಾಶದಲ್ಲಿ ದಿಢೀರನೆ ಸೇನಾ ಹೆಲಿಕಾಪ್ಟರ್ ಹಾರಾಟ ನಡೆಸಿದ್ದನ್ನು ಕಂಡ ಸ್ಥಳೀಯ ನಿವಾಸಿಗಳು ಅಚ್ಚರಿಗೊಂಡು ನೋಡುವಂತಾಯಿತು.
ವಾಯುಪಡೆಯ ವಿಮಾನಗಳು ಮತ್ತು Mi-17 ಹೆಲಿಕಾಪ್ಟರ್‌ಗಳನ್ನು ದೇಶದ ಸುಮಾರು 20ಕ್ಕೂ ಹೆಚ್ಚು ಪ್ರಮುಖ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳನ್ನು ರವಾನಿಸಲು ಈಗಾಗಲೇ ಬಳಸಲಾಗುತ್ತಿದೆ ಮತ್ತು 200ಕ್ಕೂ ಹೆಚ್ಚು ಹಾರಾಟಗಳನ್ನು ನಡೆಸಲಾಗಿದೆ. ಕೇವಲ ಸಾರಿಗೆಗೆ ಮಾತ್ರವಲ್ಲದೆ, ಪರೀಕ್ಷಾ ಕೇಂದ್ರಗಳಲ್ಲೂ ಹೈ-ಟೆಕ್ ತಂತ್ರಜ್ಞಾನದ ಭದ್ರತೆ ಒದಗಿಸಲಾಗಿದೆ. ಭದ್ರತೆಯ ದೃಷ್ಟಿಯಿಂದ ಸ್ಟ್ರಾಂಗ್ ರೂಮ್‌ಗಳಲ್ಲಿ ಸಿಸಿಟಿವಿ ಕಣ್ಗಾವಲು ಅಳವಡಿಸಲಾಗಿದ್ದು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಆಧಾರ್ ಆಧಾರಿತ ಬಯೋಮೆಟ್ರಿಕ್ ತಪಾಸಣೆ ಮತ್ತು ಮುಖ ಗುರುತಿಸುವಿಕೆ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ.
ಹಾಗೇಯೇ, ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ಕೇಂದ್ರದೊಳಗೆ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪರೀಕ್ಷಾ ಕೊಠಡಿಗಳಲ್ಲಿ ಸಿಗ್ನಲ್ ಜಾಮರ್ ಮತ್ತು ಎಐ ಆಧಾರಿತ ರಿಯಲ್-ಟೈಮ್ ನಿಗಾ ವ್ಯವಸ್ಥೆಯನ್ನು ಇರಿಸಲಾಗುತ್ತದೆ. ಟೆಲಿಗ್ರಾಮ್ ನಂತಹ ಮೆಸೇಜಿಂಗ್ ಆಪ್‌ಗಳನ್ನು ಪರೀಕ್ಷಾ ಸಮಯದಲ್ಲಿ ದುರ್ಬಳಕೆ ಮಾಡಿಕೊಳ್ಳದಂತೆ ತಡೆಯಲು ಕೇಂದ್ರ ಸರ್ಕಾರ ತಾತ್ಕಾಲಿಕ ನಿರ್ಬಂಧಗಳನ್ನು ಸಹ ಹೇರಿದೆ.
ಒಟ್ಟಾರೆಯಾಗಿ, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಜೊತೆ ಚೆಲ್ಲಾಟವಾಡಿದ್ದ ಪೇಪರ್ ಲೀಕ್ ದಂಧೆಕೋರರಿಗೆ ಈ ಬಾರಿ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಗಟ್ಟಿ ನಿರ್ಧಾರ ಕೈಗೊಂಡಿರುವುದು ಸ್ಪಷ್ಟವಾಗಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸೇನೆಯ ಕಣ್ಗಾವಲಿನಲ್ಲಿ ನಡೆಯುತ್ತಿರುವ ಈ ಬಾರಿಯ ನೀಟ್ ಮರುಪರೀಕ್ಷೆಯು ಯಾವುದೇ ವಿವಾದಗಳಿಲ್ಲದೆ, ಅತ್ಯಂತ ಸುಗಮವಾಗಿ ಮತ್ತು ನ್ಯಾಯಬದ್ಧವಾಗಿ ನಡೆಯಬೇಕು ಎನ್ನುವ ನಿರೀಕ್ಷೆಯನ್ನು .














Click it and Unblock the Notifications