ನೇರಳೆ ಇಳುವರಿ ಬರಗಾಲದ ಸೂಚನೆ, ಜಾನಪದದಲ್ಲಿ ಬಿಚ್ಚಿಟ್ಟ ಹವಾಮಾನದ ವೈಜ್ಞಾನಿಕ ಸತ್ಯ!
ಬೆಂಗಳೂರು: ಕರ್ನಾಟಕ ಸೇರಿದಂತೆ ಭಾರತದ ಜನರು ಈ ವರ್ಷ ಬರಗಾಲ ಎದುರಿಸಲು ಸಜ್ಜಾಗಬೇಕಿದೆ. ಹವಾಮಾನ ಇಲಾಖೆಯು ಮುಂಗಾರು ಮಳೆ ಕಡಿಮೆ, ಬರಗಾಲದ ಎಚ್ಚರಿಕೆಯನ್ನು ಈಗಾಗಲೇ ನೀಡಿದೆ. ಹವಾಮಾನದ ಸಂಕಷ್ಟದ ಬಗ್ಗೆ ಜಾನಪದದಲ್ಲಿ ನಮ್ಮ ಪೂರ್ವಜರು ವೈಜ್ಞಾನಿಕ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಆ ಸತ್ಯದ ಸನ್ನಿವೇಶವು ಈ ವರ್ಷ 2026ರಲ್ಲಿ ಘಟಿಸಲಿದೆ. ಅದಕ್ಕೆ ನಾವೆಲ್ಲರೂ ಸಹ ಸಾಕ್ಷಿಯಾಗಲಿದ್ದೇವೆ.
ಹೌದು, 'ನೇರಳೆ ಹಣ್ಣಿನ ಫಸಲು ಹೇರಳವಾಗಿ ಬಂದಾಗ ಆ ವರ್ಷ ಬರಗಾಲ ಬರುತ್ತದೆ' ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಈ ವರ್ಷ ಅದರಂತೆಯೇ ಆಗುತ್ತಿದೆ. ಹವಾಮಾನ ಇಲಾಖೆಯು 'ಎಲ್‌ನಿನೋ' ಎಫೆಕ್ಟ್‌ನಿಂದಾಗಿ ಕರ್ನಾಟಕ ಸೇರಿ ದೇಶದಲ್ಲಿ ನಿರೀಕ್ಷಿತ ಶೇ. 100ರಷ್ಟು ವಾಡಿಕೆ ಮಳೆಯಲ್ಲಿ 90ರಷ್ಟು ಮಾತ್ರವೇ ದಾಖಲಾಗುತ್ತದೆ ಎಂದು ತಿಳಿಸಿತ್ತು. ಕರ್ನಾಟಕದಲ್ಲಿ ಜೂನ್ 20ರಿಂದ ಮುಂಗಾರು ದುರ್ಬಲಗೊಳ್ಳಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸದ್ಯ ವಾತಾವರಣ ನೋಡಿದರೆ ಬರಗಾಲ ಕಟ್ಟಿಟ್ಟ ಬುತ್ತಿ ಎಂಬಂತಾಗಿದ್ದು, ಇದು ರೈತರ ನಿದ್ದೆಗೆಡಿಸಿದೆ.

ಜಾನಪದದಲ್ಲಿ ಪೂರ್ವಜರು ಹೇಳಿದ ಮಾತುಗಳಿಗೂ ಇಂದಿನ ವೈಜ್ಞಾನಿಕ ಹವಾಮಾನ ಮುನ್ಸೂಚನೆಗೂ ತಾಳೆಯಾಗುತ್ತದೆ. ಮುಂದಿನ ಮೂರು ತಿಂಗಳು ಮಳೆ ಕಡಿಮೆ ಆಗಲಿದ್ದು, ಬರಗಾಲ ಎದುರಾಗಲಿದೆ. ಮಳೆ ಕಡಿಮೆ ಆದರೆ ಸಾಮಾನ್ಯವಾಗಿ ಮುಂದಿನ ವರ್ಷ ಬೇಸಿಗೆ ಕಾಲವಂತೂ ಹೇಳತೀರದಷ್ಟು ಸಂಕಷ್ಟ ತರುತ್ತದೆ. ಇದೆಲ್ಲವನ್ನು ಪ್ರಕೃತಿ ನಮಗೆ ಈ ವರ್ಷ ನೇರಳೆ ಫಸಲಿನ ಮೂಲಕ ತಿಳಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ವರ್ಷ ಎಲ್ಲೆಂದರಲ್ಲಿ ನೇರಳೆ ಹಣ್ಣುಗಳ ಮಾರಾಟ!
'ಬೇಸಿಗೆಯಲ್ಲಿ ಅಪಾರ ನೇರಳೆ ಹಣ್ಣುಗಳ ಇಳುವರಿ ಬಂದಾಗ ಆ ವರ್ಷ ಬರಗಾಲ ಎದುರಾಗುವುದು ಖಚಿತ' ಎಂಬ ಮಾತಿದೆ. ಅದರಂತೆ ಮಾರುಕಟ್ಟೆಗಳಿಗೆ ಅಪಾರ ಪ್ರಮಾಣದ ನೇರಳೆ ಹಣ್ಣು ಬಂದಿದೆ. ಬಸ್ ನಿಲ್ದಾಣ, ರಸ್ತೆ ತಳ್ಳುಗಾಡಿಗಳಲ್ಲಿ ಎಲ್ಲೆಂದರಲ್ಲಿ ನೇರಳೆ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ಪೂರ್ವಜರ ಮಾತುಗಳು, ಐಎಂಡಿ ಮುನ್ಸೂಚನೆ ಮತ್ತು ಇಂದು ನಾವು ಎದುರಿಸುತ್ತಿರುವ ಸನ್ನಿವೇಶ ಎಲ್ಲವುಗಳು ಹೋಲಿಕೆ ಆಗುತ್ತಿದೆ.
ನೇರಳೆ ಮರ ಅಪಾರ ಇಳುವರಿ ಕೊಡುವುದೇಕೆ? ಇಲ್ಲಿದೆ ವೈಜ್ಞಾನಿಕ ಕಾರಣ
ಕಳೆದ ಹತ್ತಿಪ್ಪತ್ತು ವರ್ಷಗಳಲ್ಲೇ ಈ ವರ್ಷ ಅತೀ ಗರಿಷ್ಠ ನೇರಳೆ ಹಣ್ಣುಗಳ ಇಳುವರಿ ಕಾಣಬಹುದು. ತೋಟ, ಹೊಲ ಗದ್ದೆಗಳಲ್ಲಿ ನೇರಳೆ ಹಣ್ಣುಗಳು ರಾಶಿ ರಾಶಿಯಾಗಿ ಬಿದ್ದಿವೆ. ಕಳೆದ ವರ್ಷ ಅಷ್ಟಾಗಿ ಕಾಣದ ಹಣ್ಣುಗಳು ಈ ವರ್ಷ ಪ್ರತಿ ಮರಗಳಲ್ಲಿ ಹಣ್ಣುಗಳ ಸುರಿಮಳೆಯಾಗಿದೆ. ಅದನ್ನು ಮಾರುಕಟ್ಟೆಗಳಲ್ಲೂ ಕಾಣುತ್ತಿದ್ದೇವೆ. ಹೀಗೆ ಹಣ್ಣುಗಳ ಅಪಾರ ಇಳುವರಿಯು ಬೇಸಿಗೆಯ ಮುನ್ಸೂಚನೆ ಎನ್ನಲಾಗಿದೆ.

ನೀರಿನಾಂಶ ಕೊರತೆ ಗ್ರಹಿಸುವ ನೇರಳೆ ಮರಗಳು
ಇದನ್ನು ವಿಜ್ಞಾನದಲ್ಲಿ 'ಸ್ಟ್ರೆಸ್ ಫ್ರೂಟಿಂಗ್' ಎನ್ನಲಾಗುತ್ತದೆ. ಅಂದರೆ ಭೂಮಿಯಲ್ಲಿ ನೀರಿನ ಅಂಶ ಕಡಿಮೆ ಆಗುತ್ತವೆ ಎಂಬ ಸೂಚನೆ ಮರಗಳಿಗೆ ಗೊತ್ತಾದಾಗ ಮರಗಳು ಇದೇ ಕೊನೆಯ ಇಳುವರಿ ಎಂಬಂತೆ ಗರಿಷ್ಠ ಹಣ್ಣುಗಳನ್ನು ನೀಡುವ ಪ್ರಯತ್ನವಾಗಿದೆ. ಇದನ್ನು ಕೆಲವೊಮ್ಮೆ "ಸೂಸೈಡ್ ಫ್ರೂಟಿಂಗ್" ಅಂತಲೂ ವೈಜ್ಞಾನಿಕ ಹೆಸರಿನಿಂದ ಕರೆಯಲಾಗುತ್ತದೆ. ಈ ಮೂಲಕ ನೇರಳೆ ಮರಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತವೆ.
ಭೂಮಿಯಲ್ಲಿ ನೀರಿನ ಕೊರತೆ ಆಗಲಿದೆ, ಹವಾಮಾನದಲ್ಲಿ ಮುಂದೆ ದೊಡ್ಡ ಬದಲಾವಣೆ ಆಗಲಿದೆ ಎಂಬ ಸೂಚನೆ ಸಿಗುತ್ತಿದ್ದಂತೆ ನೇರಳೆ ಮರಗಳು ತಮ್ಮ ಉಳಿವಿಗಾಗಿ ಅಪಾರ ಬೀಜ ಉತ್ಪಾದನೆಗೆ ಮುಂದಾಗುತ್ತವೆ. ಅದರಿಂದ ಭವಿಷ್ಯದಲ್ಲಿ ತನ್ನ ಪ್ರಜಾತಿ ಉಳಿಸಿಕೊಂಡು ತಾನು ಕೊನೆಯಾಗುವ ಪ್ರಕ್ರಿಯೆಗೆ ಒಳಗಾಗುತ್ತವೆ. ಈ ಮೂಲಕ ರಕ್ಷಣಾತ್ಮಕ ಸ್ಥಿತಿ ತಲುಪುತ್ತವೆ. ತಾವು ಕೊನೆಯಾದರೂ ಭವಿಷ್ಯದಲ್ಲಿ ಸಸಿಯಾಗಿ ಹುಟ್ಟುವಂತೆ ಅತಿಯಾಗಿ ಹಣ್ಣು/ಬೀಜಗಳನ್ನು ಈ ಜಗತ್ತಿಗೆ ನೀಡುತ್ತವೆ ಎನ್ನಬಹುದು.
ಸಾಮಾನ್ಯವಾಗಿ ಹೇಳುವುದಾದರೆ ಮುಂದಿನ ದಿನಗಳಲ್ಲಿ ನಾವು ಬದುಕದೇ ಇರಬಹುದು. ಆಗ ತನ್ನನ್ನು ಉಳಿಸಿಕೊಳ್ಳುವ ಬದಲು, ಪ್ರಜಾತಿ ಭೂಮಿಯ ಮೇಲೆ ಉಳಿಯಲಿ ಎಂದು ತನ್ನೆಲ್ಲ ಶಕ್ತಿ ಬಳಸಿ ಅಪಾರ ಹಣ್ಣುಗಳನ್ನು (ಬೀಜ) ತಯಾರಿಸುತ್ತದೆ. ಅಂದರೆ ಅದು ಆತ್ಮಹತ್ಯೆ ಮಾಡಿಕೊಳ್ಳಲದೇ ತನ್ನ ಮುಂದಿನ ಪ್ರಜಾತಿ (ಸಸಿಗಳಿಗಾಗಿ) ಬಲಿದಾನ ಮಾಡಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಈ ಸಂದರ್ಭದಲ್ಲಿ ಹೊಸದಾಗಿ ಚಿಗುರು, ಕೊಂಬೆ ಬೆಳೆಯುವುದಿಲ್ಲ. ಹೊಸ ಎಲೆಗಳಿಗೆ ಬಳಕೆ ಆಗುವ ನೀರನ್ನೂ ಸಹಿತ ಹೆಚ್ಚು ಹೆಚ್ಚು ಹಣ್ಣುಗಳ ಉತ್ಪಾದನೆಗೆ ಬಳಸಿಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಕಡಿಮೆ ನೀರಿನಿಂದ ಹಣ್ಣುಗಳ ಉತ್ಪಾದನೆಗಾಗಿ ಬೇರುಗಳ ಒತ್ತಡ ಅನುಭವಿಸುತ್ತವೆ. ಹವಾಮಾನ ಬದಲಾವಣೆಗಳನ್ನು ಪ್ರಾಣಿ, ಪಕ್ಷಿಗಳು, ಪ್ರಕೃತಿ ಮುಂಚಿತವಾಗಿಯೇ ಊಹಿಸುತ್ತವೆ, ಸಂವೇಶನಾಶೀಲವಾಗಿ ಗುರುತಿಸುತ್ತವೆ ಎಂಬದು ಮತ್ತೊಮ್ಮೆ ಸತ್ಯವಾದಂತಾಗಿದೆ.
ನೈಸರ್ಗಿಕ ಸಂಪನ್ಮೂಲ ರಕ್ಷಣೆ ಅಗತ್ಯ
ಭೂಮಿ ಒಳಗಿನ ನೀರಿನ ಒತ್ತಡವೇ ಮುಂದೆ ಬರುವ ಬರಗಾಲದ ಅಥವಾ ತೀವ್ರ ಬೇಸಿಗೆಯ ಸೂಚನೆಯಾಗಿದೆ. ಅದರಂತೆ ಈ ವರ್ಷ ನಾವು ಹೇರಳ ನೇರಳೆ ಹಣ್ಣುಗಳನ್ನು ಕಾಣುತ್ತಿದ್ದೇವೆ. ಇದು ಪ್ರಕೃತಿ ನಮಗೆ ನೀಡುತ್ತಿರುವ ಸ್ಪಷ್ಟ ಮುನ್ನೆಚ್ಚರಿಕೆಯಾಗಿದೆ. ಇಷ್ಟಾದ ಮೇಲೂ ನಾವು ಪ್ರಕೃತಿ ನೀಡುವ ನೀರು, ಮರಗಳು ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಸಂರಕ್ಷಿಸಬೇಕಿದೆ.
ರಾಜ್ಯದಲ್ಲಿ ಶೇ.21ರಷ್ಟು ಮಳೆ ಕೊರತೆ
ಕರ್ನಾಟಕದಲ್ಲಿ ಜೂನ್ 1-15ರವರೆಗಿನ ಮುಂಗಾರು ಮಳೆ ಅವಧಿಯಲ್ಲಿ ಶೇ. 21ರಷ್ಟು ಮಳೆ ಕೊರತೆ ಆಗಿದೆ. ಇದು ಇಲ್ಲಿಗೆ ನಿಲ್ಲದೇ ಈ ತಿಂಗಳಾಂತ್ಯದವರೆಗೂ ನಿರೀಕ್ಷಿತ ಜೋರು ಮಳೆ ಆಗುವುದು ಅನುಮಾನ ಎನ್ನಲಾಗಿದೆ. ಉತ್ತರ ಕರ್ನಾಟಕದಲ್ಲಂತೂ ಮಳೆಗಾಲದಲ್ಲೂ ಬೇಸಿಗೆ ಅನುಭವವಾಗುತ್ತಿದೆ. ಬಿತ್ತನೆ ಮಾಡಿದ ರೈತರು ಆತಂಕದಲ್ಲಿದ್ದಾರೆ. ಕರಾವಳಿ, ಮಲೆನಾಡು, ಒಳನಾಡು ಯಾವ ಭಾಗದಲ್ಲೂ ಮುಂಗಾರು ಚುರುಕಾಗಿಲ್ಲ, ಬದಲಾಗಿ ದುರ್ಬಲಗೊಂಡಿದೆ ಎಂದು ಐಎಂಡಿ ದೃಢಪಡಿಸಿದೆ.














Click it and Unblock the Notifications