RCB Vs KKR: ಆರ್‌ಸಿಬಿ ವಿರುದ್ಧ 1 ರನ್‌ನ ರೋಚಕ ಗೆಲುವು ಸಾಧಿಸಿದ ಕೆಕೆಆರ್
ಕೆಕೆಆರ್ ವಿರುದ್ಧ ಗೆಲುವಿನ ಸನಿಹ ಬಂದ ಆರ್‌ಸಿಬಿ 1 ರನ್ ಅಂತರದಲ್ಲಿ ಸೋಲು ಕಂಡಿದೆ. ಕರಣ್ ಶರ್ಮಾ ಅವರ ಪ್ರಯತ್ನ ವ್ಯರ್ಥವಾಗಿದ್ದು, ಆರ್ ಸಿಬಿ ಸತತವಾಗಿ 6ನೇ ಪಂದ್ಯ ಸೋತಿದ್ದು, ಪ್ಲೇ ಆಫ್ ಕನಸು ಕಮರಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಅಂಗಳದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 222 ರನ್ ಕಲೆಹಾಕಿತು. ಸ್ಫೋಟಕ ಆರಂಭ ನೀಡಿದ ಫಿಲ್ ಸಾಲ್ಟ್ ಕೇವಲ 14 ಎಸೆತಗಳಲ್ಲಿ 7 ಬೌಂಡರಿ ಮೂರು ಸಿಕ್ಸರ್ ಸಹಿತ 48 ರನ್ ಗಳಿಸಿದರು.

ಸುನಿಲ್ ನರೇನ್ 15 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿ ಔಟಾದರು. ಆಂಗ್ಕ್ರಿಶ್ ರಘುವಂಶಿ 4 ಎಸೆತಗಳಲ್ಲಿ 3 ರನ್ ಗಳಿಸಿ ಔಟಾದರು. ವೆಂಕಟೇಶ್ ಅಯ್ಯರ್ 8 ಎಸೆತಗಳಲ್ಲಿ 16 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
8.2 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಕೆಕೆಆರ್ 97 ರನ್ ಗಳಿಸಿತ್ತು. ವಿಕೆಟ್‌ಗಳನ್ನು ಪಡೆದರೂ ಆರ್ ಸಿಬಿ ಬೌಲರ್ ಗಳು ಹೆಚ್ಚಿನ ರನ್ ಬಿಟ್ಟುಕೊಟ್ಟರು. ನಾಯಕ ಶ್ರೇಯಸ್ ಅಯ್ಯರ್ 36 ಎಸೆತಗಳಲ್ಲಿ 50 ರನ್ ಗಳಿಸಿದರು. ರಿಂಕು ಸಿಂಗ್ 16 ಎಸೆತಗಳಲ್ಲಿ 24 ರನ್ ಗಳಿಸಿದರು. ಆಂಡ್ರೆ ರಸೆಲ್ 20 ಎಸೆತಗಳಲ್ಲಿ 27 ರನ್ ಗಳಿಸಿದರೆ, ರಮಣದೀಪ್ ಸಿಂಗ್ 9 ಎಸೆತಗಳಲ್ಲಿ ಅಜೇಯ 24 ರನ್ ಗಳಿಸಿದರು.
ಯಶ್ ದಯಾಳ್ ಎರಡು ವಿಕೆಟ್ ಪಡೆದರೂ 4 ಓವರ್ ಗಳಲ್ಲಿ 56 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಲಾಕಿ ಫರ್ಗ್ಯುಸನ್ ಕೂಡ 4 ಓವರ್ ಗಳಲ್ಲಿ 47 ರನ್ ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದರು.
ವಿಲ್ ಜ್ಯಾಕ್ಸ್, ರಜತ್ ಪಟಿದಾರ್ ಅಬ್ಬರ
223 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್ ಸಿಬಿ ತಂಡದ ಆರಂಭ ಉತ್ತಮವಾಗಿರಲಿಲ್ಲ. 7 ಎಸೆತಗಳಲ್ಲಿ 18 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ವಿವಾದಾತ್ಮಕ ಅಂಪೈರಿಂಗ್‌ಗೆ ಔಟಾದರು. ನಾಯಕ ಫಾಫ್ ಡುಪ್ಲೆಸಿಸ್ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಬಳಿಕ ಜೊತೆಯಾದ ವಿಲ್ ಜ್ಯಾಕ್ಸ್ ಮತ್ತು ರಜತ್ ಪಟಿದಾರ್ ಅದ್ಭುತ ಜೊತೆಯಾಟ ಆಡಿದರು. ವಿಲ್ ಜ್ಯಾಕ್ಸ್ 32 ಎಸೆತಗಳಲ್ಲಿ 4 ಬೌಂಡರಿ 5 ಸಿಕ್ಸರ್ ಸಹಿತ 55 ರನ್ ಗಳಿಸಿ, ಐಪಿಎಲ್‌ನ ತಮ್ಮ ಮೊದಲ ಅರ್ಧಶತಕ ಬಾರಿಸಿದರು. ರಜತ್ ಪಟಿದಾರ್ 23 ಎಸೆತಗಳಲ್ಲಿ 52 ರನ್ ಗಳಿಸಿದರು.
ಕೊನೆಯ ಓವರ್ ನಲ್ಲಿ ಆರ್ ಸಿಬಿ ಗೆಲುವಿಗೆ 21 ರನ್ ಬೇಕಿದ್ದಾಗ ಕರಣ್ ಶರ್ಮಾ 3 ಸಿಕ್ಸರ್ ಸಿಡಿಸಿದರೂ ತಂಡಕ್ಕೆ ಗೆಲುವು ತಂದುಕೊಡಲು ಆಗಲಿಲ್ಲ. 20 ಓವರ್ ಗಳಲ್ಲಿ 221 ರನ್ ಗಳಿಸಿ ಆಲೌಟ್ ಆಗುವ ಮೂಲಕ ಒಂದು ರನ್‌ನಿಂದ ಸೋಲನುಭವಿಸಿತು.












Click it and Unblock the Notifications