KKR vs LSG: ಏಪ್ರಿಲ್ 8ರಂದು ಮಂಗಳವಾರ ನಡೆಯಲಿವೆ ಎರಡು ಐಪಿಎಲ್ ಪಂದ್ಯಗಳು!
ಐಪಿಎಲ್ 2025ರ ಆವೃತ್ತಿಯ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) vs ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ನಡುವಿನ ಪಂದ್ಯವನ್ನು ಕೊನೆಗೂ ಮರುನಿಗದಿ ಮಾಡಲಾಗಿದೆ. ಕೋಲ್ಕತ್ತಾದಲ್ಲಿ ನಡೆಯಬೇಕಿದ್ದ ಈ ಪಂದ್ಯವನ್ನು ಬೇರೆ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಲಾಗುತ್ತದೆ ಎನ್ನಲಾಗಿತ್ತು, ಆದರೆ ಈಗ ಇದೇ ಅಂಗಳದಲ್ಲಿ ಪಂದ್ಯ ನಡೆಯಲಿದ್ದು, ದಿನಾಂಕವನ್ನು ಬದಲಿಸಲಾಗಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಂದ್ಯದ ಮರು ವೇಳಾಪಟ್ಟಿಯನ್ನು ಅಧಿಕೃತವಾಗಿ ದೃಢಪಡಿಸಿದೆ. ಏಪ್ರಿಲ್ 6 ರಂದು ನಡೆಯಬೇಕಿದ್ದ ಈ ಹೈವೋಲ್ಟೇಜ್ ಪಂದ್ಯ ಈಗ ಏಪ್ರಿಲ್ 8 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲೇ ನಡೆಯುವಂತೆ ನಿಗದಿ ಮಾಡಿದೆ.

ಪಂದ್ಯದ ದಿನಾಂಕ ಬದಲಾಗಿದ್ದೇಕೆ?
ಏಪ್ರಿಲ್ 6ರಂದು ದೇಶಾದ್ಯಂತ ರಾಮನವಮಿ ಆಚರಣೆ ಮಾಡಲಾಗುತ್ತದೆ. ಆದರೆ ಭದ್ರತೆಯ ಕಾರಣದಿಂದ ಪಂದ್ಯಕ್ಕೆ ಸೂಕ್ತ ಭದ್ರತೆ ಸಾಧ್ಯತೆ ಇಲ್ಲದ ಕಾರಣ ಪಂದ್ಯವನ್ನು ಮರನಿಗದಿ ಮಾಡಲಾಗಿದೆ. ರಾಮನವಮಿ ಉತ್ಸವಕ್ಕಾಗಿ ನಗರದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಬೇಕಿರುವುದರಿಂದ, ಪಂದ್ಯದ ವೇಳೆ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಕೋಲ್ಕತ್ತಾ ಪೊಲೀಸ್ ಬಂಗಾಳ ಕ್ರಿಕೆಟ್ ಮಂಡಳಿ (ಸಿಎಬಿ) ಮಾಹಿತಿ ನೀಡಿದರು.
ಬಂಗಾಳ ಕ್ರಿಕೆಟ್ ಮಂಡಳಿ ಮತ್ತು ಬಿಸಿಸಿಐ ನಡುವಿನ ಸಾಕಷ್ಟು ಚರ್ಚೆಯ ಬಳಿಕ ಪಂದ್ಯದ ಸ್ಥಳ ಬದಲಾವಣೆ ಮಾಡುವ ಬದಲಾಗಿ ಪಂದ್ಯದ ದಿನಾಂಕ ಬದಲಾವಣೆ ಮಾಡಲು ನಿರ್ಧರಿಸಲಾಯಿತು. ಏಪ್ರಿಲ್ 6 ರ ಬದಲು ಏಪ್ರಿಲ್ 8ರಂದು ಪಂದ್ಯವನ್ನು ನಡೆಸಲು ನಿರ್ಧರಿಸಲಾಗಿದೆ.
ಬಿಸಿಸಿಐ ಹೇಳಿಕೆಯಲ್ಲಿ ಏನಿದೆ?
"ಟಾಟಾ ಐಪಿಎಲ್ 2025 ರ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ನಡುವಿನ ಪಂದ್ಯವನ್ನು ಏಪ್ರಿಲ್ 6, 2025 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಿಗದಿಪಡಿಸಲಾಗಿತ್ತು, ಆದರೆ ಏಪ್ರಿಲ್ 8, 2025 ರಂದು ಮಂಗಳವಾರ ಮಧ್ಯಾಹ್ನ 3:30 ಕ್ಕೆ ಮರು ನಿಗದಿಪಡಿಸಲಾಗಿದೆ. ಹಬ್ಬದ ಕಾರಣ ನಗರದಾದ್ಯಂತ ಸಿಬ್ಬಂದಿಯನ್ನು ನಿಯೋಜಿಸುವ ಬಗ್ಗೆ ಕೋಲ್ಕತ್ತಾ ಪೊಲೀಸರ ವಿನಂತಿಯನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ." ಎಂದು ಬಿಸಿಸಿಐ ಮಾಹಿತಿ ನೀಡಿದೆ.
ಏಪ್ರಿಲ್ 6 ರಂದು ಭಾನುವಾರ ಕೇವಲ ಒಂದು ಪಂದ್ಯ ಮಾತ್ರ ನಡೆಯಲಿದೆ. ಸಂಜೆ 7.30ಕ್ಕೆ ಸನ್‌ರೈಸರ್ಸ್ ಹೈದರಾಬಾದ್ vs ಗುಜರಾತ್ ಟೈಟಾನ್ಸ್ ಸೆಣೆಸಲಿವೆ. ಆದರೆ ಏಪ್ರಿಲ್ 8ರಂದು ಮಧ್ಯಾಹ್ನ ಕೆಕೆಆರ್ vs ಎಲ್‌ಎಸ್‌ಜಿ ನಡುವೆ ಪಂದ್ಯ ನಡೆಯಲಿದ್ದು, ಸಂಜೆ 7.30 ಕ್ಕೆ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) vs ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮುಖಾಮುಖಿಯಾಗಲಿವೆ.












Click it and Unblock the Notifications