Ranji Trophy: 74 ವರ್ಷಗಳ ಬಳಿಕ ರಣಜಿ ಟ್ರೋಫಿ ಫೈನಲ್ ತಲುಪಿ ಇತಿಹಾಸ ನಿರ್ಮಿಸಿದ ಕೇರಳ
ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕೇರಳ ತಂಡ ಹೊಸ ಇತಿಹಾಸ ನಿರ್ಮಿಸಿದೆ. 74 ವರ್ಷಗಳ ಬಳಿಕ ಕೇರಳ ರಣಜಿ ಟ್ರೋಫಿಯಲ್ಲಿ ಫೈನಲ್ ತಲುಪಿದ ಸಾಧನೆ ಮಾಡಿದೆ. ಪ್ರತಿ ವರ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಆಡುತ್ತಿದ್ದ ಕೇರಳ ಈ ಬಾರಿ ಎಲ್ಲರ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿದ್ದು ಬಲಿಷ್ಠ ತಂಡಗಳನ್ನೇ ಮಣಿಸಿ ಫೈನಲ್ ಪ್ರವೇಶಿಸಿದೆ.
ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಎರಡು ರನ್‌ಗಳ ರೋಚಕ ಮುನ್ನಡೆ ಸಾಧಿಸಿದ ಕೇರಳ ಹೊಸ ಇತಿಹಾಸ ನಿರ್ಮಿಸಿತು. ಸೆಮಿಫೈನಲ್ ಪಂದ್ಯ ಡ್ರಾನಲ್ಲಿ ಅಂತ್ಯವಾದರೂ ಮೊದಲ ಇನ್ನಿಂಗ್ಸ್‌ನಲ್ಲಿ ಎರಡು ರನ್ ಮುನ್ನಡೆ ಪಡೆದ ಕೇರಳ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.

1951-52ರಲ್ಲಿ ಕೇರಳ ರಣಜಿ ಟ್ರೋಫಿ ಆಡಲು ಆರಂಭಿಸಿತ್ತು, 74 ವರ್ಷಗಳ ಸುದೀರ್ಘ ಕಾಯುವಿಕೆ ಬಳಿಕ ಮೊಲದ ಬಾರಿ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. ಗುಜರಾತ್‌ಗೆ ಫೈನಲ್ ತಲುಪುವ ಅವಕಾಶವಿದ್ದರೂ ಕೊನೆಯ ಕ್ಷಣದಲ್ಲಿ 3 ರನ್‌ಗಳ ಹಿನ್ನಡೆ ಸಾಧಿಸುವ ಮೂಲಕ ಪಂದ್ಯಾವಳಿಯಿಂದ ಹೊರಬಿದ್ದಿದೆ.
ಗುಜರಾತ್‌ನ ನಂ. 10 ಬ್ಯಾಟ್ಸ್‌ಮನ್ ಅರ್ಜನ್ ನಾಗವಾಸ್ವಾಲ್ಲಾ ಸ್ಲಾಗ್-ಸ್ವೀಪ್ ಮಾಡಲು ಪ್ರಯತ್ನಿಸಿದಾಗ, ಸಿಲ್ಲಿ ಪಾಯಿಂಟ್‌ನಲ್ಲಿ ಸಲ್ಮಾನ್ ನಿಜಾರ್ ಅವರ ಹೆಲ್ಮೆಟ್‌ನಿಂದ ಚೆಂಡು ಬೌನ್ಸ್ ಆದ ನಂತರ ನಾಯಕ ಸಚಿನ್ ಬೇಬಿ ಅದನ್ನು ಮೊದಲ ಸ್ಲಿಪ್‌ನಲ್ಲಿ ಕ್ಯಾಚ್ ಹಿಡಿದಾಗ ಕೇರಳ ಮೊದಲ ಇನ್ನಿಂಗ್ಸ್‌ನಲ್ಲಿ 2 ರನ್ ಮುನ್ನಡೆ ಪಡೆದುಕೊಂಡಿತು.
ಡ್ರಾನಲ್ಲಿ ಮುಗಿದ ಪಂದ್ಯ
ಟಾಸ್ ಗೆದ್ದ ಕೇರಳ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಎಂ ಅಜರುದ್ದಿನ್ ಅವರ 177 ರನ್‌ಗಳ ಅಮೋಘ ಇನ್ನಿಂಗ್ಸ್ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 457 ರನ್‌ಗಳನ್ನು ಕಲೆಹಾಕಿತು. ನಾಯಕ ಸಚಿನ್ ಬೇಬಿ 69 ರನ್ ಗಳಿಸಿದರೆ, ಸಲ್ಮಾನ್ ನಿಝಾರ್ 52 ರನ್ ಗಳಿಸಿದರು.
ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಗುಜರಾತ್ ಕೂಡ ದಿಟ್ಟ ಹೋರಾಟ ನೀಡಿತು. ಪ್ರಿಯಾಂಕ್ ಪಾಂಚಾಲ್ 148 ರನ್ ಗಳಿಸಿದರೆ, ಆರ್ಯ ದೇಸಾಯಿ 73 ರನ್ ಗಳಿಸಿದರೆ, ಜಯಮೀತ್ ಪಟೇಲ್ 79 ರನ್ ಗಳಿಸಿದರು. ಕೇರಳದ ಸ್ಪಿನ್ನರ್‌ಗಳಾದ ಆದಿತ್ಯ ಸರ್ವಾಟೆ ಮತ್ತು ಜಲಜ್ ಸಕ್ಸೇನಾ ತಲಾ 4 ವಿಕೆಟ್ ಪಡೆದು ಗುಜರಾತ್‌ಗೆ ಆಘಾತ ನೀಡಿದರು. ಮೊದಲ ಇನ್ನಿಂಗ್ಸ್ ಸ್ಕೋರ್ ಸಮಬಲಗೊಳಿಸಲು ಎರಡು ರನ್ ಬೇಕಿದ್ದಾಗ ಅರ್ಜನ್ ನಾಗವಾಸ್ವಾಲ್ಲಾ ಅವರು ಹೊಡೆದ ಚೆಂಡು ಸಲ್ಮಾನ್ ನಿಜಾರ್ ಅವರ ಹೆಲ್ಮೆಟ್‌ಗೆ ಬಡಿದು ಮೇಲೆ ಎಗರಿತು, ಸಚಿನ್ ಬೇಬಿ ತಕ್ಷಣವೇ ಅದನ್ನು ಕ್ಯಾಚ್ ಹಿಡಿಯುವ ಮೂಲಕ ಗುಜರಾತ್ ಆಲೌಟ್ ಆಯಿತು.
ಕ್ವಾರ್ಟರ್ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಒಂದು ರನ್‌ನಿಂದ ಸೋಲಿಸಿದ ಕೇರಳ, ತನ್ನ ಎರಡನೇ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ, ಈಗ ಇತಿಹಾಸ ನಿರ್ಮಿಸಿದೆ.












Click it and Unblock the Notifications