ವಿಶ್ವಕಪ್ ಗೆದ್ದ ಅರ್ಜೆಂಟೀನಾ: ಉಚಿತವಾಗಿ 1,500 ಪ್ಲೇಟ್ ಬಿರಿಯಾನಿ ಹಂಚಿದ ಹೋಟೆಲ್
ತಿರುವನಂತಪುರಂ, ಡಿ. 20: ಅರ್ಜೆಂಟೀನಾ ಫುಟ್ಬಾಲ್ ವಿಶ್ವಕಪ್ ಗೆದ್ದ ಸಂಭ್ರಮವನ್ನು ಕೇರಳದ ಅಭಿಮಾನಿಯೊಬ್ಬರು ವಿಶಿಷ್ಟವಾಗಿ ಆರಿಸಿದ್ದಾರೆ. ತಮ್ಮ ಅಂಗಡಿಯಲ್ಲಿ ಉಚಿತವಾಗಿ ಚಿಕನ್ ಬಿರಿಯಾನಿ ಹಂಚುವ ಮೂಲಕ ಗೆಲುವನ್ನು ಆನಂದಿಸಿದ್ದಾರೆ.
ಫುಟ್ಬಾಲ್ ವಿಶ್ವಕಪ್‌ಗೆ ಮುಂಚೆಯೇ ಅರ್ಜೆಂಟೀನಾ ಗೆದ್ದರೆ ಸಾವಿರ ಪ್ಲೇಟ್ ಬಿರಿಯಾನಿ ಉಚಿತವಾಗಿ ನೀಡುತ್ತೇನೆ ಎಂದು ಭರವಸೆ ನೀಡಿದ್ದ ಕೇರಳದ ಹೋಟೆಲ್ ಮಾಲೀಕ ತಮ್ಮ ಮಾತು ಉಳಿಸಿಕೊಂಡಿದ್ದಾರೆ.
ಕೇರಳದ ತ್ರಿಶೂರ್ ಜಿಲ್ಲೆಯ ಪಲ್ಲಿಮೂಲಾ ಪ್ರದೇಶದ ಸಣ್ಣ ಹೋಟೆಲ್ ರಾಕ್‌ಲ್ಯಾಂಡ್ ಮಾಲೀಕ ಶಿಬು ಅವರು ಫಿಫಾ ಕ್ರೀಡಾಕೂಟದ ಆರಂಭಕ್ಕೂ ಮುನ್ನ ಅರ್ಜೆಂಟೀನಾ ಕಪ್ ಗೆದ್ದರೆ ತಮ್ಮ ಮೊದಲ 1,000 ಅತಿಥಿಗಳಿಗೆ 1,000 ಪ್ಲೇಟ್ ಚಿಕನ್ ಬಿರಿಯಾನಿಯನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದ್ದರು. ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾ ಐತಿಹಾಸಿಕ ಗೆಲುವು ಸಾಧಿಸಿದೆ.
ಅರ್ಜೆಂಟೀನಾ ಭರ್ಜರಿ ಜಯ ಗಳಿಸಿರುವ ಕಾರಣ ತಮ್ಮ ಹೋಟೆಲ್‌ಗೆ ಬಂದ ಗ್ರಾಹಕರಿಗೆ ಉಚಿತವಾಗಿ ಬಿರಿಯಾನಿ ಹಂಚಿದ್ದಾರೆ. ಹೀಗಾಗಿ ಅವರ ರಾಕ್‌ಲ್ಯಾಂಡ್ ಹೋಟೆಲ್‌ನ ಹೊರಗೆ ಉದ್ದನೆಯ ಸರತಿ ಸಾಲುಗಳು ಕಂಡುಬಂದವು.

ಇಷ್ಟೇ ಅಲ್ಲದೆ ಅವರು ಮಾತು ನೀಡಿದ್ದ 1,000 ಪ್ಲೇಟ್ ಚಿಕನ್ ಬಿರಿಯಾನಿ ಜೊತೆಗೆ ಜನ ಹೆಚ್ಚಾದ ಕಾರಣ ಅದನ್ನು 1,500 ಪ್ಲೇಟ್‌ಗಳಿಗೆ ಹೆಚ್ಚಿಸಿ, ಜನರಿಗೆ ಉಚಿತವಾಗಿ ಬಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಿಬು, "ಇಷ್ಟು ದಿನ ಇಷ್ಟು ಜನಸಂದಣಿಯನ್ನು ನಾನು ನಿರೀಕ್ಷಿಸಿರಲಿಲ್ಲ. ಹೀಗಾಗಿ ಉಚಿತ ಬಿರಿಯಾನಿಯನ್ನು ಮತ್ತೆ 500ಕ್ಕೆ ಹೆಚ್ಚಿಸಿದ್ದೇನೆ " ಎಂದಿದ್ದಾರೆ.
ಹೊಟೇಲ್‌ನಲ್ಲಿ ಉಚಿತ ಚಿಕನ್ ಬಿರಿಯಾನಿ ವಿತರಣೆಯನ್ನು ಕಾಂಗ್ರೆಸ್ ಶಾಸಕ, ಅರ್ಜೆಂಟೀನಾ ಬೆಂಬಲಿಗ ಶಾಫಿ ಪರಂಬಿಲ್ ಉದ್ಘಾಟಿಸಿ, "36 ವರ್ಷಗಳ ಸುದೀರ್ಘ ಕಾಯುವಿಕೆ ಕೊನೆಗೊಂಡಿದೆ. ಈ ಕ್ಷಣಕ್ಕಾಗಿ ನಾವು ಕಾದಿದ್ದು, ಮೆಸ್ಸಿಯ ವಯಸ್ಸಿಗಿಂತ ಹೆಚ್ಚು. ಅರ್ಜೆಂಟೀನಾ ಸೋತಾಗಲು ನಾವು ಅಭಿಮಾನಿಗಳು, ಅವರು ಗೆದ್ದಾಗಲು ನಾವು ಅಭಿಮಾನಿಗಳು. ನಮಗೆ ಇದು ಉತ್ಸಾಹ" ಎಂದು ಹೇಳಿದ್ದಾರೆ.
"ನಾನು ಮೆಸ್ಸಿ ಮತ್ತು ಅವರ ತಂಡ ಅರ್ಜೆಂಟೀನಾದ ದೊಡ್ಡ ಅಭಿಮಾನಿ. ಎಲ್ಲಾ ಅರ್ಜೆಂಟೀನಾ ಅಭಿಮಾನಿಗಳಂತೆ, ನಾನು ಕೂಡ ಮೆಸ್ಸಿ ಅವರು ಈ ಬಾರಿ ಕಪ್ ಅನ್ನು ಗೆಲ್ಲಬೇಕು ಎಂದೇ ಬಯಸಿದ್ದೆ. ಉಚಿತ ಬಿರಿಯಾನಿಗಳನ್ನು ನೀಡುವ ಮೂಲಕ ನನ್ನ ಸಂತೋಷವನ್ನು ಹಂಚಿಕೊಳ್ಳುತ್ತಿದ್ದೇನೆ" ಎಂದು ಹೋಟೆಲ್ ಮಾಲೀಕ ಶಿಬು ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications