ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಲಿಂಪಿಕ್ಸ್ ಇತಿಹಾಸಕ್ಕೆ ಕೊಡಗಿನಿಂದ ಮತ್ತೊಂದು ಗರಿ ಸೇರ್ಪಡೆ

By Coovercolly Indresh
|
Google Oneindia Kannada News

ಮಡಿಕೇರಿ, ವಿಶ್ವದ ಅತಿದೊಡ್ಡ ಹಾಗೂ ಶ್ರೇಷ್ಠವಾದ ಕ್ರೀಡಾಕೂಟ ಒಲಿಂಪಿಕ್ಸ್ ವಿಶ್ವದ ಐದು ಖಂಡಗಳು ಸೇರಿ ಜಾಗತಿಕ ಮಟ್ಟದ ಅತ್ಯಂತ ಪ್ರಮುಖವಾದ ಈ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯುವುದೇ ಭಾರೀ ಅದೃಷ್ಟವೆನ್ನಬಹುದು. ಇಂತಹ ಮಹಾನ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕನಸು ಬಹುಶಃ ಪ್ರತಿಯೊಬ್ಬ ಕ್ರೀಡಾಪಟುವಿನಲ್ಲಿ ಸಹಜವಾಗಿರುತ್ತದೆ. ಭಾರತದಲ್ಲಿ ಕ್ರೀಡಾ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿರುವ ಕರ್ನಾಟಕದ ಅತ್ಯಂತ ಪುಟ್ಟ ಜಿಲ್ಲೆಯಾದ ಕೊಡಗು ಒಲಿಂಪಿಕ್ಸ್ನಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟಿರುವುದು ಜಿಲ್ಲೆಗೆ ಮಾತ್ರವಲ್ಲ, ಕರ್ನಾಟಕ ರಾಜ್ಯಕ್ಕೆ ಕೂಡ ಹೆಮ್ಮೆಯ ವಿಚಾರವಾಗಿದೆ.

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈತನಕ ಕೊಡಗು ಜಿಲ್ಲೆಯ ಮೂಲದವರಾದ ಒಟ್ಟು 18 ಮಂದಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇದೀಗ ಈ ಕ್ರೀಡಾ ದಿಗ್ಗಜರ ಸಾಲಿಗೆ ಮತ್ತೊಬ್ಬ ಯುವ ಕ್ರೀಡಾಪಟು ಸೇರ್ಪಡೆಯಾಗುತ್ತಿದ್ದಾರೆ. ಸೇಯ್ಲಿಂಗ್ ಎಂಬ ಸಾಹಸಮಯವಾದ ಕ್ರೀಡೆಯಲ್ಲಿ ಕೊಡಗಿನ ಕೇಳಪಂಡ ಗಣಪತಿ ಪ್ರಸಕ್ತ ನಡೆಯಲಿರುವ ಒಲಿಂಪಿಕ್ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಒಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಕೊಡಗಿನ 19ನೆಯ ಕ್ರೀಡಾಪಟು ಇವರಾಗಲಿದ್ದಾರೆ. ಭಾರತದ ಪ್ರತಿಭಾವಂತ ಸೇಯ್ಲಿಂಗ್ ಪಟು (ನಾವಿಕ)ವಾದ ಗಣಪತಿ ತಮ್ಮ ಜೋಡಿ ವರುಣ್ ಠಕ್ಕರ್ ಅವರೊಂದಿಗೆ ಡಬಲ್ಸ್ನಲ್ಲಿ ಮುಂಬರಲಿರುವ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ನಿನ್ನೆ ಓಮನ್‌ನಲ್ಲಿ ನಡೆದ ಏಷ್ಯಾ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಗಣಪತಿ ಹಾಗೂ ವರುಣ್ ಜೋಡಿ ಅರ್ಹತೆ ಪಡೆದುಕೊಂಡಿವೆ. ಇದರೊಂದಿಗೆ ಭಾರತದ ನಾಲ್ವರು ನಾವಿಕರು ಟೋಕಿಯೋ ಒಲಂಪಿಕ್ಸ್ಗೆ ಅರ್ಹತೆ ಗಳಿಸಿಕೊಂಡಿದ್ದಾರೆ.
ಒಲಿಂಪಿಕ್ಸ್ನಲ್ಲಿ ಈತನಕ ಕೊಡಗಿನ 18 ಕ್ರೀಡಾಪಟುಗಳು ದೇಶವನ್ನು ಪ್ರತಿನಿಧಿಸಿದ್ದಾರೆ. ಒಟ್ಟು ಏಳು ಮಾದರಿಯ ವಿವಿಧ ಕ್ರೀಡೆಗಳಲ್ಲಿ 18 ಒಲಿಂಪಿಯನ್‌ಗಳಿದ್ದಾರೆ. ಹಾಕಿ, ಅಥ್ಲೆಟಿಕ್ಸ್, ಬಾಕ್ಸಿಂಗ್, ಟೆನ್ನಿಸ್, ಸ್ಕಾ್ವಷ್, ಬ್ಯಾಡ್‌ಮಿಂಟನ್‌ನಲ್ಲಿ ಈ ತನಕ ಕೊಡಗಿನ ಕ್ರೀಡಾಪಟುಗಳು ಸಾಧನೆ ತೋರಿದ್ದರು. ಇದೀಗ ಈ ಸಾಲಿಗೆ ಸೇಯ್ಲಿಂಗ್ ಕ್ರೀಡೆ ಹೊಸ ಸೇರ್ಪಡೆಯಾಗಿದ್ದು, ಇದರಲ್ಲಿ ಕೇಳಪಂಡ ಗಣಪತಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

Kelapanda Ganapathy to represent India in Olympics

ಈ ಹಿಂದೆ ಹಾಕಿಯಲ್ಲಿ ಕೊಡಗಿನ ಒಟ್ಟು 11 ಮಂದಿ ಒಲಿಂಪಿಯನ್‌ಗಳಾಗಿದ್ದಾರೆ. ಡಾ|| ಮೊಳ್ಳೆರ ಪಿ. ಗಣೇಶ್, ಮನೆಯಪಂಡ ಎಂ. ಸೋಮಯ್ಯ, ಬಾಳೆಯಡ ಕೆ. ಸುಬ್ರಮಣಿ, ಬಿ.ಪಿ. ಗೋವಿಂದ, ಚೆಪ್ಪುಡಿರ ಎಸ್. ಪೂಣಚ್ಚ, ಡಾ|| ಅಂಜಪರವಂಡ ಬಿ. ಸುಬ್ಬಯ್ಯ, ಅರ್ಜುನ್ ಹಾಲಪ್ಪ, ಒಕ್ಕಲಿಗರ ಆರ್. ರಘುನಾಥ್, ಎಸ್.ವಿ. ಸುನಿಲ್, ಸಣ್ಣುವಂಡ ಕೆ. ಉತ್ತಪ್ಪ ಹಾಗೂ ಚೇಂದಂಡ ನಿಕಿನ್ ತಿಮ್ಮಯ್ಯ, ಹಾಕಿ ಒಲಿಂಪಿಯನ್‌ಗಳು ಇವರಲ್ಲದೆ, ಅಥ್ಲೆಟಿಕ್ಸ್ನಲ್ಲಿ ಅಶ್ವಿನಿ ನಾಚಪ್ಪ, ಮಾಚೆಟ್ಟಿರ ಆರ್. ಪೂವಮ್ಮ, ಗುಡ್ಡಂಡ ಜಿ. ಪ್ರಮೀಳಾ , ಸ್ಕಾ್ವಷ್‌ನಲ್ಲಿ ಕುಟ್ಟಂಡ ಜ್ಯೋತ್ಸ್ನಾ ಚಿಣ್ಣಪ್ಪ, ಬಾಕ್ಸಿಂಗ್‌ನಲ್ಲಿ ಚೇನಂಡ ಸಿ. ಮಾಚಯ್ಯ, ಟೆನ್ನಿಸ್‌ನಲ್ಲಿ ಮಚ್ಚಂಡ ರೋಷನ್ ಬೋಪಣ್ಣ ಹಾಗೂ ಬ್ಯಾಡ್‌ಮಿಂಟನ್‌ನಲ್ಲಿ ಮಾಚಿಮಂಡ ಅಶ್ವಿನಿ ಪೊನ್ನಪ್ಪ ಅವರುಗಳು ಇತರ ಕ್ರೀಡೆಗಳಲ್ಲಿ ಒಲಿಂಪಿಯನ್‌ಗಳಾಗಿದ್ದಾರೆ. ಇವರುಗಳ ಪೈಕಿ ಇಬ್ಬರು ಪದಕದ ಸಾಧನೆಯನ್ನೂ ಮಾಡಿದ್ದಾರೆ. 1980ರ ಮಾಸ್ಕೋ ಒಲಿಂಪಿಕ್ಸ್ನಲ್ಲಿ ಎಂ.ಎ . ಸೋಮಯ್ಯ ಅವರು ಚಿನ್ನದ ಪದಕ ಹಾಗೂ 1972ರ ನ್ಯೂನಿಚ್ ಒಲಿಂಪಿಕ್ಸ್ನಲ್ಲಿ ಮೊಳ್ಳೆರ ಪಿ. ಗಣೇಶ್ ಅವರು ಕಂಚಿನ ಪದಕ ಗಳಿಸಿರುವ ಕೊಡಗಿನ ಕ್ರೀಡಾಪಟುಗಳಾಗಿದ್ದಾರೆ.

Kelapanda Ganapathy to represent India in Olympics

ಈ ಬಗ್ಗೆ ಹಾಕಿ ಪಟು ಹಾಗೂ ವೀಕ್ಷಕ ವಿವರಣೆಗಾರರಾದ ಚೆಪ್ಪುಡಿರ ಕಾರ್ಯಪ್ಪ ಅವರು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ಪುಟ್ಟ ಜಿಲ್ಲೆಯಾದ ಕೊಡಗು 19 ಒಲಿಂಪಿಯನ್‌ಗಳನ್ನು ದೇಶಕ್ಕೆ ನೀಡಿರುವುದು ಹೆಮ್ಮೆಯ ವಿಚಾರವಾಗಿದೆ. ಅದರಲ್ಲೂ 19 ಮಂದಿಯ ಪೈಕಿ ಅತ್ಯಲ್ಪ ಜನಸಂಖ್ಯೆ ಹೊಂದಿರುವ ಕೊಡವ ಜನಾಂಗದ ಒಟ್ಟು 15 ಮಂದಿ ಈ ಸಾಧನೆ ಮಾಡಿರುವುದು ಈ ಜನಾಂಗಕ್ಕೂ ಕೂಡ ಭಾರೀ ಹೆಮ್ಮೆಯ ಅಂಶವಾಗಿದೆ. ಈ ರೀತಿಯ ಸಾಧನೆ ದೇಶದಲ್ಲೇ ಅಪರೂಪದ್ದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಒಂದು ಬಾರಿ ಒಲಿಂಪಿಯನ್ ಆದಲ್ಲಿ ಅಂತಹ ಕ್ರೀಡಾಪಟುಗಳಿಗೆ ವಿಶೇಷ ಗೌರವ ಹಾಗೂ ಮಾನ್ಯತೆ ಇದೆ. ಇವರು ಎಂದಿಗೂ ಶ್ರೇಷ್ಠರು ಎಂದು ಅವರು ಹೇಳಿದ್ದಾರೆ. ಸೇಯ್ಲಿಂಗ್‌ನಲ್ಲಿ ಇದೀಗ ಒಲಿಂಪಿಕ್ಸ್ ಅರ್ಹತೆ ಪಡೆದ ಕೇಳಪಂಡ ಗಣಪತಿ ಅವರು ಮೂಲತಃ ಹಾತೂರು ಗ್ರಾಮದವರಾಗಿದ್ದಾರೆ.

English summary
Kodagu's Kelapanda Ganapathy to represent India in Olympics. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X