ಲೀಡ್ಸ್ ಮೈದಾನದಲ್ಲಿ ಕನ್ನಡ ಡಿಂಡಿಮ: ರಾಹುಲ್ ಮಾತು ಕೇಳಿದ ಫ್ಯಾನ್ಸ್ ಫುಲ್ ಖುಷ್
ಕ್ರಿಕೆಟ್ ಆಟಗಾರರು ಆವಾಗ ಆವಾಗ ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡಿ ಸುದ್ದಿಯಲ್ಲಿರುತ್ತಾರೆ. ಹಾಗೆ ಕರ್ನಾಟಕದ ಸ್ಟಾರ್ ಆಟಗಾರರು ಸಹ ಕನ್ನಡ ಮಾತನಾಡಿ ಸುದ್ದಿಯಲ್ಲಿರುತ್ತಾರೆ. ಈ ಆಟಗಾರರ ಸಂಭಾಷಣೆಗಳನ್ನು ನೀವು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹಲವು ಬಾರಿ ಸ್ಟಂಪ್ ಮೈಕ್‌ಗಳಲ್ಲಿ ಕೇಳಿ ಬರಬಹುದು. ಇನ್ನು ಒಂದೇ ಪ್ರಾಂತ್ಯದ ಇಬ್ಬರು ಬ್ಯಾಟರ್‌ಗಳು ಬ್ಯಾಟ್ ಮಾಡುವಾಗ ಇಬ್ಬರು ಆಟಗಾರರು ತಮ್ಮದೇ ಭಾಷೆಯಲ್ಲಿ ಮಾತನಾಡುವುದನ್ನು ನೋಡಿರುತ್ತಿರಿ. ಅದೇ ರೀತಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂತಹ ಭಾಷಾ ಪ್ರೇಮ ಬೆಳಕಿಗೆ ಬಂದಿದೆ.
ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಲೀಡ್ಸ್ ಅಂಗಳದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್‌ಗಳಿಂದ ಸೋಲು ಕಂಡಿತು. ಈ ಪಂದ್ಯದಲ್ಲಿ ಕರ್ನಾಟಕದ ಪರ ಮೂವರು ಆಟಗಾರರು ಮೈದಾನಕ್ಕೆ ಇಳಿದಿದ್ದರು ಎಂಬುದೇ ವಿಶೇಷ. ಇದರಲ್ಲಿ ಇಬ್ಬರು ಬ್ಯಾಟರ್‌ಗಳು ಹಾಗೂ ಒಬ್ಬ ಬೌಲರ್ ಭಾರತವನ್ನು ಪ್ರತಿನಿಧಿಸಿದರು. ಈ ವೇಳೆ ಕನ್ನಡದ ಹಲವು ಪದಗಳು ಸ್ಟಂಪ್ ಮೈಕ್‌ನಲ್ಲಿ ಕ್ಯಾಚ್ ಆಗಿವೆ. ಈ ಮೂಲಕ ಆಟಗಾರರು ಅಭಿಮಾನಿಗಳ ಮನ ಗೆದ್ದಿದ್ದಾರೆ.

ಟೀಮ್ ಇಂಡಿಯಾ ಪರ ಮೊದಲ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಅವರನ್ನು ಹೊರತು ಪಡಿಸಿ, ಉಳಿದ ಇಬ್ಬರು ಆಟಗಾರರು ತಂಡಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ. ಇದೇ ವೇಳೆ ಪ್ರಸಿದ್ಧ್ ಕೃಷ್ಣಾ ಬೌಲಿಂಗ್ ಮಾಡುವಾಗ ಸ್ಲಿಪ್‌ನಲ್ಲಿ ನಿಂತಿದ್ದ ಕೆಎಲ್ ರಾಹುಲ್, ಪ್ರಸಿದ್ಧ್‌ಗೆ ಬೌಲಿಂಗ್ ಸಲಹೆ ನೀಡಿದರು. ಇದನ್ನು ಕನ್ನಡದಲ್ಲಿ ನೀಡಿ ಗಮನ ಸೆಳೆದರು.
ಮಗ ಚೆನ್ನಾಗ್ ಹೋಗ್ತಿದೆ ಮಗ #SonySportsNetwork #GroundTumharaJeetHamari #ENGvIND #NayaIndia #DhaakadIndia #TeamIndia #ExtraaaInnings | @KLRahul @prasidh43 pic.twitter.com/fNbb5rl39J
— Sony Sports Network (@SonySportsNetwk) June 24, 2025
ಮಗ.. ಪ್ರಸಿದ್ಧ್.. ಪ್ರಸಿದ್ಧ್... ಹೀಗೆ ಇರಲಿ.. ಒಂದು ಹೋದರೆ ಪರ್ವಾಗಿಲ್ಲ ಎಂದು ರಾಹುಲ್ ತಿಳಿಸುತ್ತಾರೆ. ಇವರ ಈ ಮಾತಿಗೆ ಪ್ರಸಿದ್ಧ್, ನಾನು ಬೌಲನ್ನು ಒಳಗಡೆ ತರಲು ಪ್ರಯತ್ನ ಮಾಡ್ತಾ ಇದ್ದೇನೆ ಎಂದು ಹೇಳ್ತಾರೆ. ಇದಕ್ಕೆ ರಾಹುಲ್ ಹೀಗೆ ಮಾಡ ಬೇಡ. ಈಗ ಹಾಕುತ್ತಿರುವ ಬೌಲ್ ಚೆನ್ನಾಗಿದೆ. ಹೀಗೆ ಇರಲಿ ಎಂದು ಹೇಳುತ್ತಾರೆ. ಇವರ ಈ ಸಂಭಾಷಣೆ ಸ್ಟಂಪ್ ಮೈಕ್‌ನಲ್ಲಿ ಕ್ಯಾಪ್ಚರ್ ಆಗಿದ್ದು ಕರ್ನಾಟಕದ ಅಭಿಮಾನಿಗಳ ಮನ ಗೆದ್ದಿದೆ.
ಬೇರೆ ಭಾಷೆ ಮಾತನಾಡುವುದು ಏಕೆ?
ಅಂದಹಾಗೆ ಮೈದಾನದಲ್ಲಿ ಬೇರೆ ಭಾಷೆಗಳನ್ನು ಮಾತನಾಡುವುದು ಏಕೆ ಎಂಬ ಸಂಶಯ ಕಾಡದೆ ಇರದು. ತಾವು ಮಾಡಿಕೊಂಡ ರಣ ತಂತ್ರಗಳು ಎದುರಾಳಿ ತಂಡಕ್ಕೆ ತಿಳಿಯದಿರಲಿ ಎಂಬ ಉದ್ದೇಶಕ್ಕಾಗಿ ಆಟಗಾರರು, ಪ್ರಾದೇಶಿಕ ಭಾಷೆಗಳ ಮೊರೆ ಹೋಗುತ್ತಾರೆ. ಹಾಗೇ ಕರ್ನಾಟಕದ ಆಟಗಾರರು ಮೈದಾನದಲ್ಲಿದ್ದಾಗ ಕನ್ನಡ ಪದಗಳನ್ನು ಆಗಾಗ ಕೇಳುತ್ತಲೇ ಇರುತ್ತೇವೆ.












Click it and Unblock the Notifications