Vijay Hazare Trophy: ಮತ್ತೆ ಮಯಾಂಕ್ ಶತಕ; ನಾಗಾಲ್ಯಾಂಡ್ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್ ತಲುಪಿದ ಕರ್ನಾಟಕ
ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕದ ಗೆಲುವಿನ ಓಟ ಮುಂದುವರೆದಿದೆ. ಭಾನುವಾರ ನಡೆದ ಲೀಗ್ ಹಂತದ ಕೊನೆಯ ಸುತ್ತಿನ ಪಂದ್ಯದಲ್ಲಿ ನಾಗಾಲ್ಯಾಂಡ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಕರ್ನಾಟಕ ಕ್ವಾರ್ಟರ್ ಫೈನಲ್ ತಲುಪಿದೆ. ನಾಯಕ ಮಯಾಂಕ್ ಅಗರ್ವಾಲ್ ತಮ್ಮ ಉತ್ತಮ ಫಾರ್ಮ್ ಮುಂದುವರೆಸಿದ್ದು ನಾಲ್ಕನೇ ಶತಕ ಸಿಡಿಸಿದರು.
ಅಹಮದಾಬಾದ್‌ನ ಗುಜರಾತ್ ಕಾಲೇಜ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ನಾಗಾಲ್ಯಾಂಡ್ ಕರ್ನಾಟಕದ ಶಿಸ್ತಿನ ಬೌಲಿಂಗ್ ದಾಳಿಯ ಮುಂದೆ ರನ್ ಗಳಿಸಲು ಪರದಾಡಿತು. ಚೇತನ್ ಬಿಶ್ಟ್ 77 ರನ್ ಮತ್ತು ನಾಯಕ ಆರ್ ಜೋನಾಥನ್ 51 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರಿಂದ ಉತ್ತಮ ಆಟ ಬರಲಿಲ್ಲ.

ಕರ್ನಾಟಕದ ಪರವಾಗಿ ಶ್ರೇಯಸ್ ಗೋಪಾಲ್ 4 ವಿಕೆಟ್ ಪಡೆಯುವ ಮೂಲಕ ನಾಗಾಲ್ಯಾಂಡ್‌ಗೆ ಶಾಕ್ ನೀಡಿದರು. ಅಭಿಲಾಶ್ ಶೆಟ್ಟಿ 2 ವಿಕೆಟ್ ಪಡೆದರೆ, ವಾಸುಕಿ ಕೌಶಿಕ್, ಹಾರ್ದಿಕ್ ರಾಜ್, ವಿದ್ಯಾಧರ್ ಪಾಟೀಲ್ ಮತ್ತು ನಿಕಿನ್ ಜೋಸ್ ತಲಾ ಒಂದು ವಿಕೆಟ್ ಪಡೆದರು.
ನಾಲ್ಕನೇ ಶತಕ ಸಿಡಿಸಿದ ಮಯಾಂಕ್
ವಿಜಯ್ ಹಜಾರೆ ಟ್ರೋಫಿ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ನಾಯಕ ಮಯಾಂಕ್ ಅಗರ್ವಾಲ್ ಮತ್ತೊಮ್ಮೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ನಿಕಿನ್ ಜೋಸ್ 1 ರನ್ ಗಳಿಸಿ ಔಟಾದ ಬಳಿಕ ನಾಗಾಲ್ಯಾಂಡ್‌ಗೆ ಎರಡನೇ ವಿಕೆಟ್ ಪಡೆಯಲು ನಾಯಕ ಮಯಾಂಕ್ ಅಗರ್ವಾಲ್ ಮತ್ತು ಅನೀಶ್ ಅವಕಾಶವನ್ನೇ ನೀಡಲಿಲ್ಲ.
ಎರಡನೇ ವಿಕೆಟ್‌ಗೆ ಈ ಜೋಡಿ ಅಜೇಯ 197 ರನ್ ಕಲೆಹಾಕುವ ಮೂಲಕ ರಾಜ್ಯಕ್ಕೆ 9 ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟರು. ನಾಯಕ ಮಯಾಂಕ್ ಅಗರ್ವಾಲ್ 119 ಎಸೆತಗಳಲ್ಲಿ 9 ಬೌಂಡರಿ 4 ಸಿಕ್ಸರ್ ಸಹಿತ 116 ರನ್ ಗಳಿಸಿದರು. ಅನೀಶ್ 95 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿ ಮಿಂಚಿದರು.
ಈ ಗೆಲುವಿನ ಮೂಲಕ ಸಿ ಗುಂಪಿನಲ್ಲಿ ಕರ್ನಾಟಕ 7 ಪಂದ್ಯಗಳಲ್ಲಿ 6 ರಲ್ಲಿ ಗೆದ್ದು 24 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆಯುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಪಂಜಾಬ್ ಸಿ ಗುಂಪಿನಲ್ಲಿ ಮೊದಲನೇ ಸ್ಥಾನದಲ್ಲಿದ್ದು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ಉತ್ತಮ ಪ್ರದರ್ಶನ ನೀಡುತ್ತಿದ್ದು ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದೆ.












Click it and Unblock the Notifications