Vijay Hazare Trophy: ವಿಜಯ್ ಹಜಾರೆ ಟ್ರೋಫಿಗೆ ಬಲಿಷ್ಠ ಕರ್ನಾಟಕ ತಂಡ; ಸ್ಟಾರ್ ಆಟಗಾರನಿಗೆ ಇಲ್ಲ ಸ್ಥಾನ
ಡಿಸೆಂಬರ್ 21ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಹಿರಿಯ ಆಟಗಾರ ಮನೀಷ್ ಪಾಂಡೆಯನ್ನು ತಂಡದಿಂದ ಕೈಬಿಡಲಾಗಿದ್ದು, ಮಯಾಂಕ್ ಅಗರ್ವಾಲ್‌ಗೆ ನಾಯಕನ ಜವಾಬ್ದಾರಿ ನೀಡಲಾಗಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಲೀಗ್ ಹಂತದಲ್ಲೇ ಹೊರ ಬಿದ್ದಿದ್ದ ಕರ್ನಾಟಕ, ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ವಾಪಸಾತಿ ಮಾಡುವ ವಿಶ್ವಾಸದಲ್ಲಿದೆ.
ಡಿಸೆಂಬರ್ 21ರಿಂದ ಪಂದ್ಯಾವಳಿ ಆರಂಭವಾಗಲಿದ್ದು, ಜನವರಿ 5ರವರೆಗೆ ಲೀಗ್ ಹಂತದ ಪಂದ್ಯಗಳು ನಡೆಯಲಿವೆ. ಜನವರಿ 18ರಂದು ಫೈನಲ್ ಪಂದ್ಯ ನಡೆಯಲಿದೆ. ಕರ್ನಾಟಕ ತಂಡ ಸಿ ಗುಂಪಿನಲ್ಲಿ ಆಡಲಿದ್ದು ಡಿಸೆಂಬರ್ 21ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ತಂಡವನ್ನು ಎದುರಿಸಲಿದೆ.

ಐಪಿಎಲ್‌ನಲ್ಲಿ ಹರಜಾಗದೆ ಉಳಿದಿದ್ದ ಮಯಾಂಕ್ ಅಗರ್ವಾಲ್ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಅಗರ್ವಾಲ್‌ಗೆ ವಾಪಸಾತಿ ಮಾಡಲು ಉತ್ತಮ ಅವಕಾಶ ಸಿಕ್ಕಂತಾಗಿದೆ.
ಶ್ರೇಯಸ್ ಗೋಪಾಲ್ ಉಪನಾಯಕ
ಅಚ್ಚರಿ ಎನ್ನುವಂತೆ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಕರ್ನಾಟಕ ತಂಡದ ಉಪನಾಯಕರಾಗಿ ನೇಮಿಸಲಾಗಿದೆ. ಕಳೆದ ಆವೃತ್ತಿಯಲ್ಲಿ ಕೇರಳ ತಂಡಕ್ಕಾಗಿ ಆಡಿದ್ದ ಶ್ರೇಯಸ್ ಗೋಪಾಲ್ ಈ ಬಾರಿ ಮತ್ತೆ ರಾಜ್ಯ ತಂಡಕ್ಕೆ ಮರಳಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅವರು 7 ಪಂದ್ಯಗಳಲ್ಲಿ 14 ವಿಕೆಟ್ ಪಡೆಯುವ ಮೂಲಕ ರಾಜ್ಯದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು.
ಕರ್ನಾಟಕ ತಂಡದ ಮಾಜಿ ನಾಯಕ, ಹಿರಿಯ ಆಟಗಾರ ಮನೀಶ್ ಪಾಂಡೆಯವರನ್ನು ತಂಡದಿಂದ ಕೈಬಿಡಲಾಗಿದೆ. ಕರ್ನಾಟಕ ತಂಡದಲ್ಲಿ ಇನ್ನು ಮನೀಶ್ ಪಾಂಡೆಗೆ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ.
ಕರ್ನಾಟಕ ನಾಲ್ಕು ಬಾರಿ ವಿಜಯ್ ಹಜಾರೆ ಟ್ರೋಫಿ ಚಾಂಪಿಯನ್ ಆಗಿದೆ. 2019-20ರಲ್ಲಿ ಕೊನೆಯ ಬಾರಿಗೆ ಪ್ರಶಸ್ತಿ ಗೆದ್ದಿರುವ ಕರ್ನಾಟಕ 5ನೇ ಬಾರಿ ಚಾಂಪಿಯನ್ ಆಗುವ ಗುರಿ ಹೊಂದಿದೆ.
ಕರ್ನಾಟಕ ತಂಡ
ಮಯಾಂಕ್ ಅಗರ್ವಾಲ್ (ನಾಯಕ), ಶ್ರೇಯಸ್ ಗೋಪಾಲ್ (ಉಪ-ನಾಯಕ), ನಿಕಿನ್ ಜೋಸ್, ಕೆವಿ ಅನೀಶ್, ಆರ್ ಸ್ಮರಣ್, ಕೆಎಲ್ ಶ್ರೀಜಿತ್, ಅಭಿನವ್ ಮನೋಹರ್, ಹಾರ್ದಿಕ್ ರಾಜ್, ವೈಶಾಕ್ ವಿಜಯ್‌ಕುಮಾರ್, ವಾಸುಕಿ ಕೌಶಿಕ್, ಮನೋಜ್ ಭಾಂಡಗೆ, ವಿದ್ಯಾದರ್ ಪಾಟೀಲ್, ಕಿಶನ್ ಬೆದರೆ, ಅಭಿಲಾಶ್ ಶೆಟ್ಟಿ, ಪ್ರವೀಣ್ ದುಬೆ, ಲವನಿತ್ ಸಿಸೋಡಿಯಾ.












Click it and Unblock the Notifications