ಅತಿಯಾದ ನೀರು ಕಾಳಜಿ ಬೇಕಿಲ್ಲ, ಒಂದು ಸಲ ನೆಟ್ಟರೆ ವರ್ಷ ಪೂರ್ತಿ ಹೂ ಬಿಡುವ ಸುಂದರ ಸಸ್ಯಗಳಿವು
ಮನೆ ಮುಂದೆ ಹೂವುಗಳಿಂದ ತುಂಬಿರುವ ಗಾರ್ಡನ್ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಹೂದೋಟದಲ್ಲಿರುವ ಗಿಡದಲ್ಲಿ ಸದಾ ಕಾಲ ಹೂವು ನಳನಳಿಸುತ್ತಿರಬೇಕು ಎನ್ನುವ ಕಾರಣಕ್ಕೆ ಕೆಲವರು ಪ್ರತೀ ಋತುವಿಗೂ ಸಸ್ಯಗಳನ್ನು ಬದಲಿಸುತ್ತಿರುತ್ತಾರೆ. ಆದರೆ ಹಾಗೆ ಮಾಡುವ ಅವಶ್ಯಕತೆ ಇಲ್ಲ. ಕೆಲವು ಗಿಡಗಳನ್ನು ಒಂದು ಸಲ ನೆಟ್ಟರೆ ಅದು ವರ್ಷಪೂರ್ತಿ ಹೂವು ಬಿಡುತ್ತಿರುತ್ತದೆ. ಅಲ್ಲದೆ ಈ ಸಸ್ಯಗಳಿಗೆ ವಿಶೇಷ ಕಾಳಜಿಯ ಅಗತ್ಯವೂ ಇರುವುದಿಲ್ಲ. ಅತಿಯಾದ ನೀರು ಹಾಕುವ ಅನಿವಾರ್ಯತೆಯೂ ಇಲ್ಲ. ಆಗೊಮ್ಮೆ ಈಗೊಮ್ಮೆ ಈ ಗಿಡಗಳತ್ತ ಗಮನ ಹರಿಸಿದರೆ ಸಾಕು. ವರ್ಷಪೂರ್ತಿ ನಿಮ್ಮ ಮನೆಯ ಹೂದೋಟದಲ್ಲಿ ಬಣ್ಣ ಬಣ್ಣದ ಹೂವುಗಳು ಅರಳಿ ನಿಲ್ಲುತ್ತದೆ.
1.ದಾಸವಾಳ: ಬಹುತೇಕ ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಕಡು ಬರುವ ಗಿಡ ಇದು. ದಾಸವಾಳ ಗಿಡ ಪ್ರತಿದಿನ ದೊಡ್ಡ ಪ್ರಮಾಣದಲ್ಲಿಯೇ ಹೂವು ಬಿಡುತ್ತದೆ. ಇದರಲ್ಲಿ ಅನೇಕ ಬಣ್ಣಗಳ ಅನೇಕ ವಿನ್ಯಾಸದ ದಾಸವಾಳ ಲಭ್ಯವಿರುತ್ತದೆ. ಎಲ್ಲಾ ಗಿಡಗಳೂ ಒಂದೇ ರೀತಿ ಆಗಿರುತ್ತವೆ. ಒಮ್ಮೆ ಗಿಡ ಜೀವ ಹಿಡಿಯಿತು ಎಂದಾದರೆ ಮತ್ತೆ ಚಿಂತಿಸಬೇಕಿಲ್ಲ, ವರ್ಷ ಪೂರ್ತಿ ಗಿಡ ತುಂಬಾ ಹೂವು ಅರಳಿ ನಿಲ್ಲುತ್ತದೆ. ಅದಕ್ಕೆ ಬಿಸಿಲು ಚೆನ್ನಾಗಿ ಬಿದ್ದರೆ ಸಾಕು. ಹೆಚ್ಚು ನೀರಿನ ಅಗತ್ಯವೂ ಇಲ್ಲ.

2.ಬೌಗೆನ್ವಿಲ್ಲಾ: ಇದು ಗಟ್ಟಿಮುಟ್ಟಾದ ಸಸ್ಯ. ಇದರ ಸೌಂದರ್ಯ ಎಂಥವರನ್ನೂ ಮಂತ್ರ ಮುಗ್ಧವಾಗಿಸದೇ ಇರದು. ಇದು ಕೂಡಾ ಅನೇಕ ಬಣ್ಣಗಳಲ್ಲಿ ಸಿಗುತ್ತದೆ. ಕಡಿಮೆ ನೀರು ಹಾಕಿದಷ್ಟೂ ಅದು ಹೆಚ್ಚು ಹೂವು ಬಿಡುತ್ತದೆ. ಇದರ ಪ್ರಕಾಶಮಾನವಾದ, ಕಾಗದದಂತಹ ಹೂವುಗಳು ಬೆಚ್ಚಗಿನ ವಾತಾವರಣದಲ್ಲಿ ಸಲೀಸಾಗಿ ಅರಳಿ ನಿಲ್ಲುತ್ತದೆ.
3.ಇಕ್ಸೊರಾ: ಸಾಂದ್ರ ಮತ್ತು ವರ್ಣಮಯವಾದ ಇಕ್ಸೊರಾ ಕೆಂಪು, ಹಳದಿ, ಗುಲಾಬಿ ಅಥವಾ ಕಿತ್ತಳೆ ಬಣ್ಣದ ಹೂವುಗಳನ್ನು ಬಿಡುತ್ತದೆ. ದಟ್ಟವಾದ ಸಮೂಹಗಳಲ್ಲಿ ಬೆಳೆಯುತ್ತದೆ. ಇದನ್ನು ಸಣ್ಣ ಪಾಟ್‌ಗಳಲ್ಲಿಯೂ ಬೆಳೆಸಬಹುದು. ಒಂದು ಮೂಲೆಯಲ್ಲಿ ಇಟ್ಟರೆ ಅಚ್ಚುಕಟ್ಟಾದ, ಪೊದೆಯ ರೂಪದಲ್ಲಿ ಬೆಳೆದು ನಿಲ್ಲುತ್ತದೆ.
4.ಏಂಜೆಲೋನಿಯಾ: ಬಿಸಿ ವಾತಾವರಣಕ್ಕೆ ಸೂಕ್ತವಾದ ಏಂಜೆಲೋನಿಯಾ ಗಿಡಕ್ಕೆ ಹೆಚ್ಚಿನ ಕಾಳಜಿ ಬೇಕಿಲ್ಲ. ಸಣ್ಣ ಜಾಗಗಳಲ್ಲಿಯೂ ಸುಂದರವಾಗಿ ಬೆಳೆಯುತ್ತದೆ. ಇದು ವರ್ಷವಿಡೀ ಸ್ಥಿರವಾದ ಹೂವುಗಳನ್ನು ನೀಡುತ್ತದೆ.

5.ಶ್ರಿಂಪ್ ಪ್ಲಾಂಟ್: ಇದನ್ನು ಸಿಗಡಿ ಗಿಡ ಎಂದೂ ಕರೆಯುತ್ತಾರೆ. ಇದು ವಿಲಕ್ಷಣ ಸಿಗಡಿ ಆಕಾರದ ಹೂವುಗಳನ್ನು ಬಿಡುತ್ತದೆ. ಈ ಗಿಡ ನೆಟ್ಟರೆ ಬಹಳ ಬೇಗ ಜೀವ ಪಡೆದುಕೊಳ್ಳುತ್ತದೆ. ಪರೋಕ್ಷ ಸೂರ್ಯನ ಬೆಳಕು ಮತ್ತು ಸ್ವಲ್ಪ ತೇವಾಂಶವುಳ್ಳ ಮಣ್ಣಿನಲ್ಲಿ ಇರಿಸಿದರೆ ಸಾಕು ವರ್ಷಪೂರ್ತಿ ಸುಂದರವಾಗಿ ಅರಳುತ್ತದೆ.
6.ವ್ಯಾಕ್ಸ್ ಬೆಗೋನಿಯಾ: ಚಿಕ್ಕದಾದರೂ ಪ್ರಭಾವಶಾಲಿಯಾದ, ವ್ಯಾಕ್ಸ್ ಬಿಗೋನಿಯಾ ಕನಿಷ್ಠ ಶ್ರಮದಿಂದ ನಿರಂತರ ಹೂವುಗಳನ್ನು ಉತ್ಪಾದಿಸುತ್ತದೆ. ಇದು ಒಳಾಂಗಣ ಮತ್ತು ಹೊರಾಂಗಣ ಎಲ್ಲಿ ಬೇಕಾದರೂ ಇದನ್ನು ಇಡಬಹುದು. ಇದು ಬಹುಮುಖ ಸಸ್ಯವಾಗಿದೆ.
7.ಕಲಾಂಚೋ: ಕಲಾಂಚೋ ತನ್ನ ದಪ್ಪ ಎಲೆಗಳಲ್ಲಿ ನೀರನ್ನು ಸಂಗ್ರಹಿಸುತ್ತದೆ.ಆದ್ದರಿಂದ ಇದಕ್ಕೆ ಬಹಳ ಕಡಿಮೆ ನೀರು ಹಾಕಿದರೆ ಸಾಕು. ಚಳಿಗಾಲದಲ್ಲಿ ಇದು ಉತ್ತಮವಾಗಿ ಅರಳುತ್ತದೆಯಾದರೂ, ವರ್ಷಪೂರ್ತಿ ಆರೋಗ್ಯಕರವಾಗಿರುತ್ತದೆ.
8.ಗಾರ್ಡೇನಿಯಾ: ಸುವಾಸನೆ ಭರಿತ ಹೂವುಗಳನ್ನು ಈ ಗಿಡ ಬಿಡುತ್ತದೆ. ಇದರ ಕೆನೆಭರಿತ ಬಿಳಿ ಹೂವುಗಳು ದಿವ್ಯ ವಾಸನೆಯನ್ನು ನೀಡುತ್ತವೆ. ಇದಕ್ಕೆ ಸ್ವಲ್ಪ ಆಮ್ಲೀಯ ಮಣ್ಣನ್ನು ಬಳಸಿದರೆ ಸಾಕು. ಅತಿಯಾದ ನೀರು ಕೊಡಲೇ ಬಾರದು. ಸುವಾಸನೆ ಭರಿತ ಹೂವು ವರ್ಷ ಪೂರ್ತಿ ಮನೆ ಮುಂದೆ ಅರಳುತ್ತದೆ.
9.ಕ್ರೌನ್ ಆಫ್ ಥ್ರೋನ್ (ಮುಳ್ಳಿನ ಕಿರೀಟ ): ಈ ಗಿಡಕ್ಕೆ ಎಷ್ಟು ಸಮಯ ಬೇಕಾದರೂ ನೀರು ಹಾಕದೇ ಇರಬಹುದು. ಇದರ ಮುಳ್ಳಿನ ಕಾಂಡಗಳು ಮತ್ತು ಸಣ್ಣ ಹೂವುಗಳನ್ನು ಬಿಡುತ್ತದೆ. ಇದು ಸೂರ್ಯನ ಬೆಳಕಿನಲ್ಲಿ ಬೆಳೆಯುತ್ತದೆ. ವರ್ಷವಿಡೀ ಇದರತ್ತ ಗಮನವೇ ನೀಡದಿದ್ದರೂ ಇದು ತನ್ನ ಪಾಡಿಗೇ ಹೂವು ಬಿಡುತ್ತಲೇ ಇರುತ್ತದೆ.
10.ಚೆನಿಲ್ಲೆ ಸಸ್ಯ: ಇದನ್ನು 'ರೆಡ್ ಹಾಟ್ ಕ್ಯಾಟೈಲ್' ಅಥವಾ 'ಬೆಕ್ಕಿನ ಬಾಲದ ಗಿಡ' ಎಂದು ಕೂಡಾ ಕರೆಯಲಾಗುತ್ತದೆ. ಮೃದುವಾದ ಬಾಲಗಳನ್ನು ಹೋಲುವ ಉದ್ದವಾದ, ಕೆಂಪು ಹೂವುಗಳನ್ನು ಹೊಂದಿರುವ ಈ ಸಸ್ಯವು ವಿಚಿತ್ರವಾದ ಸ್ಪರ್ಶವನ್ನು ನೀಡುತ್ತದೆ. ಇದಕ್ಕೆ ಸ್ವಲ್ಪ ಹೆಚ್ಚು ನೀರು ಮತ್ತು ಆಹಾರ ಬೇಕಾಗುತ್ತದೆ.ಇದು ನಿಮ್ಮ ಗಾರ್ಡನ್‌ನ ಸೌಂದರ್ಯವನ್ನು ಹೆಚ್ಚಿಸುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications