RCB vs RR: ಜಿತೇಶ್ ಶರ್ಮಾ ದೇವ್ರು ಗುರು ನೀನು ಎಂದ ಆರ್‌ಸಿಬಿ ಫ್ಯಾನ್ಸ್!
ಅಣ್ಣಾವ್ರು ಡಾ. ರಾಜ್‌ಕುಮಾರ್ ಮತ್ತು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಹುಟ್ಟುಹಬ್ಬದ ದಿನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತವರಿನಲ್ಲಿ 2025ರ ಐಪಿಎಲ್‌ನ ಮೊದಲ ಗೆಲುವು ಸಾಧಿಸುವ ಮೂಲಕ ಸೋಲಿನ ಸರಪಳಿಯನ್ನು ಮುರಿದಿದೆ. ಗುರುವಾರ ನಡೆದ ರೋಚಕ ಪಂದ್ಯದಲ್ಲಿ ಆರ್‌ಸಿಬಿ 11 ರನ್‌ಗಳ ರೋಚಕ ಗೆಲುವು ಸಾಧಿಸಿದೆ.
2025ರ ಆವೃತ್ತಿಯಲ್ಲಿ ತವರಿನ ಹೊರಗೆ ಆಡಿದ ಐದೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೂ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳನ್ನು ಸೋತಿದ್ದು ಚಿಂತೆಗೆ ಕಾರಣವಾಗಿತ್ತು. ಆದರೆ ಕೊನೆಗೂ ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ ಗುರುವಾರ ಆರ್ ಸಿಬಿ ತವರಿನಲ್ಲಿ ಈ ಆವೃತ್ತಿಯ ಮೊದಲ ಗೆಲುವು ದಾಖಲಿಸಿದೆ. ಒಂದು ತಂಡವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ ಆರ್ ಸಿಬಿ ಸೋಲುವ ಪಂದ್ಯವನ್ನು ಗೆದ್ದುಕೊಂಡಿದೆ.

ಎಚ್ಚರಿಕೆ ಬ್ಯಾಟಿಂಗ್ ಮಾಡಿದ ಆರ್ ಸಿಬಿ
ಮೊದಲ ಮೂರು ಪಂದ್ಯಗಳಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡಲು ಹೋಗಿದ್ದ ಆರ್ ಸಿಬಿ ಬ್ಯಾಟರ್ ಗಳು ಬೇಗನೆ ವಿಕೆಟ್ ಕಳೆದುಕೊಂಡಿದ್ದರು. ತವರಿನಲ್ಲಿ ನಾಲ್ಕನೇ ಬಾರಿಯೂ ಟಾಸ್ ಸೋತ ಆರ್ ಸಿಬಿ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಆದರೆ ಈ ಬಾರಿ ಫಿಲ್ ಸಾಲ್ಟ್ ಮತ್ತು ಕೊಹ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಆರಂಭಿಸಿದರು. ವಿಕೆಟ್ ಬೀಳದಂತೆ ನೋಡಿಕೊಂಡ ಈ ಜೋಡಿ ಮೊದಲ ವಿಕೆಟ್‌ಗೆ 61 ರನ್ ಕಲೆಹಾಕಿತು. ಸಾಲ್ಟ್ 26 ರನ್ ಗಳಿಸಿದರು. ಬಳಿಕ ಬಂದ ದೇವದತ್ ಕೊಹ್ಲಿ ಜೊತೆಗೂಡಿ ಎರಡನೇ ವಿಕೆಟ್‌ಗೆ 94 ರನ್ ಕಲೆಹಾಕಿದರು. ಕೊಹ್ಲಿ 70 ರನ್ ಗಳಿಸಿದರೆ, ಪಡಿಕ್ಕಲ್ 50 ರನ್ ಗಳಿಸಿದರು. ನಾಯಕ ರಜತ್ ಪಟಿದಾರ್ ಕೇವಲ 1 ರನ್ ಗಳಿಸಿ ಔಟಾದರು. ಟಿಮ್ ಡೇವಿಡ್ 15 ಎಸೆತಗಳಲ್ಲಿ 23 ರನ್ ಗಳಿಸಿದರೆ, ಜಿತೇಶ್ ಶರ್ಮಾ 10 ಎಸೆತಗಳಲ್ಲಿ 20 ರನ್ ಗಳಿಸಿದರು. ಆರ್ ಸಿಬಿ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್ ಕಲೆಹಾಕಿತು.
ಸುಲಭ ಗೆಲುವಿನ ಅವಕಾಶ ಕೈಚೆಲ್ಲಿದ ಆರ್ ಆರ್
206 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ಸ್ಫೋಟಕ ಆರಂಭ ಪಡೆಯಿತು. ವೈಭವ್ ಸೂರ್ಯವಂಶಿ ಮತ್ತು ಜೈಸ್ವಾಲ್ ಕೇವಲ 4.2 ಓವರ್ ಗಳಲ್ಲೇ ಮೊದಲ ವಿಕೆಟ್‌ಗೆ 52 ರನ್ ಕಲೆಹಾಕಿದರು. ವೈಭವ್ 12 ಎಸೆತಗಳಲ್ಲಿ 16 ರನ್ ಗಳಿಸಿ ಔಟಾದರು. ಬಳಿಕ ಜೈಸ್ವಾಲ್ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದರು. 5.5 ಓವರ್ ಗಳಲ್ಲಿ 72 ರನ್ ಗಳಿಸಿದ್ದ ರಾಜಸ್ಥಾನ ರಾಯಲ್ಸ್ ಜೈಸ್ವಾಲ್ ಅವರ ವಿಕೆಟ್ ಕಳೆದುಕೊಂಡಿತು. ಜೈಸ್ವಾಲ್ 19 ಎಸೆತಗಳಲ್ಲಿ 49 ರನ್ ಗಳಿಸಿ ಔಟಾದರು.
9 ಓವರ್ ಗಳಲ್ಲೇ 110 ರನ್ ಗಳಿಸಿದ್ದ ರಾಜಸ್ಥಾನ ರಾಯಲ್ಸ್ ಸುಲಭ ಗೆಲುವಿನ ಕನಸು ಕಂಡಿತ್ತು. ಆದರೆ ಆರ್ ಸಿಬಿ ಬೌಲರ್ ಗಳು ವಿಕೆಟ್ ಪಡೆಯುವ ಮೂಲಕ ಶಾಕ್ ಕೊಟ್ಟರು. ಆದರೂ 18ನೇ ಓವರ್ ನಲ್ಲಿ 22 ರನ್ ಬಾರಿಸುವ ಮೂಲಕ ರಾಜಸ್ಥಾನ ರಾಯಲ್ಸ್ ಮತ್ತೆ ಗೆಲುವಿನ ಸನಿಹ ಬಂದಿತು. ಆದರೆ 19ನೇ ಓವರ್ ಇಡೀ ಪಂದ್ಯದ ದಿಕ್ಕನ್ನೇ ಬದಲಾಯಿಸಿತು.
ಕೊನೆಯ 2 ಓವರ್ ನಲ್ಲಿ ಆರ್ ಆರ್ ಗೆಲುವಿಗೆ 17 ರನ್ ಬೇಕಿತ್ತು. ಜೋಶ್ ಹೇಜಲ್‌ವುಡ್ 19ನೇ ಓವರ್ ನಲ್ಲಿ ಕೇವಲ 1 ರನ್ ನೀಡಿ 2 ವಿಕೆಟ್ ಪಡೆಯುವ ಮೂಲಕ ಆರ್ ಸಿಬಿ ಮೇಲುಗೈ ಸಾಧಿಸುವಂತೆ ನೋಡಿಕೊಂಡರು. ಕೊನೆಯ ಎರಡು ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡ ಆರ್ ಆರ್ 11 ರನ್‌ಗಳಿಂದ ಸೋಲು ಕಂಡಿತು.
ಜಿತೇಶ್ ಶರ್ಮಾ ದೇವ್ರು ನೀನು
ಇಡೀ ಪಂದ್ಯದ ಫಲಿತಾಂಶ ಬದಲಿಸಿದ್ದೇ ಜಿತೇಶ್ ಶರ್ಮಾ, 47 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಧ್ರುವ್ ಜುರೆಲ್ ಅವರು ಜೋಶ್ ಹೇಜಲ್‌ವುಡ್ ಅವರ ಯಾರ್ಕರ್ ಆಡುವ ಪ್ರಯತ್ನದಲ್ಲಿ ಔಟಾದರು. ಚೆಂಡು ಬ್ಯಾಟ್‌ನ ಅಡಿಯಿಂದ ಸವರಿಕೊಂಡು ಕೀಪರ್ ಗೆ ಕೈಗೆ ಹೋಯಿತು. ಯಾರೂ ಔಟ್‌ಗಾಗಿ ಮನವಿ ಮಾಡದೇ ಇದ್ದರೂ ಜಿತೇಶ್ ಶರ್ಮಾ ಡಿಆರ್ ಎಸ್ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದರು. ಅದೃಷ್ಟ ಆರ್ ಸಿಬಿ ಪರವಾಗಿತ್ತು ಚೆಂಡು ಬ್ಯಾಟ್‌ಗೆ ತಾಗಿದ್ದರಿಂದ ಔಟ್ ಎಂದು ನಿರ್ಣಯ ಬಂದಿತು. ಇದು ಪಂದ್ಯದ ಫಲಿತಾಂಶವನ್ನು ಬದಲಾಯಿಸಿತು. ಬಳಿಕ ಬಂದ ಜೋಫ್ರಾ ಆರ್ಚರ್ ಮೊದಲ ಎಸೆತದಲ್ಲೇ ಔಟಾದರು. ಅದಾದ ಬಳಿಕ ಕೊನೆಯ ಓವರ್ ನಲ್ಲಿ ಜಿತೇಶ್ ಶರ್ಮಾ ಮಿಂಚಿನ ರನೌಟ್ ಮಾಡಿ ಮಿಂಚಿದರು.












Click it and Unblock the Notifications