ನೀನು ಸುಮ್ಮನೆ ಡಿಆರ್‌ಎಸ್ ಕ್ರೆಡಿಟ್ ತಗೊಂಡೆ: ವೈಭವ್ ಸೂರ್ಯವಂಶಿ ಕಾಲೆಳೆದ ಇಶಾನ್ ಕಿಶನ್
Ishan Kishan: ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಈಸ್ಟ್ ಝೋನ್ ತಂಡವು ದಕ್ಷಿಣ ವಲಯವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಆದರೆ ಗಮನ ಸೆಳೆದಿದ್ದು ಮಾತ್ರ ಈ ಪಂದ್ಯದ ವೇಳೆ ನಡೆದ ತಾಮಾಷೆಯ ಪ್ರಸಂಗ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ.
ಫೈನಲ್ ಪಂದ್ಯದಲ್ಲಿ ಈಸ್ಟ್ ಝೋನ್ ತಂಡವು ಭರ್ಜರಿ ಪ್ರದರ್ಶನ ನೀಡುತ್ತಿರುವಾಗ, ಮೈದಾನದಲ್ಲಿ ನಡೆದ ತಮಾಷೆಯ ಪ್ರಸಂಗವೊಂದು ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದೆ. ವಿಕೆಟ್ ಹಿಂಭಾಗದಲ್ಲಿ ನಿಂತು ಸಹ ಆಟಗಾರರೊಂದಿಗೆ ಹಾಸ್ಯಚಟಾಕಿ ಹಾರಿಸುವ ಸ್ವಭಾವದ ಇಶಾನ್ ಕಿಶನ್ ಅವರು 15 ವರ್ಷದ ಉದಯೋನ್ಮುಖ ಪ್ರತಿಭೆ ವೈಭವ್ ಸೂರ್ಯವಂಶಿಯ ಕಾಲೆಳೆದಿದ್ದು, ಅದಕ್ಕೆ ವೈಭವ್ ನೀಡಿದ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ.

ಈಸ್ಟ್ ಝೋನ್ ರಿವ್ಯೂ ಸಕ್ಸಸ್..
ಪಂದ್ಯದ ವೇಳೆ ಸೌತ್ ಝೋನ್ ಬ್ಯಾಟರ್ ವಿರುದ್ಧ ಎಲ್‍ಬಿಡಬ್ಲ್ಯೂ ಮನವಿ ಬಂದಾಗ, ಈಸ್ಟ್ ಝೋನ್ ತಂಡವು ನಿರ್ಧಾರ ಮರುಪರಿಶೀಲನೆಗೆ (DRS) ಮನವಿ ಮಾಡಲು ನಿರ್ಧರಿಸಿತು. ರಿವ್ಯೂ ತೆಗೆದುಕೊಂಡ ನಂತರ, ಅದು ತಂಡಕ್ಕೆ ಅನುಕೂಲಕರವಾಗಿ (ಔಟ್) ಪರಿಣಮಿಸಿತು. ಇದೇ ವೇಳೆ ವಿಕೆಟ್ ಕೂಡ ಬಿದ್ದಿದ್ದು, ಡಿಆರ್‌ಎಸ್ ಸಕ್ಸಸ್ ಆದಂತಾಯಿತು.
ವೈಭವ್ ಸೂರ್ಯವಂಶಿ ಕಾಲೆಳೆದ ಇಶಾನ್
ಈ ವೇಳೆ ಮೈದಾನದಲ್ಲಿದ್ದ ವೈಭವ್ ಸೂರ್ಯವಂಶಿ, 'ಆ ರಿವ್ಯೂ ತೆಗೆದುಕೊಳ್ಳಲು ನಾನೇ ಪ್ರಮುಖ ಕಾರಣ' ಎಂಬಂತೆ ಸಂತಸ ವ್ಯಕ್ತಪಡಿಸಿದರು. ಇದನ್ನು ಗಮನಿಸಿದ ಇಶಾನ್ ಕಿಶನ್, ಮೈಕ್ರೋಫೋನ್‌ನಲ್ಲಿ ಸ್ಪಷ್ಟವಾಗಿ ಕೇಳಿಸುವಂತೆ ತಮಾಷೆಯಾಗಿ ಹೀಗೆ ಹೇಳಿದರು. 'ಡಿಸಿಷನ್ ಬಂದ್ಮೇಲೆ ಎಲ್ಲರೂ ಹೌದು ಅಂದಿದ್ಯಾಕೆ? ನೀನು ಸುಮ್ಮನೆ ಆ ರಿವ್ಯೂ ತಗೊಂಡಿದ್ದರ ಕ್ರೆಡಿಟ್ (ಶ್ರೇಯಸ್ಸು) ತೆಗೆದುಕೊಳ್ಳುತ್ತಿದ್ದೀಯಾ,' ಎಂದು ವೈಭವ್ ಸೂರ್ಯವಂಶಿ ಅವರ ಕಾಲೆಳೆದರು.
ವೈಭವ್ ನೀಡಿದ ಉತ್ತರ ಭಾರಿ ವೈರಲ್
ಇಶಾನ್ ಕಿಶನ್ ಅವರ ತಮಾಷೆಯ ಟೀಕೆಗೆ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ ಅವರು ಕೊಂಚವೂ ತಬ್ಬಿಬ್ಬಾಗಲಿಲ್ಲ. ಬದಲಿಗೆ ಮುಗುಳು ನಗೆಯಿಂದ ಅತ್ಯಂತ ಚಾತುರ್ಯದ ಉತ್ತರ ನೀಡಿದರು. 'ನಾನು ಕ್ರೆಡಿಟ್ ತೆಗೆದುಕೊಳ್ಳುತ್ತಿಲ್ಲ ಭೈಯ್ಯಾ... ಬಾಲ್ ಪ್ಯಾಡ್‌ಗೆ ತಾಗಿದಾಗ ಧ್ವನಿ ಬಂದಿದ್ದನ್ನು ನಾನು ಸ್ಪಷ್ಟವಾಗಿ ಕೇಳಿಸಿಕೊಂಡೆ, ಅದಕ್ಕೇ ರಿವ್ಯೂ ತಗೊಳ್ಳಿ ಅಂತ ಗಟ್ಟಿಯಾಗಿ ಹೇಳಿದೆ,' ಎಂದು ಪ್ರತ್ಯುತ್ತರ ನೀಡಿದರು.
ಈ ಸ್ವಭಾವದಿಂದ ಗಮನ ಸೆಳೆದ ವೈಭವ್
ವೈಭವ್ ಸೂರ್ಯವಂಶಿ ಅವರು ನೀಡಿದ ಈ ತಕ್ಷಣದ ಉತ್ತರವನ್ನು ಕೇಳಿ ಇಶಾನ್ ಕಿಶನ್ ಸೇರಿದಂತೆ ಮೈದಾನದಲ್ಲಿದ್ದ ಸಹ ಆಟಗಾರರು ಮುಗುಳ್ನಕ್ಕರು. ಈ ಇಬ್ಬರೂ ಬಿಹಾರ ಮೂಲದವರಾಗಿದ್ದು, ಪಂದ್ಯಾವಳಿಯ ಉದ್ದಕ್ಕೂ ಇವರ ನಡುವೆ ಉತ್ತಮ ಬಾಂಧವ್ಯ ಕಂಡುಬಂತು. ದೇಶೀಯ ಕ್ರಿಕೆಟ್‌ನ ಅತ್ಯಂತ ಕಿರಿಯ ಆಟಗಾರರಲ್ಲಿ ಒಬ್ಬರಾದ ವೈಭವ್, ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದಷ್ಟೇ ಅಲ್ಲದೆ, ಮೈದಾನದಲ್ಲಿ ಅನುಭವಿ ಆಟಗಾರರೊಂದಿಗೆ ಮುಕ್ತವಾಗಿ ಸಂವಹನ ನಡೆಸುವ ಧೈರ್ಯ ಮತ್ತು ಆತ್ಮವಿಶ್ವಾಸದಿಂದಲೂ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಈ ಪ್ರಸಂಗವು ಮೈಕ್ರೋಫೋನ್‌ನಲ್ಲಿ ರೆಕಾರ್ಡ್ ಆಗಿದ್ದು, ಡ್ರೆಸ್ಸಿಂಗ್ ರೂಮ್ ಮತ್ತು ಮೈದಾನದಲ್ಲಿ ಈಸ್ಟ್ ಝೋನ್ ತಂಡದ ಆಟಗಾರರ ನಡುವೆ ಇರುವ ಸೌಹಾರ್ದಯುತ ವಾತಾವರಣವನ್ನು ಎತ್ತಿಹಿಡಿದಿದೆ. ಒಟ್ಟಿನಲ್ಲಿ ಹೇಳುವುದಾದರೆ ದುಲೀಪ್ ಟ್ರೋಫಿಯಲ್ಲಿ ವೈಭವ್ ಸೂರ್ಯವಂಶಿ ಅವರ ಪ್ರದರ್ಶನ ಹೇಳಿಕೊಳ್ಳುವಷ್ಟು ಇಲ್ಲ. ಆದರೆ, ತಮಾಷೆಗೇನೂ ಕಡಿಮೆ ಇರಲಿಲ್ಲ. ಇದೇ ವಿಚಾರವನ್ನು ಇಟ್ಟುಕೊಂಡೇ ಕಾಲೆಳೆಯುತ್ತಿದ್ದಾರೆ. ಇದೀಗ ಇಶಾನ್ ಕಿಶನ್ ಅದನ್ನೇ ಮುಂದುವರೆಸಿ ಗಮನ ಸೆಳೆದಿದ್ದಾರೆ.


Click it and Unblock the Notifications
