Ishan Kishan: 1,345..2,000.. ಹೊಸ ದಾಖಲೆ ಮಾಡಿದ ಇಶಾನ್ ಕಿಶನ್
Ishan Kishan: ನ್ಯೂಜಿಲೆಂಡ್ ವಿರುದ್ಧದ ಐದನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾವು ಸೋಲನುಭವಿಸಿದೆ. ಆದರೂ ಇದೇ ವೇಳೆ ಭಾರತದ ಯುವ ಸ್ಟಾರ್ ಆಟಗಾರ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ನ್ಯೂಜಿಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ಭಾರತದ ವಿಕೆಟ್‌ಕೀಪರ್-ಬ್ಯಾಟರ್ ಇಶಾನ್ ಕಿಶನ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 2,000 ರನ್‌ಗಳ ಮೈಲಿಗಲ್ಲು ತಲುಪಿದ್ದಾರೆ. ಜೊತೆಗೆ ಎದುರಿಸಿದ ಎಸೆತಗಳ ಆಧಾರದ ಮೇಲೆ ಟಿ20ಯಲ್ಲಿ 2,000 ರನ್ ಪೂರೈಸಿದ ಭಾರತದ 3ನೇ ಅತ್ಯಂತ ವೇಗದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಇಶಾನ್ ಕಿಶನ್ ಸಾಧನೆ ವಿವರ
ಹ್ಯಾಮಿಲ್ಟನ್‌ನ ಸಿಡಾನ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಇಶಾನ್ ಕಿಶನ್ ಈ ಸಾಧನೆ ಮಾಡಿದರು. ಅವರು ತಮ್ಮ 2,000 ಟಿ20ಐ ರನ್‌ಗಳನ್ನು ಕೇವಲ 1,345 ಎಸೆತಗಳಲ್ಲಿ ಪೂರೈಸಿದರು. ಈ ಪಟ್ಟಿಯಲ್ಲಿ ಅಭಿಷೇಕ್ ಶರ್ಮಾ (1,024 ಎಸೆತ) ಮೊದಲ ಸ್ಥಾನದಲ್ಲಿದ್ದರೆ, ಸೂರ್ಯಕುಮಾರ್ ಯಾದವ್ (1,164 ಎಸೆತ) ಎರಡನೇ ಸ್ಥಾನದಲ್ಲಿದ್ದಾರೆ.
ಕಡಿಮೆ ಎಸೆತದಲ್ಲಿ 2,000 ರನ್ ಸಿಡಿಸಿದ ಭಾರತೀಯ ಆಟಗಾರ
* ಅಭಿಷೇಕ್ ಶರ್ಮಾ - 1,024 ಎಸೆತಗಳು
* ಸೂರ್ಯಕುಮಾರ್ ಯಾದವ್ - 1,164 ಎಸೆತಗಳು
* ಇಶಾನ್ ಕಿಶನ್ - 1,345 ಎಸೆತಗಳು
ಇನ್ನಿಂಗ್ಸ್‌ಗಳ ಆಧಾರದಲ್ಲಿ 5ನೇ ಸ್ಥಾನ
ಇನ್ನಿಂಗ್ಸ್‌ಗಳ ಆಧಾರದ ಮೇಲೆ 2,000 ರನ್ ಪೂರೈಸಿದ ಭಾರತೀಯರ ಪಟ್ಟಿಯಲ್ಲಿ ಇಶಾನ್ ಕಿಶನ್ 5ನೇ ಸ್ಥಾನದಲ್ಲಿದ್ದಾರೆ. ಕಿಶನ್ ತಮ್ಮ 69ನೇ ಇನ್ನಿಂಗ್ಸ್‌ನಲ್ಲಿ ಈ ಮೈಲಿಗಲ್ಲು ತಲುಪಿದರು. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ (ತಲಾ 56 ಇನ್ನಿಂಗ್ಸ್) ಮೊದಲ ಸ್ಥಾನದಲ್ಲಿದ್ದರೆ, ಕೆ.ಎಲ್. ರಾಹುಲ್ (58 ಇನ್ನಿಂಗ್ಸ್) ಮತ್ತು ಅಭಿಷೇಕ್ ಶರ್ಮಾ (64 ಇನ್ನಿಂಗ್ಸ್) ನಂತರದ ಸ್ಥಾನಗಳಲ್ಲಿದ್ದಾರೆ.
ಭರ್ಜರಿ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್
ಐದನೇ ಟಿ20 ಪಂದ್ಯಕ್ಕೂ ಮುನ್ನ 2,000 ರನ್ ಪೂರೈಸಲು ಇಶಾನ್ ಕಿಶನ್‌ಗೆ 45 ರನ್‌ಗಳ ಅಗತ್ಯವಿತ್ತು. ಆರಂಭಿಕರಾದ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ 19 ರನ್‌ಗಳಿಷ್ಟಕ್ಕೇ ಔಟಾದಾಗ, ಮೈದಾನಕ್ಕಿಳಿದ ಕಿಶನ್ ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾದರು. ಶ್ರೇಯಸ್ ಅಯ್ಯರ್ ಅವರೊಂದಿಗೆ ಸೇರಿ ಕೇವಲ 7 ಓವರ್‌ಗಳಲ್ಲಿ 107 ರನ್‌ಗಳ ಭರ್ಜರಿ ಪಾಲುದಾರಿಕೆ ನೀಡಿದರು.
61 ರನ್ ಬಾರಿಸಿದ ಇಶಾನ್ ಕಿಶನ್
ಇಶಾನ್ ಕಿಶನ್ 32 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 61 ರನ್ ಗಳಿಸಿದರು. ಇದು ಅವರ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದ 14ನೇ ಅರ್ಧಶತಕವಾಗಿದೆ. ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಎಸೆದ ಎಸೆತದಲ್ಲಿ ಹೆಲಿಕಾಪ್ಟರ್ ಶಾಟ್ ಮೂಲಕ ಬೌಂಡರಿ ಬಾರಿಸಿ, ನಂತರದ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಅವರು 2,000 ರನ್‌ಗಳ ಗಡಿ ದಾಟಿದರು.
191 ರನ್ ಕಲೆಹಾಕಿದ ಟೀಮ್ ಇಂಡಿಯಾ
ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 191/8 ರನ್ ಕಲೆಹಾಕಿತು. ಐದು ಪಂದ್ಯಗಳ ಈ ಸರಣಿಯಲ್ಲಿ ಭಾರತ ಈಗಾಗಲೇ 3-1 ಅಂತರದ ಮುನ್ನಡೆಯೊಂದಿಗೆ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಇಶಾನ್ ಕಿಶನ್ ಅವರ ಈ ಫಾರ್ಮ್ ಮುಂಬರುವ ಸರಣಿಗಳಿಗೆ ಭಾರತ ತಂಡಕ್ಕೆ ಧನಾತ್ಮಕ ಅಂಶವಾಗಿದೆ ಅಂತಲೇ ಹೇಳಬಹುದು.
ಭಾರತ-ನ್ಯೂಜಿಲೆಂಡ್ 5ನೇ ಟಿ20 ಪಂದ್ಯದ ವರದಿ
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ರನ್ ಕಲೆಹಾಕಲು ವಿಫಲರಾದ ನಂತರ, ತಂಡಕ್ಕೆ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಆಸರೆಯಾದರು. ಇಬ್ಬರೂ ಭರ್ಜರಿ ಅರ್ಧಶತಕ ಸಿಡಿಸಿ, ಮೂರನೇ ವಿಕೆಟ್‌ಗೆ ಕೇವಲ 43 ಎಸೆತಗಳಲ್ಲಿ 93 ರನ್‌ಗಳನ್ನು ಸಿಡಿಸಿದರು.
ಇಶಾನ್ ಕಿಶನ್ 61 ರನ್ ಬಾರಿಸಿದರೆ, ನಾಯಕ ಅಯ್ಯರ್ 50 ರನ್ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ನಮನ್ ಧೀರ್ (33) ಮತ್ತು ನಿತೀಶ್ ಕುಮಾರ್ ರೆಡ್ಡಿ (22) ಉಪಯುಕ್ತ ರನ್‌ಗಳ ಕಾಣಿಕೆ ನೀಡಿದರು. ಆದರೆ ಕೊನೆಯ ಓವರ್‌ಗಳಲ್ಲಿ ನ್ಯೂಜಿಲೆಂಡ್ ಬೌಲರ್‌ಗಳು ಅದ್ಭುತ ಕಮ್‌ಬ್ಯಾಕ್ ಮಾಡಿ ಭಾರತವನ್ನು 20 ಓವರ್‌ಗಳಲ್ಲಿ 191/8 ರನ್‌ಗಳಿಗೆ ಕಟ್ಟಿಹಾಕಿದರು. ನ್ಯೂಜಿಲೆಂಡ್ ಪರ ಆಡಮ್ ಮಿಲ್ನೆ 19 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರೆ, ಬ್ಲೇರ್ ಟಿಕ್ನರ್ ಮತ್ತು ನಾಥನ್ ಸ್ಮಿತ್ ತಲಾ 2 ವಿಕೆಟ್ ಪಡೆದರು.
192 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್‌ಗೆ ಟಿಮ್ ಸೀಫರ್ಟ್ ಮತ್ತು ಗ್ಲೆನ್ ಫಿಲಿಪ್ಸ್ ಅದ್ಭುತ ಜಯ ತಂದುಕೊಟ್ಟರು. ಸೀಫರ್ಟ್ ಕೇವಲ 7 ರನ್‌ಗಳಿಂದ ತಮ್ಮ ಚೊಚ್ಚಲ ಟಿ20 ಶತಕವನ್ನು ತಪ್ಪಿಸಿಕೊಂಡರೂ, 93 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡುವ ಮೂಲಕ ರನ್ ಚೇಸಿಂಗ್‌ನಲ್ಲಿ ತಂಡವು ಮುನ್ನಡೆ ಕಾಯ್ದುಕೊಳ್ಳುವಂತೆ ನೋಡಿಕೊಂಡರು.
ಮತ್ತೊಂದೆಡೆ ಅಜೇಯ 65 ರನ್ ಬಾರಿಸಿದ ಗ್ಲೆನ್ ಫಿಲಿಪ್ಸ್, ಈ ಸರಣಿಯಲ್ಲಿ ತಮ್ಮ ನಾಲ್ಕನೇ ಅರ್ಧಶತಕ ದಾಖಲಿಸಿದರು. ಈ ಸರಣಿಯಲ್ಲಿ ಒಟ್ಟು 341 ರನ್ ಕಲೆಹಾಕಿದ ಅವರು, 5 ಪಂದ್ಯಗಳ ದ್ವಿಪಕ್ಷೀಯ ಟಿ20 ಸರಣಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವ ದಾಖಲೆ ಬರೆದರು. ಈ ಜೋಡಿಯ ಬ್ಯಾಟಿಂಗ್ ಬಲದಿಂದ ನ್ಯೂಜಿಲೆಂಡ್ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.


Click it and Unblock the Notifications
