IPL Auction 2025: ಐಪಿಎಲ್ ಮೆಗಾ ಹರಾಜಿಗೆ ಮುಹೂರ್ತ ನಿಗದಿ; ದಿನಾಂಕ, ಸ್ಥಳ, ಸಮಯ ಮಾಹಿತಿ, ವಿವರ
ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಮೆಗಾ ಹರಾಜಿಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಈ ಬಾರಿ ವಿದೇಶದಲ್ಲಿ ಮೆಗಾ ಹರಾಜು ನಡೆಯಲಿದ್ದು, ಎರಡು ದಿನಗಳ ಕಾಲ ಹರಾಜು ಪ್ರಕ್ರಿಯೆ ನಡೆಯಲಿದೆ. ನವೆಂಬರ್ 24 ಮತ್ತು 25 ರಂದು ಐಪಿಎಲ್ 2025ರ ಮೆಗಾ ಹರಾಜು ನಡೆಯುವುದು ಖಚಿತವಾಗಿದೆ. ಈ ಮೊದಲು ರಿಯಾದ್‌ನಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತದೆ ಎನ್ನಲಾಗಿತ್ತು, ಆದರೆ ಸ್ಥಳ ಬದಲಾವಣೆಯಾಗಿದ್ದು, ಜೆಡ್ಡಾದಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ.
ಎರಡನೇ ಬಾರಿ ಐಪಿಎಲ್ ಹರಾಜು ವಿದೇಶದಲ್ಲಿ ನಡೆಯಲಿದೆ. 2024ರ ಹರಾಜು ಪ್ರಕ್ರಿಯೆ ದುಬೈನಲ್ಲಿ ನಡೆದಿತ್ತು. ಭಾರತ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಟೆಸ್ಟ್ ಪಂದ್ಯದ ಸಮಯದಲ್ಲೇ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. 2027ರಲ್ಲಿ ಮುಂದಿನ ಮೆಗಾ ಹರಾಜು ನಡೆಯಲಿದ್ದು, ಎಲ್ಲಾ ಫ್ರಾಂಚೈಸಿಗಳು ಬಲಿಷ್ಠ ತಂಡವನ್ನು ಕಟ್ಟಲು ಪ್ಲಾನ್ ಮಾಡಿಕೊಂಡಿವೆ.

ಆಟಗಾರರ ಪಟ್ಟಿ ಬಿಡುಗಡೆ
ಮೆಗಾ ಹರಾಜಿಗೆ ಮೊದಲು ಅಕ್ಟೋಬರ್ 31ರಂದು ಎಲ್ಲಾ ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಎಲ್ಲಾ ಫ್ರಾಂಚೈಸಿಗಳಿಂದ ಈಗ 46 ಆಟಗಾರರು ಉಳಿದುಕೊಂಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಹೆನ್ರಿಚ್ ಕ್ಲಾಸೆನ್‌ಗೆ 23 ಕೋಟಿ ರೂಪಾಯಿ ನೀಡಿದ್ದರೆ, ಆರ್ ಸಿಬಿ ವಿರಾಟ್ ಕೊಹ್ಲಿಗೆ 21 ಕೋಟಿ ರೂಪಾಯಿ ಪಾವತಿ ಮಾಡಿದೆ. ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್‌ರನ್ನು ಉಳಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಈ ಐದು ಆಟಗಾರರಿಗೆ ಬರೋಬ್ಬರಿ 75 ಕೋಟಿ ರೂಪಾಯಿ ನೀಡಿದೆ.
ಪಂಜಾಬ್ ಕಿಂಗ್ಸ್ ಇಬ್ಬರು ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ. ಶಶಾಂಕ್ ಸಿಂಗ್ ಮತ್ತು ಪ್ರಭಾಸಿಮ್ರಾನ್ ಸಿಂಗ್ ಉಳಿಸಿಕೊಳ್ಳಲು 9.5 ಕೋಟಿ ರೂಪಾಯಿ ನೀಡಿದ್ದು, ಇನ್ನೂ 110.5 ಕೋಟಿ ರೂಪಾಯಿ ಪರ್ಸ್ ಹೊಂದಿದ್ದು, ಅತಿ ಹೆಚ್ಚು ಮೊತ್ತದೊಂದಿಗೆ ಮೆಗಾ ಹರಾಜಿಗೆ ಬರಲಿದ್ದಾರೆ.
ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಕಗಿಸೊ ರಬಾಡ, ಫಿಲ್ ಸಾಲ್ಟ್, ಜೋಸ್ ಬಟ್ಲರ್ ಸೇರಿದಂತೆ ಹಲವು ಪ್ರಮುಖ ಆಟಗಾರರು ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಮೆಗಾ ಹರಾಜಿನಲ್ಲಿ ಒಟ್ಟು 157 ಆಟಗಾರರು ನೋಂದಾಯಿಸಿಕೊಂಡಿದ್ದಾರೆ. ಇಟಲಿಯ ಓರ್ವ ಕ್ರಿಕೆಟಿಗ ಕೂಡ ಹರಾಜಿನಲ್ಲಿ ನೋಂದಾಯಿಸಿಕೊಂಡಿರುವುದು ವಿಶೇಷ.












Click it and Unblock the Notifications