KKR vs RCB: ಅಣ್ಣಾವ್ರ ಡೈಲಾಗ್ ಹೇಳಿ ಕನ್ನಡಿಗರ ಮನಗೆದ್ದ ರಜತ್ ಪಟಿದಾರ್
ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಶನಿವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೆಣೆಸಲಿದೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.
ಮೊದಲ ಪಂದ್ಯಕ್ಕಾಗಿ ಆರ್ ಸಿಬಿ ಅಭ್ಯಾಸ ನಡೆಸಿದ್ದು ಕೆಕೆಆರ್ ವಿರುದ್ಧ ಗೆದ್ದು ಪಂದ್ಯಾವಳಿಯಲ್ಲಿ ಶುಭ ಆರಂಭ ಪಡೆಯುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ ಜೆರ್ಸಿ ಸಂಖ್ಯೆ 18 ಆಗಿದ್ದು ಐಪಿಎಲ್ 18 ನೇ ಆವೃತ್ತಿ ಆಗಿರುವ ಕಾರಣ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. 65 ದಿನಗಳ ಕಾಲ ಅಭಿಮಾನಿಗಳಿಗೆ ಕ್ರಿಕೆಟ್ ರಸದೌತಣ ನೀಡಲು 10 ತಂಡಗಳು ಸಜ್ಜಾಗಿವೆ. 75 ಪಂದ್ಯಗಳು ನಡೆಯಲಿದ್ದು ಪ್ರತಿಷ್ಠಿತ ಕಪ್‌ಗಾಗಿ ರೋಚಕ ಹಣಾಹಣಿ ನಿರೀಕ್ಷಿಸಲಾಗಿದೆ.

ರಜತ್ ಪಟಿದಾರ್ ಸಂದೇಶ!
2025ರ ಐಪಿಎಲ್‌ನಲ್ಲಿ ಆರ್ ಸಿಬಿ ತಂಡಕ್ಕೆ ಹೊಸ ನಾಯಕನ ನೇಮಕ ಮಾಡಲಾಗಿದೆ. ರಜತ್ ಪಟಿದಾರ್ ಈ ಬಾರಿ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಮೊದಲ ಪಂದ್ಯಕ್ಕೆ ಮುನ್ನ ರಜತ್ ಪಟಿದಾರ್ ಮತ್ತೊಮ್ಮೆ ಕನ್ನಡಿಗರ ಮನಗೆದ್ದಿದ್ದಾರೆ. ಕನ್ನಡ ಸಿನಿಮಾ ಪ್ರೇಮಿಗಳ ಆರಾಧ್ಯ ದೈವ ಎಂದೇ ಹೆಸರಾಗಿರುವ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಪ್ರಸಿದ್ಧ ಡೈಲಾಗ್ ಹೇಳುವ ಮೂಲಕ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ.
ಮಿಸ್ಟರ್ ನಾಗ್ಸ್ ಜೊತೆ ಇನ್ಸೈಡರ್ ಶೋನಲ್ಲಿ ಕಾಣಿಸಿಕೊಂಡ ರಜತ್ ಪಟಿದಾರ್, "ಅಭಿಮಾನಿಗಳು ನಮ್ಮ ದೇವರು" ಎಂದು ಕೈಮುಗಿದು ನಮಸ್ಕಾರ ಮಾಡಿದ್ದಾರೆ. ನಿಮ್ಮ ಬೆಂಬಲ, ಪ್ರೋತ್ಸಾಹ ನಮಗೆ ಬೇಕು ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಇದಕ್ಕೂ ಮುನ್ನ ಕೂಡ ರಜತ್ ಪಟಿದಾರ್ ಕನ್ನಡದಲ್ಲಿ ಮಾತನಾಡಿ ಅಭಿಮಾನಿಗಳ ಮನಗೆದ್ದಿದ್ದಾರೆ. ಆರ್ ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಕೂಡ ನಮಸ್ಕಾರ ಬೆಂಗಳೂರು, ಎಲ್ರೂ ಹೇಗಿದಿರಾ ಎಂದು ಅಭಿಮಾನಿಗಳನ್ನು ಕೇಳುವ ಮೂಲಕ ಮನಗೆದ್ದಿದ್ದರು.
ಗೆಲುವಿನ ವಿಶ್ವಾಸದಲ್ಲಿ ಆರ್ ಸಿಬಿ
18 ವರ್ಷಗಳ ಬಳಿಕ ಐಪಿಎಲ್‌ನಲ್ಲಿ ಆರ್ ಸಿಬಿ ಮತ್ತು ಕೆಕೆಆರ್ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಮೊದಲ ಆವೃತ್ತಿಯಲ್ಲಿ ಕೆಕೆಆರ್ ಮತ್ತು ಆರ್ ಸಿಬಿ ಮುಖಾಮುಖಿಯಾಗಿದ್ದವು. ಅಂದಿನ ಪಂದ್ಯದಲ್ಲಿ ಬ್ರೆಂಡನ್ ಮೆಕಲಮ್ ಭರ್ಜರಿ ಶತಕ ಸಿಡಿಸಿದ್ದರು, ಆರ್ ಸಿಬಿ ಮೊದಲ ಪಂದ್ಯದಲ್ಲೇ ಸೋಲು ಕಂಡಿತ್ತು.
ಈ ಐಪಿಎಲ್ ಆವೃತ್ತಿಯಲ್ಲಿ ಆರ್ ಸಿಬಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಬಲಿಷ್ಠವಾಗಿದ್ದು ಹಾಲಿ ಚಾಂಪಿಯನ್ನರನ್ನೇ ಸೋಲಿಸಿ ಆತ್ಮ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಉತ್ಸಾಹದಲ್ಲಿದೆ.












Click it and Unblock the Notifications