IPL 2025: ಮೇ 13ರ ವೇಳೆಗೆ ಸಿದ್ಧವಾಗಿರಿ; ಐಪಿಎಲ್ ಫ್ರಾಂಚೈಸಿಗಳಿಗೆ ಬಿಸಿಸಿಯ ಸೂಚನೆ
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ಶೀಘ್ರದಲ್ಲೇ ಮತ್ತೆ ಆರಂಭವಾಗುವ ಸೂಚನೆ ಸಿಕ್ಕಿದೆ. ಮೇ 13 ರ ಮಂಗಳವಾರದೊಳಗೆ ಭಾರತಕ್ಕೆ ಮರಳುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಎಲ್ಲಾ ಫ್ರಾಂಚೈಸಿಗಳನ್ನು ಸೂಚನೆ ಕೊಟ್ಟಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಹೆಚ್ಚುತ್ತಿರುವ ಗಡಿ ಉದ್ವಿಗ್ನತೆಯ ನಂತರ ಐಪಿಎಲ್ ಪಂದ್ಯಗಳನ್ನು ಒಂದು ವಾರದವರೆಗೆ ಸ್ಥಗಿತಗೊಳಿಸಲಾಗಿತ್ತು.
ಶೀಘ್ರದಲ್ಲೇ ಪಂದ್ಯಾವಳಿಯನ್ನು ಮತ್ತೆ ಆರಂಭಿಸಿ ಆದಷ್ಟು ಬೇಗ ಮುಕ್ತಾಯಗೊಳಿಸಲು ಬಿಸಿಸಿಐ ಉತ್ಸಾಹ ತೋರಿದೆ. ಮೊದಲ ವೇಳಾಪಟ್ಟಿಯ ಪ್ರಕಾರವೇ ನಡೆದಿದ್ದರೆ ಮೇ 25ರಂದು ಐಪಿಎಲ್ 2025ರ ಆವೃತ್ತಿಯ ಫೈನಲ್ ನಡೆಯಬೇಕಿತ್ತು.

ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿರುವ ಪ್ರಕಾರ, ಪಂಜಾಬ್ ಕಿಂಗ್ಸ್ (PBKS) ಹೊರತುಪಡಿಸಿ ಎಲ್ಲಾ ಫ್ರಾಂಚೈಸಿಗಳು ಮಂಗಳವಾರದೊಳಗೆ ತಮ್ಮ ಸ್ಥಳಗಳಿಗೆ ಹಿಂತಿರುಗುವಂತೆ ತಿಳಿಸಲಾಗಿದೆ. ಕಳೆದ ವಾರ ಧರ್ಮಶಾಲಾವನ್ನು ತವರಿನ ಅಂಗಳವಾಗಿ ಹೊಂದಿದ್ದ ಪಂಜಾಬ್ ಕಿಂಗ್ಸ್ ಪಂದ್ಯವನ್ನು ತಟಸ್ಥ ಸ್ಥಳದಲ್ಲಿ ಆಡಿಸುವ ಸಾಧ್ಯತೆ ಇದೆ.
ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಮಂಗಳವಾರದೊಳಗೆ ತಮ್ಮ ತಮ್ಮ ತವರಿನ ಅಂಗಳದಲ್ಲಿ ವರದಿ ಮಾಡಿಕೊಳ್ಳುವಂತೆ ತಿಳಿಸಲು ತಿಳಿಸಲಾಗಿದೆ. ಪಂಜಾಬ್ ತಟಸ್ಥ ಸ್ಥಳವನ್ನು ಹೊಂದಿದ್ದರೂ ತಂಡದ ಆಟಗಾರರು ಎಲ್ಲಿ ಸೇರಬೇಕು ಎನ್ನುವುದನ್ನು ದೃಢೀಕರಿಸಲಾಗಿಲ್ಲ. ಐಪಿಎಲ್ ಅನ್ನು ನಿಗದಿತ ದಿನದಂದು ಮುಗಿಸಲು ಮಂಡಳಿಯು ಪ್ರತಿ ದಿನ ಎರಡು ಪಂದ್ಯಗಳನ್ನು ಆಡಿಸುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
12 ಲೀಗ್ ಹಂತದ ಪಂದ್ಯಗಳು ಮತ್ತು ನಾಲ್ಕು ಪ್ಲೇಆಫ್ ಪಂದ್ಯಗಳು ಇನ್ನೂ ಬಾಕಿ ಉಳಿದಿವೆ. ಒಟ್ಟು 16 ಪಂದ್ಯಗಳನ್ನು ಮುಗಿಸಲು ಮತ್ತು ಸಮಯಕ್ಕೆ ಸರಿಯಾಗಿ ಪಂದ್ಯಾವಳಿಯನ್ನು ಪೂರ್ಣಗೊಳಿಸಲು ಮಂಡಳಿಯು ಬಹು ಡಬಲ್ ಹೆಡರ್‌ಗಳನ್ನು ಯೋಜಿಸುತ್ತಿದೆ ಎಂದು ನಂಬಲಾಗಿದೆ. ಭದ್ರತಾ ಅನುಮತಿಗಳು ಮತ್ತು ಲಾಜಿಸ್ಟಿಕಲ್ ಅನುಮೋದನೆಗಳನ್ನು ಅವಲಂಬಿಸಿ ಶೀಘ್ರದಲ್ಲೇ ಮತ್ತೆ ಪಂದ್ಯಾವಳಿಯನ್ನು ಆರಂಭಿಸಲಾಗುತ್ತದೆ.
ದಕ್ಷಿಣ ಭಾರತದಲ್ಲಿ ಮಾತ್ರ ಪಂದ್ಯಗಳು?
ಸ್ಥಳಗಳ ಕುರಿತು ಅಂತಿಮ ನಿರ್ಧಾರವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಲಹೆಯನ್ನು ಅವಲಂಬಿಸಿರುತ್ತದೆ, ಆದರೆ ಬಿಸಿಸಿಐ ದೇಶದ ಪೂರ್ವ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ಯೋಚಿಸುತ್ತಿದೆ. ಚೆನ್ನೈ, ಬೆಂಗಳೂರು, ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ ಪ್ರಸ್ತುತ ಉಳಿದ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆ ಹೆಚ್ಚಾಗಿದೆ.
ಗಡಿ ಉದ್ವಿಗ್ನತೆ ಹೆಚ್ಚಾದ ನಂತರ ಆಟಗಾರರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಐಪಿಎಲ್ 2025 ರ ತಾತ್ಕಾಲಿಕ ಅಮಾನತು ಶುಕ್ರವಾರ ಘೋಷಿಸಲಾಯಿತು. ಧರ್ಮಶಾಲಾದಲ್ಲಿ ನಿಗದಿಯಾಗಿದ್ದ ದೆಹಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವನ್ನು ಗುರುವಾರ ಭದ್ರತಾ ಭಯದ ನಡುವೆ ರದ್ದುಗೊಳಿಸಲಾಯಿತು.
ಅಮಾನತು ಘೋಷಿಸಿದ ಕೂಡಲೇ ಅನೇಕ ವಿದೇಶಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಭಾರತವನ್ನು ತೊರೆದಿದ್ದಾರೆ. ಫ್ರಾಂಚೈಸಿಗಳು ಈಗ ಅವರನ್ನು ಮರಳಿ ಕರೆತರುವ ಕೆಲಸ ಮಾಡುತ್ತಿವೆ, ಬಿಸಿಸಿಐ ತಂಡಗಳು ಅಂತರರಾಷ್ಟ್ರೀಯ ಪ್ರಯಾಣವನ್ನು ತ್ವರಿತವಾಗಿ ಸಂಘಟಿಸಲು ಕೇಳಿಕೊಂಡಿದೆ. ಮಂಡಳಿಯು ಪ್ರಸಾರಕರು, ಪಾಲುದಾರರು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ.












Click it and Unblock the Notifications