ಧೋನಿ ಇನ್ನೂ ಮೂರ್ನಾಲ್ಕು ವರ್ಷ ಐಪಿಎಲ್ ಆಡಬಹುದು ಎಂದ ಶೇನ್ ವಾಟ್ಸನ್
ಆಸ್ಟ್ರೇಲಿಯಾದ ದಿಗ್ಗಜ ಆಲ್‌ರೌಂಡರ್ ಶೇನ್ ವಾಟ್ಸನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಎಂಎಸ್ ಧೋನಿ ಫಿಟ್‌ನೆಸ್ ಬಗ್ಗೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿರುವ ಶೇನ್ ವಾಟ್ಸನ್ ಎಂಎಸ್ ಧೋನಿ ಮುಂದಿನ ಮೂರ್ನಾಲ್ಕು ವರ್ಷಗಳ ಕಾಲ ಐಪಿಎಲ್ ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಮಾಹಿ ನಾಯಕತ್ವದಲ್ಲಿ ಈವರೆಗೆ 4 ಐಪಿಎಲ್ ಟ್ರೋಫಿ ಗೆದ್ದಿರುವ ಸಿಎಸ್‌ಕೆ ಪಡೆ ಈ ಬಾರಿ ಐದನೇ ಬಾರಿಗೆ ಚಾಂಪಿಯನ್ ಪಟ್ಟದ ಮೇಲೆ ಚಿತ್ತ ನೆಟ್ಟಿರುವುದು ಸುಳ್ಳಲ್ಲ.

ಈಗಾಗಲೇ 41ನೇ ಹರೆಯಕ್ಕೆ ಕಾಲಿಟ್ಟಿರುವ ಎಂಎಸ್ ಧೋನಿ ಈ ಬಾರಿ ತಮ್ಮ ಕೊನೆಯ ಆವೃತ್ತಿ ಆಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ವಿಚಾರವಾಗಿ ಎಂಎಸ್ ಧೋನಿಯಾಗಲೀ ಅಥವಾ ಸಿಎಸ್‌ಕೆ ಫ್ರಾಂಚೈಸಿಯಾಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಹೀಗಾಗಿ ಧೋನಿ ನಿವೃತ್ತಿಯ ವಿಚಾರವಾಗಿ ಕುತೂಹಲಗಳು ಸದ್ಯಕ್ಕೆ ಹಾಗೆಯೇ ಉಳಿದುಕೊಂಡಿದೆ.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರೂ ಆಗಿರುವ ಶೇನ್ ವಾಟ್ಸನ್ ಎಎನ್‌ಐಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ವಾಟ್ಸನ್ ಇದು ಆಟಗಾರನಾಗಿ ಎಂಎಸ್ ಧೋನಿ ಅವರ ಕೊನೆಯ ಆವೃತ್ತಿಯಾಗಿರಲಿದೆ ಎಂದು ನನಗೆ ಅನಿಸುತ್ತಿಲ್ಲ ಎಂದಿದ್ದಾರೆ. ಮಾಹಿ ಇನ್ನು ಕೂಡ ಕನಿಷ್ಠ ಮೂರರಿಂದ ನಾಲ್ಕು ವರ್ಷಗಳ ಕಾಲ ಐಪಿಎಲ್‌ನಲ್ಲಿ ಆಡಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಆಸಿಸ್‌ನ ಈ ದಿಗ್ಗಜ.
ಎಂಎಸ್ ಧೋನಿ ಈಗಲೂ ಅತ್ಯಂತ ಫಿಟ್ ಆಗಿದ್ದಾರೆ ಎಂದಿರುವ ಶೇನ್ ವಾಟ್ಸನ್ ಅವರ ನಾಯಕತ್ವದಂತೆಯೇ ವಿಕೆಟ್ ಕೀಪರ್ ಕೂಡ ಅದ್ಭುತವಾಗಿದೆ ಎಂದಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಶಸ್ಸು ಸಾಧಿಸಬೇಕಾದರೆ ಎಂಎಸ್ ಧೋನಿ ಪ್ರಮುಖ ಕಾರಣ ಎಂದು ಅನಿಸಿಕೆ ಹಂಚಿಕೊಂಡಿದ್ದಾರೆ ವಾಟ್ಸನ್.
"ಎಂಎಸ್ ಧೋನಿಗೆ ಇದು ಕೊನೆಯ ಐಪಿಎಲ್ ಆವೃತ್ತಿ ಎಂದು ನಾನು ಕೇಳಲ್ಪಟ್ಟೆ, ಆದರೆ ನನಗೆ ಹಾಗೆ ಅನಿಸುತ್ತಿಲ್ಲ. ನನ್ನ ಪ್ರಕಾರ ಮುಂದಿನ ಮೂರ್ನಾಲ್ಕು ವರ್ಷಗಳ ಕಾಲ ಎಂಎಸ್ ಧೋನಿ ಆಟಗಾರನಾಗಿ ಮುಂದುವರಿಯಬಹುದು. ಅವರು ಇನ್ನು ಕೂಡ ಫಿಟ್ ಆಗಿದ್ದು ಬ್ಯಾಟಿಂಗ್, ಕೀಪಿಂಗನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಅವರ ಆಟದಷ್ಟೇ ಅವರ ನಾಯಕತ್ವ ಕೂಡ ಅದ್ಭುತವಾಗಿದೆ. ಅವರ ಫಿಟ್‌ನೆಸ್, ಆಟವನ್ನು ಅರ್ಥೈಸಿಕೊಳ್ಳುವ ರೀತಿಯಿಂದಾಗಿ ಅವರನ್ನು ಅದ್ಭುತ ನಾಯಕನನ್ನಾಗಿ ಮಾಡಿದೆ. ಮೈದಾನದಲ್ಲಿ ಅವರಲ್ಲಿರುವ ಕೌಶಲ್ಯ ನಿಜಕ್ಕೂ ಅದ್ಭುತ. ಸಿಎಸ್‌ಕೆ ತಂಡದ ಯಶಸ್ಸಿನ ಅತ್ಯಂತ ಪ್ರಮುಖ ಕಾರಣ ಅವರೇ" ಎಂದಿದ್ದಾರೆ ಶೇನ್ ವಾಟ್ಸನ್.
ಜಡೇಜಾಗೆ ಸಿಎಸ್‌ಕೆ ನಾಯಕತ್ವ?
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ಸದ್ಯ ಎಂಎಸ್ ಧೋನಿ ಅವರಲ್ಲಿಯೇ ಇದ್ದರೂ ಟೂರ್ನಿಯ ಆರಂಭಕ್ಕೂ ಮುನ್ನ ನಾಯಕತ್ವದ ಹೊಣೆಗಾರಿಕೆ ರವೀಂದ್ರ ಜಡೇಜಾ ಹೆಗಲೇರುವ ಸಾಧ್ಯತೆಗಳು ಇದೆ ಎಂಬ ವರದಿಗಳು ಬಂದಿದೆ. ಆದರೆ ಈ ವಿಚಾರವಾಗಿ ಫ್ರಾಂಚೈಸಿಯಿಂದ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.ಕಳೆದ ವರ್ಷದ ಆವೃತ್ತಿಯ ಆರಂಭಕ್ಕೂ ಮುನ್ನ ಸಿಎಸ್‌ಕೆ ಫ್ರಾಂಚೈಸಿಯಲ್ಲಿ ಈ ರೀತಿಯ ಬದಲಾವಣೆಗಳು ಆಗಿತ್ತು. ಟೂರ್ನಿಯ ಆರಂಭಕ್ಕೂ ಮುನ್ನ ಧೋನಿ ನಾಯಕತ್ವವನ್ನು ಜಡೇಜಾಗೆ ವಹಿಸಿದ್ದರು. ಆದರೆ ಅದನ್ನು ನಿರ್ವಹಿಸಲು ಜಡೇಜಾ ವಿಫಲವಾಗಿದ್ದರು. ಅವರ ವೈಯಕ್ತಿಕ ಪ್ರದರ್ಶನ ಹಾಗೂ ಇಡೀ ತಂಡದ ಪ್ರದರ್ಶನ ಕಳಪೆಯಾಗಿತ್ತು. ಹೀಗಾಗಿ ಸಿಎಸ್‌ಕೆ ನಡೆ ಕುತೂಹಲ ಮೂಡಿಸಿದೆ.












Click it and Unblock the Notifications