IPL 2023: ಈ ಮೂರು ಕಾರಣಗಳಿಂದಾಗಿ ರಜತ್ ಪಾಟಿದಾರ್ ಅನುಪಸ್ಥಿತಿ ಆರ್‌ಸಿಬಿ ತಂಡಕ್ಕೆ ದೊಡ್ಡ ಹಿನ್ನಡೆ

ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್ 31ರಂದು ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ಗೆ ಚಾಲನೆ ದೊರೆಯಲಿದೆ. 2023ರ ಐಪಿಎಲ್‌ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಭರ್ಜರಿಯಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಪಂದ್ಯಾವಳಿ ಆರಂಭಕ್ಕೆ ಮುನ್ನ ಆರ್‌ಸಿಬಿ ತಂಡಕ್ಕೆ ಆಟಗಾರರ ಗಾಯದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ತಂಡದ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಪಂದ್ಯಾವಳಿಯ ಮೊದಲಾರ್ಧ ಆಡುವುದು ಅನುಮಾನ ಎನ್ನಲಾಗಿದೆ. ವಿಲ್‌ಜ್ಯಾಕ್ಸ್ ಕೂಡ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದಾರೆ.
ವನಿಂದು ಹಸರಂಗ ನ್ಯೂಜಿಲೆಂಡ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಯಲ್ಲಿ ಆಡುತ್ತಿರುವ ಕಾರಣ ಏಪ್ರಿಲ್ 8ರ ನಂತರ ಆರ್ ಸಿಬಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ಬೆನ್ನಲ್ಲೇ ತಂಡದ ಪ್ರಮುಖ ಬ್ಯಾಟರ್ ರಜತ್ ಪಾಟಿದಾರ್ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.
ರಜತ್ ಪಾಟಿದಾರ್ ಗಾಯಕ್ಕೆ ತುತ್ತಾಗಿದ್ದು ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚನೆ ನೀಡಲಾಗಿದೆ. ಇದು ಆರ್ ಸಿಬಿ ತಂಡಕ್ಕೆ ಮತ್ತಷ್ಟು ತಲೆನೋವು ತಂದಿದೆ. ಕಳೆದ ಬಾರಿಯ ಐಪಿಎಲ್‌ನಲ್ಲಿ ರಜತ್ ಪಾಟಿದಾರ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆಡಿದ ಎಂಟು ಪಂದ್ಯಗಳಲ್ಲಿ 335 ರನ್ ಗಳಿಸಿದ್ದರು.
ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದ ಅವರು ಟೂರ್ನಿಯ ಆರಂಭಕ್ಕೆ ಮುನ್ನವೇ ಗಾಯಕ್ಕೆ ತುತ್ತಾಗಿದ್ದಾರೆ. ಸದ್ಯ ಪಾಟಿದಾರ್ ಆರ್ ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ಭಾನುವಾರ ಆರ್ ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಭಾಗವಹಿದ್ದರು. ಮೊದಲಾರ್ಧದ ಪಂದ್ಯಗಳಿಗೆ ಅವರು ಅಲಭ್ಯರಾದರೆ ಈ ಮೂರು ಕಾರಣಗಳಿಂದ ಆರ್ ಸಿಬಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ.

ಅತ್ಯುತ್ತಮ ಫಾರ್ಮ್‌ನಲ್ಲಿರುವ ಪಾಟಿದಾರ್
ರಜತ್ ಪಾಟಿದಾರ್ ಸದ್ಯ ಅತ್ಯುತ್ತಮ ಫಾರ್ಮ್‌ನಲ್ಲಿರುವ ಬ್ಯಾಟರ್. ಕೊನೆಯದಾಗಿ ಆಡಿರುವ ಏಳು ಪ್ರಥಮ ದರ್ಜೆ ಪಂದ್ಯಗಳಲ್ಲಿ ಅರ್ಧಶತಕಗಳನ್ನು ಗಳಿಸಿ ಮಿಂಚಿದ್ದಾರೆ. ಅದೇ ಪ್ರದರ್ಶನವನ್ನು ಐಪಿಎಲ್‌ನಲ್ಲಿ ಮುಂದುವರೆಸುವ ವಿಶ್ವಾಸದಲ್ಲಿದ್ದರು.
ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆರು ಪಂದ್ಯಗಳಲ್ಲಿ 54.40 ಸರಾಸರಿಯಲ್ಲಿ 272 ರನ್ ಗಳಿಸಿದ್ದರು. ಮೂರನೇ ಕ್ರಮಾಂಕದಲ್ಲಿ ಆಡುವ ರಜತ್ ಪಾಟಿದಾರ್ ತಂಡದ ಪ್ರಮುಖ ಬ್ಯಾಟರ್ ಗಳಲ್ಲಿ ಒಬ್ಬರು. ಸ್ಫೋಟಕ ಬ್ಯಾಟಿಂಗ್ ಮಾಡುವ ಅವರು ಹಲವು ಪಂದ್ಯಗಳಿಗೆ ಅಲಭ್ಯವಾದರೆ ತಂಡದ ಬ್ಯಾಟಿಂಗ್‌ನಲ್ಲಿ ದೊಡ್ಡ ಕೊರತೆ ಎದುರಾಗಲಿದೆ.
ಗುಣಮಟ್ಟದ ಭಾರತೀಯ ಬ್ಯಾಟರ್‌ಗಳ ಕೊರತೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಹೆಚ್ಚಿನ ಭಾರತೀಯ ಬ್ಯಾಟಿಂಗ್ ಆಯ್ಕೆಯನ್ನು ಹೊಂದಿಲ್ಲ. ಆರ್ ಸಿಬಿ ಬ್ಯಾಟಿಂಗ್ ಹೆಚ್ಚಾಗಿ ಕೊಹ್ಲಿ, ಡುಪ್ಲೆಸಿಸ್, ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ ಮೇಲೆ ಅವಲಂಬಿತವಾಗಿದೆ.
ಪಾಟಿದಾರ್ ಆಡದಿದ್ದರೆ ಅವರ ಸ್ಥಾನದಲ್ಲಿ ಆಡಲು ಸುಯಶ್ ಪ್ರಭುದೇಸಾಯಿ, ಅನುಜ್ ರಾವತ್ ಅಥವಾ ಮಹಿಪಾಲ್ ಲೊಮ್ರೋರ್ ಅಂತಹ ಆಟಗಾರರು ಇದ್ದರೂ, ಇವರು ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಪಾಟಿದಾರ್ ಆಡದಿದ್ದರೆ ಮಹಿಪಾಲ್ ಲೊಮ್ರೋರ್ ಅವಕಾಶ ಪಡೆಯುವ ಸಾಧ್ಯತೆ ಇದೆ.

ತಂಡದಲ್ಲಿ ಅನಿವಾರ್ಯವಾಗಿ ಬದಲಾವಣೆ
ಕಳೆದ ಬಾರಿ ಆರ್ ಸಿಬಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ಲೇ ಆಫ್‌ಗೆ ಪ್ರವೇಶಿಸಿತ್ತು. ಈ ಬಾರಿ ಕೂಡ ಫ್ರಾಂಚೈಸಿ ಬಹುತೇಕ ಅದೇ ತಂಡವನ್ನು ಉಳಿಸಿಕೊಂಡಿದೆ. ರಜತ್ ಪಾಟಿದಾರ್ ಮೂರನೇ ಕ್ರಮಾಂಕದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು. ಆದರೆ ಅವರ ಅನುಪಸ್ಥಿತಿ ತಂಡದಲ್ಲಿ ಅನಿವಾರ್ಯವಾಗಿ ಬದಲಾವಣೆ ಮಾಡಲು ಒತ್ತಾಯಿಸುತ್ತದೆ.
ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಇನ್ನಿಂಗ್ಸ್ ಆರಂಭಿಸುತ್ತಾರೆ, ಆದರೆ ಪಾಟಿದಾರ್ ಆಡದಿದ್ದರೆ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ. ಇದರೊಂದಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ.












Click it and Unblock the Notifications