PBKS vs DC: ಸಿಡಿದ ಪೃಥ್ವಿ ಶಾ, ರೋಸ್ಸೋ: ಮಹತ್ವದ ಪಂದ್ಯದಲ್ಲಿ ಪಂಜಾಬ್ ಗೆಲುವಿಗೆ ಬೃಹತ್ ಗುರಿ
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿರುವ ಡೆಲ್ಲಿ ಕ್ಯಾಪಿಟಲ್ಸ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದೆ. ಅಗ್ರ ಕ್ರಮಾಂಕದ ಮೂವರು ಆಟಗಾರರು ಕೂಡ ಅಮೋಘ ಪ್ರದರ್ಶನ ನೀಡಿರುವ ಕಾರಣದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಮಡ ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ ತಂಡಕ್ಕೆ ಬರೊಬ್ಬರಿ 214 ರನ್‌ಗಳ ಗುರಿ ನೀಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡ ಮೊದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಫಾರ್ಮ್ ಕಳೆದುಕೊಂಡಿದ್ದ ಪೃಥ್ವಿ ಶಾ ಈ ಪಂದ್ಯದಲ್ಲಿ ಆಡುವ ಬಳಗದಲ್ಲಿ ಅವಕಾಶ ಪಡೆದುಕೊಂಡಿದ್ದರು. ಈ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಪೃಥ್ವಿ ಶಾ ಅದ್ಭುತವಾಗಿ ಬಳಸಿಕೊಂಡಿದ್ದು ನಾಯಕ ಡೇವಿಡ್ ವಾರ್ನರ್ ಜೊತೆಗೂಡಿ ಅದ್ಭುತ ಆರಂಭವನ್ನು ನೀಡಿದರು.

ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಜೋಡಿ ಈ ಪಂದ್ಯದಲ್ಲಿ ಮೊದಲ ವಿಕೆಟ್‌ಗೆ ಭರ್ಜರಿ 94 ರನ್‌ಗಳ ಜೊತೆಯಾಟ ನೀಡಿದರು. ಈ ಸಂದರ್ಭದಲ್ಲಿ 31 ಎಸೆತಗಳಲ್ಲಿ 46 ರನ್ ಸಿಡಿಸಿದ್ದ ವಾರ್ನರ್ ಶಿಖರ್ ಧವನ್ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು. ಅದಾದ ಬಳಿಕ ಪೃಥ್ವಿ ಶಾ ಅವರನ್ನು ಸೇರಿಕೊಂಡ ರಿಲೀ ರೊಸ್ಸೋ ಮತ್ತೊಂದು ಬೃಹತ್ ಜೊತೆಯಾಟಕ್ಕೆ ಕಾರಣವಾದರು. 38 ಎಸೆತಗಳಲ್ಲಿ 54 ರನ್ ಬಾರಿಸಿದ ಪೃಥ್ವಿ ಶಾ ಕಡೆಗೂ ಫಾರ್ಮ್ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಅದ್ಭುತ ಇನ್ನಿಂಗ್ಸ್ ನೀಡಿದ್ದಾರೆ.
ಇನ್ನು ಪೃಥ್ವಿ ಶಾ ವಿಕೆಟ್ ಕಳೆದುಕೊಂಡ ಬಳಿಕ ರೊಸ್ಸೋಗೆ ಸಾಲ್ಟ್ ಕೂಡ ಅದ್ಭುತವಾಗಿ ಸಾತ್ ನೀಡಿದರು. ಈ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರೊಸ್ಸೊ ಕೇವಲ 37 ಎಸೆತಗಳಲ್ಲಿ 82 ರನ್ ಬಾರಿಸಿದ್ದಾಎ. 6 ಬೌಂಡರಿ ಹಾಗೂ 6 ಸಿಕ್ಸರ್ ಬಾರಿಸಿದ ಅವರು ತಂಡದ ಮೊತ್ತ 200ರ ಹಡಿದಾಟಲು ಕಾರಣವಾದರು. ಸಾಲ್ಟ್ ಈ ಪಂದ್ಯದಲ್ಲಿ 14 ಎಸೆತಗಳಲ್ಲಿ 26 ರನ್ ಬಾರಿಸಿದ್ದಾರೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 213 ರನ್‌ಗಳಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬೃಹತ್ ಗುರಿ ಮುಂದಿಟ್ಟಿರುವುದು ಪಂಜಾಬ್ ಕಿಂಗ್ಸ್ ತಂಡಕ್ಕೆ ಸಂಕಷ್ಟವನ್ನುಂಟು ಮಾಡಿದೆ. ಪ್ಲೇಆಫ್ ಹಂತಕ್ಕೇರುವ ಸ್ಪರ್ಧೆಯಲ್ಲಿ ಮುನ್ನಡೆ ಸಾಧಿಸಬೇಕಾದರೆ ಪಂಜಾಬ್ ಕಿಂಗ್ಸ್ ತಂಡ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅಗತ್ಯವಾಗಿದೆ. ಇದೀಗ ಪಂಜಾಬ್ ಕಿಂಗ್ಸ್ ತಂಡದ ಬ್ಯಾಟರ್‌ಗಳ ಮೇಲಿನ ಒತ್ತಡ ಹೆಚ್ಚಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ರಿಲೀ ರೊಸ್ಸೌ, ಅಕ್ಸರ್ ಪಟೇಲ್, ಅಮನ್ ಹಕೀಮ್ ಖಾನ್, ಯಶ್ ಧುಲ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್
ಪಂಜಾಬ್ ಕಿಂಗ್ಸ್: ಶಿಖರ್ ಧವನ್(ನಾಯಕ), ಅಥರ್ವ ಟೈಡೆ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಸ್ಯಾಮ್ ಕರ್ರಾನ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ಕಗಿಸೊ ರಬಾಡ, ನಾಥನ್ ಎಲ್ಲಿಸ್, ಅರ್ಶ್‌ದೀಪ್ ಸಿಂಗ್












Click it and Unblock the Notifications