WTC ಫೈನಲ್ ವೇಳೆಗೆ ರೋಹಿತ್ ಫಾರ್ಮ್ ಕಂಡುಕೊಳ್ಳಲು ಇದೊಂದೇ ಮಾರ್ಗ: ಮಾಜಿ ಕ್ರಿಕೆಟಿಗನ ಹೇಳಿಕೆ
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಈ ಬಾರಿಯ ಐಪಿಎಲ್‌ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ. ರೋಹಿತ್ ಶರ್ಮಾ ರನ್‌ಗಳಿಸಲು ಅಕ್ಷರಶಃ ಪರದಾಡುತ್ತಿದ್ದು ಎದುರಾಳಿ ಬೌಲರ್‌ಗಳಿಗೆ ಸುಲಭ ತುತ್ತಾಗುತ್ತಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ವಿರುದ್ಧ ಸಾಕಷ್ಟು ಟೀಕೆಗಳು ಎದುರಾಗುತ್ತಿದೆ. ಇನ್ನು ಈ ಸಂದರ್ಭದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿದ್ದು ರೋಹಿತ್ ಶರ್ಮಾ ಫಾರ್ಮ್ ಟೀಮ್ ಇಂಡಿಯಾ ಪಾಲಿಗೂ ಚಿಂತೆ ಹೆಚ್ಚಿಸಿರುವುದರಲ್ಲಿ ಅನುಮಾನವಿಲ್ಲ.
ಈ ಸಂದರ್ಭದಲ್ಲಿ ವೆಸ್ಟ್ ಇಂಡಿಸ್‌ನ ಮಾಜಿ ಕ್ರಿಕೆಟಿಗ ಡ್ಯಾರೆನ್ ಗಂಗಾ ಪ್ರತಿಕ್ರಿಯೆ ನೀಡಿದ್ದು ರೋಹಿತ್ ಶರ್ಮಾಗೆ ಅಮೂಲ್ಯ ಸಲಹೆಯೊಂದನ್ನು ನೀಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ವಿಶ್ರಾಂರಿ ಪಡೆದುಕೊಂಡು ತಾಜಾತನದಿಂದ ಮೈದಾನಕ್ಕಿಳಿಯುವುದು ಸೂಕ್ತ ಎಂದಿದ್ದಾರೆ ಮಾಜಿ ಕ್ರಿಕೆಟಿಗ ಡ್ಯಾರೆನ್ ಗಂಗಾ.

ಈ ಬಾರಿಯ ಐಪಿಎಲ್‌ನಲ್ಲಿ ಕಳಪೆ ಆರಂಭವನ್ನು ಪಡೆದುಕೊಂಡಿದ್ದ ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯ ನಿರ್ಣಾಯಕ ಹಂತದಲ್ಲಿ ಅದ್ಭುತ ಫಾರ್ಮ್ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ತಂಡದ ಪ್ರಮುಖ ಆಟಗಾರರು ಅದ್ಭುತ ಲಯಕ್ಕೆ ಮರಳಿದ್ದು ತಂಡದ ಗೆಲುವಿಗೆ ಕಾರಣವಾಗುತ್ತಿದ್ದಾರೆ. ಆದರೆ ರೋಹಿತ್ ಶರ್ಮಾ ಮಾತ್ರವೇ ವೈಫಲ್ಯ ಅನುಭವಿಸುತ್ತಿರುವುದು ಮುಂಬೈ ಇಂಡಿಯನ್ಸ್ ತಂಡಕ್ಕೂ ಕಳವಳ ಮೂಡಿಸಿದೆ.
KKR vs RR: ಪ್ಲೇಆಫ್ ಹಾದಿ ಸುಗಮಗೊಳಿಸಲು ಮತ್ತೆರಡು ತಂಡಗಳ ಸೆಣೆಸಾಟ
ರೋಹಿತ್ ಶರ್ಮಾ ಈ ಬಾರಿಯ ಐಪಿಎಲ್‌ನಲ್ಲಿ ರನ್‌ಗಳಿಸಲು ವಿಫಲವಾಗಿದ್ದಾರೆ. ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿಯೂ ರೋಹಿತ್ ಶರ್ಮಾ ಕೇವಲ 7 ರನ್‌ಗಳಿಗೆ ಔಟಾಗಿದ್ದರು. ಇನ್ನು ಈವರೆಗೆ ಆಡಿರುವ 11 ಪಂದ್ಯಗಳ ಪೈಕಿ ರೋಹಿತ್ ಶರ್ಮಾ ಕೇವಲ 191 ರನ್ ಗಳಿಸಿದ್ದು 17.36ರಷ್ಟು ಸರಾಸರಿ ಹೊಂದಿದ್ದಾರೆ.
ವಿಶ್ರಾಂತಿಗೆ ಸಲಹೆ ನೀಡಿದ್ದ ಮಾಜಿ ಕ್ರಿಕೆಟಿಗ ಗವಾಸ್ಕರ್
ಇನ್ನು ರೋಹಿತ್ ಶರ್ಮಾ ಮರಳಿ ಫಾರ್ಮ್ ಕಂಡುಕೊಳ್ಳಲು ವಿಶ್ರಾಂತಿ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಇತ್ತೀಚೆಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದರು. ವಿಶ್ರಾಂತಿ ಪಡೆದು ವಿಶ್ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಕಣಕ್ಕಿಳಿದರೆ ರೋಹಿತ್ ತಮ್ಮ ಲಯವನ್ನು ಕಂಡುಕೊಳ್ಳಲು ಉತ್ತಮ ಅವಕಾಶ ದೊರೆಯಲಿದೆ ಎಂದು ಗವಾಸ್ಕರ್ ಹೇಳಿಕೆ ನೀಡಿದ್ದರು.
ರೋಹಿತ್ ಸಾಮರ್ಥ್ಯದ ಬಗ್ಗೆ ಅನುಮಾನವಿಲ್ಲ
ಇನ್ನು ಇದೇ ಸಂದರ್ಭದಲ್ಲಿ ಡ್ಯಾರೆನ್ ಗಂಗಾ ರಾನು ರೋಹಿತ್ ಶರ್ಮಾ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿಲ್ಲ ಎಂದಿದ್ದು ಆತನೋರ್ವ ಶ್ರೇಷ್ಠ ಆಟಗಾರ ಎಂದಿದ್ದಾರೆ. "ರೋಹಿತ್ ಶರ್ಮಾ ಓರ್ವ ವಿಶ್ವದರ್ಜೆಯ ಆಟಗಾರ ಎಂಬುದರಲ್ಲಿ ಅನುಮಾನವೇ ಇಲ್ಲ. ಈ ಹಿಂದೆಯೂ ನಾವು ಶ್ರೇಷ್ಠ ಆಟಗಾರರು ಕಠಿಣ ಸಂದರ್ಭಗಳನ್ನು ಎದುರಿಸಿರುವುದನ್ನು ನೋಡಿದ್ದೇವೆ. ಇತ್ತೀಚೆಗಿನ ಉದಾಹರಣೆಯೆಂದರೆ ವಿರಾಟ್ ಕೊಹ್ಲಿ ಕೂಡ ಅಂಥಾದ್ದೇ ಪರಿಸ್ಥಿತಿ ಎದುರಿಸಿದ್ದರು. ಆದರೆ ಬಳಿಕ ಅವರು ಅದ್ಭುತ ಲಯಕ್ಕೆ ಮರಳಿದ್ದು ಉತ್ತಮವಾಗಿ ರನ್ ಬಾರಿಸುತ್ತಿದ್ದಾರೆ" ಎಂದಿದ್ದಾರೆ ಡ್ಯಾರೆನ್ ಗಂಗಾ.
"ಸಾಕಷ್ಟು ಕ್ರಿಕೆಟ್ ಆಡುತ್ತಿರುವ ಕಾರಣ ರೋಹಿತ್ ಶರ್ಮಾ ಕೂಡ ಅಂಥಾದ್ದೇ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ನಾಯಕನಾಗಿ ಹಾಗೂ ಆಟಗಾರನಾಗಿ ಲಯವನ್ನು ಕಳೆದುಕೊಂಡಿರುವ ಸಾಧ್ಯತೆಗಳು ಇದೆ. ಈಗ ಮತ್ತೆ ತಾಜಾತನದಿಂದ ಕಣಕ್ಕಿಳಿಯಬೇಕಾದರೆ ವಿಶ್ರಾಂತಿ ಪಡೆದುಕೊಂಡು ಲಯಕ್ಕೆ ಮರಳಬೇಕು" ಎಂದಿದ್ದಾರೆ ಡ್ಯಾರನ್ ಗಂಗಾ.












Click it and Unblock the Notifications