Mayank Agarwal: ಟೀಂ ಇಂಡಿಯಾದಿಂದ ಕೈಬಿಟ್ಟ ನಂತರ, IPL ವೃತ್ತಿಜೀವನ ಅಂತ್ಯದ ಅಪಾಯದಲ್ಲಿ ಈ ಕನ್ನಡಿಗ!
2023ರ ಐಪಿಎಲ್‌ಗಾಗಿ ಕಳೆದ ಡಿಸೆಂಬರ್‌ನಲ್ಲಿ ನಡೆದ ಮಿನಿ ಹರಾಜಿನಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ತಂಡ ಅತ್ಯಧಿಕ ಮೊತ್ತದ ಪರ್ಸ್‌ನೊಂದಿಗೆ ಬಿಡ್ಡಿಂಗ್‌ಗೆ ಪ್ರವೇಶಸಿತು. ತಮ್ಮ ತಂಡದ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸಲು ಭಾರಿ ಹಣವನ್ನು ಖರ್ಚು ಮಾಡಿದೆ. ಆದರೆ, ಇದುವರೆಗೂ ಎಸ್ಆರ್ಎಚ್ ಫ್ರಾಂಚೈಸಿಗೆ ಅದರ ಲಾಭ ಕಾಣಲು ಸಾಧ್ಯವಾಗಿಲ್ಲ.
ಸನ್‌ರೈಸರ್ಸ್ ಹೈದರಾಬಾದ್ ತಂಡ ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಆಡಿದ ಮೊದಲ ಎರಡೂ ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸೋತಿದೆ. ಶುಕ್ರವಾರ, ಏಪ್ರಿಲ್ 7ರಂದು ಲಕ್ನೋ ಸೂಪರ್ ಜೈಂಟ್ಸ್ ತಂಡ ತನ್ನ ತವರಿನಲ್ಲಿ ಹೈದರಾಬಾದ್ ತಂಡವನ್ನು 5 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಲಕ್ನೋ ಸೂಪರ್ ಜೈಂಟ್ಸ್ ತಂಡದ ಅಮೋಘ ಬೌಲಿಂಗ್ ಪ್ರದರ್ಶನದ ಎದುರು ಮಂಕಾಗಿ, ನಿಗದಿತ 20 ಓವರ್‌ಗಳಲ್ಲಿ 121 ರನ್ ಗಳಿಸಲಷ್ಟೇ ಶಕ್ತವಾಯಿತು. ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ ತಂಡ ಈ ಗುರಿಯನ್ನು 5 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವು ಸಾಧಿಸಿತು. ಈ ಋತುವಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಸಂಪೂರ್ಣ ವಿಫಲವಾಗಿದೆ.
ಇದೇ ವೇಳೆ ಒಬ್ಬ ಅನುಭವಿ ಭಾರತೀಯ ಬ್ಯಾಟ್ಸ್‌ಮನ್ ಸತತ ಎರಡನೇ ಪಂದ್ಯದಲ್ಲೂ ವಿಫಲರಾದರು. ಈತನ ಕಳಪೆ ಪ್ರದರ್ಶನದಿಂದಾಗಿ ಈ ಮೊದಲು ಟೀಂ ಇಂಡಿಯಾದಿಂದ ಹೊರಹಾಕಲಾಗಿತ್ತು. ಅಲ್ಲದೇ ಇತ್ತೀಚೆಗಷ್ಟೇ ಈ ಆಟಗಾರನನ್ನು ಕೇಂದ್ರ ಗುತ್ತಿಗೆ ಪಟ್ಟಿಯಿಂದಲೂ ಕೈಬಿಡಲಾಗಿದ್ದು, ಇದೀಗ ಈ ಅನುಭವಿ ಆಟಗಾರನ ಐಪಿಎಲ್ ವೃತ್ತಿಜೀವನವೂ ಅಪಾಯದಲ್ಲಿದೆ ಎಂಬ ಮುನ್ಸೂಚನೆ ತೋರುತ್ತಿದೆ.

ಹೌದು. ಟೀಮ್ ಇಂಡಿಯಾದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅವರ ಇತ್ತೀಚಿನ ಪ್ರದರ್ಶನ ನೋಡಿದರೆ, ಈ ಮಾತು ನಿಜವೆನಿಸುತ್ತಿದೆ. 2023ರ ಐಪಿಎಲ್ ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಮಯಾಂಕ್ ಅಗರ್ವಾಲ್ ದೊಡ್ಡ ಇನ್ನಿಂಗ್ಸ್ ಆಡಲು ವಿಫಲರಾಗಿದ್ದಾರೆ.
ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಇನ್ನಿಂಗ್ಸ್ ಆರಂಭಿಸಿದ ಮಯಾಂಕ್ ಅಗರ್ವಾಲ್ ಕೇವಲ 7 ಎಸೆತಗಳಲ್ಲಿ 8 ರನ್ ಗಳಿಸಿ ಔಟಾದರು. ಇದಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ 23 ಎಸೆತಗಳಲ್ಲಿ 27 ರನ್ ಗಳಿಸಿದ್ದರು. ಇದೇ ರೀತಿಯ ಕಳಪೆ ಪ್ರದರ್ಶವನ್ನು ಮುಂಬರುವ ಪಂದ್ಯಗಳಲ್ಲೂ ತೋರಿದರೆ ಐಪಿಎಲ್‌ನಿಂದಲೂ ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿದೆ.

ಕಳೆದ ವರ್ಷದ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡ ನಾಯಕನಾಗಿದ್ದರು. ಆದರೆ, ತಂಡವನ್ನು ಪ್ಲೇಆಫ್‌ಗೆ ಮುನ್ನಡೆಸಲು ಮತ್ತು ವೈಯಕ್ತಿಕವಾಗಿ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾದ ಕಾರಣ, ತಂಡದ ಫ್ರಾಂಚೈಸಿ ಅವರನ್ನು ಬಿಡುಗಡೆಗೊಳಿಸಿತ್ತು. ಕನಿಷ್ಠ ಒಂದು ಅರ್ಧ ಶತಕ ಬಾರಿಸಲು ಅವರಿಂದ ಸಾಧ್ಯವಾಗಲಿಲ್ಲ.
ಬಿಸಿಸಿಐ ಇತ್ತೀಚೆಗೆ ತನ್ನ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದ್ದು, ಈ ಪಟ್ಟಿಯಿಂದ ಮಯಾಂಕ್ ಅಗರ್ವಾಲ್ ಅವರ ಹೆಸರನ್ನು ತೆಗೆದು ಹಾಕಲಾಗಿದೆ. ಅವರು ಯಾವುದೇ ಗ್ರೇಡ್‌ನಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಮಯಾಂಕ್ ಅಗರ್ವಾಲ್ ಸದ್ಯ ಕರ್ನಾಟಕ ರಣಜಿ ತಂಡದ ನಾಯಕನಾಗಿದ್ದಾರೆ. ಪ್ರಸಕ್ತ ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.
ಕಳೆದ ವರ್ಷ ಶ್ರೀಲಂಕಾ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಮಯಾಂಕ್ ಅಗರ್ವಾಲ್ ಕಳಪೆ ಪ್ರದರ್ಶನ ನೀಡಿದ್ದರು. ಅಂದಿನಿಂದ ಭಾರತ ತಂಡದ ಎಲ್ಲಾ ಸ್ವರೂಪದ ಆಟದಿಂದ ಹೊರಗುಳಿಯುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಶುಭ್ಮನ್ ಗಿಲ್ ಅಗ್ರ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ, ಭಾರತ ತಂಡದಲ್ಲಿ ಕ್ರಿಕೆಟ್ ವೃತ್ತಿಜೀವನ ಮರಳಿ ಪಡೆಯಬೇಕಾದರೆ, ಉತ್ತಮ ಬ್ಯಾಟಿಂಗ್ ಪ್ರದರ್ಶನದ ಅವಶ್ಯಕತೆ ಇದೆ.












Click it and Unblock the Notifications