GT vs CSK IPL 2023 Final: ಬೆಸ ವರ್ಷಗಳಲ್ಲಿ ಚೇಸಿಂಗ್ ಮಾಡಿದ ತಂಡ ಎಂದಿಗೂ ಗೆದ್ದಿಲ್ಲ! ಆಸಕ್ತಿಕರ ಮಾಹಿತಿ ಇಲ್ಲಿದೆ
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಭಾನುವಾರ ಪಂದ್ಯ ಮಳೆಯಿಂದ ರದ್ದಾದ ಬಳಿಕ ಸೋಮವಾರಕ್ಕೆ ಪೋಸ್ಟ್ ಪೋನ್ ಮಾಡಲಾಗಿತ್ತು, ಸೋಮವಾರ ಮಳೆ ಇಲ್ಲದ ಕಾರಣ ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗಿದೆ.
ಎರಡೂ ತಂಡಗಳು ಬಲಿಷ್ಠವಾಗಿದ್ದು ಪ್ರತಿಷ್ಠಿತ ಕಪ್‌ಗಾಗಿ ಸೆಣೆಸಾಟ ನಡೆಸಲಿವೆ. ಆದರೆ ಐಪಿಎಲ್ ಇತಿಹಾಸವನ್ನು ತೆಗೆದು ನೋಡಿದರೆ ಒಂದಷ್ಟು ಅಚ್ಚರಿಯ ವಿಚಾರಗಳು ತಿಳಿಯುತ್ತವೆ. 2008 ರಿಂದ ಇದುವರೆಗೂ ಒಟ್ಟು 15 ಬಾರಿ ಫೈನಲ್ ಪಂದ್ಯಗಳನ್ನು ನೋಡಿದ್ದೇವೆ, ಅಚ್ಚರಿ ಎಂದರೆ ಬೆಸ ವರ್ಷಗಳಲ್ಲಿ ಪ್ರತಿ ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಗೆಲುವು ಸಾಧಿಸಿದೆ.

2009ರಲ್ಲಿ ಶುರುವಾದ ಈ ಟ್ರೆಂಟ್ 2021ರವರೆಗೆ ಮುಂದುವರೆದಿದೆ, 2009ರ ಐಪಿಎಲ್ ಫೈನಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 6 ರನ್‌ಗಳ ಗೆಲುವು ಸಾಧಿಸಿತ್ತು. 2011ರಲ್ಲಿ ಸಿಎಸ್‌ಕೆ ತಂಡ ಆರ್ ಸಿಬಿ ವಿರುದ್ಧ 58 ರನ್‌ಗಳ ಜಯ ಸಾಧಿಸಿತ್ತು. 2013ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 23 ರನ್‌ಗಳ ಗೆಲುವು ಸಾಧಿಸಿತ್ತು. 2015ರಲ್ಲಿ ಮುಂಬೈ ಇಂಡಿಯನ್ಸ್ ಸಿಎಸ್‌ಕೆ ವಿರುದ್ಧ 41 ರನ್‌ಗಳ ಗೆಲುವು ಸಾಧಿಸಿತ್ತು.
2017ರಲ್ಲಿ ಮುಂಬೈ ಇಂಡಿಯನ್ಸ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ 1 ರನ್‌ಗಳ ರೋಚಕ ಗೆಲುವು ಸಾಧಿಸಿತ್ತು. 2019ರಲ್ಲಿ ಮುಂಬೈ ಇಂಡಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಒಂದು ರನ್‌ನಿಂದ ರೋಚಕ ಗೆಲುವು ಸಾಧಿಸಿ ಟ್ರೋಫಿ ತ್ತಿಹಿಡಿದಿತ್ತು. 2021ರಲ್ಲಿ ಸಿಎಸ್‌ಕೆ ತಂಡ ಕೆಕೆಆರ್ ವಿರುದ್ಧ 27 ರನ್‌ಗಳ ಗೆಲುವು ಕಂಡಿತ್ತು.
ಈ ಬಾರಿ ಕೂಡ ಅದೇ ದಾಖಲೆ ಮುಂದುವರೆಯುತ್ತಾ?
ಇನ್ನು ಈ ಬಾರಿ ಐಪಿಎಲ್ ಫೈನಲ್‌ನಲ್ಲಿ ಟಾಸ್ ಗೆದ್ದಿರುವ ಧೋನಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಈ ಬಾರಿಯಾದರೂ ಹಳೆಯ ದಾಖಲೆಯನ್ನು ಮುರಿದು ಚೆನ್ನೈ ಸೂಪರ್ ಕಿಂಗ್ಸ್ ಇತಿಹಾಸ ನಿರ್ಮಿಸುತ್ತಾ ಎನ್ನುವ ಕುತೂಹಲ ಇದೆ. ಈ ಬಾರಿ ಸಿಎಸ್‌ಕೆ ಗೆಲುವು ಸಾಧಿಸಿದರೆ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಬೆಸ ವರ್ಷದಲ್ಲಿ ಚೇಸಿಂಗ್ ತಂಡ ಗೆದ್ದ ಸಾಧನೆ ಮಾಡಲಿದೆ.
ಇದುವರೆಗೆ ನಡೆದಿರುವ 15 ಐಪಿಎಲ್ ಆವೃತ್ತಿಗಳ ಫೈನಲ್ ಪಂದ್ಯದಲ್ಲಿ 9 ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲುವು ಸಾಧಿಸಿದ್ದರೆ, 6 ಬಾರಿ ಚೇಸಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. 16 ಆವೃತ್ತಿಯ ಚಾಂಪಿಯನ್ ಪಟ್ಟಕ್ಕಾಗಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸದ್ಯ ಎರಡೂ ತಂಡಗಳ ಹೋರಾಟ ಮಾಡುತ್ತಿವೆ.












Click it and Unblock the Notifications