IPL 2023: ತವರಿನಲ್ಲಿ ನಡೆಯುವ ಮುಂದಿನ ಪಂದ್ಯಗಳನ್ನು ಗೆಲ್ಲುತ್ತೇವೆ ಎಂದ ಅಕ್ಷರ್ ಪಟೇಲ್
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಿರೀಕ್ಷಿತ ಆರಂಭ ಸಿಕ್ಕಿಲ್ಲ. ಮೊದಲನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 50 ರನ್‌ಗಳಿಂದ ಸೋತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಪಂದ್ಯವನ್ನು ಗುಜರಾತ್ ಜೈಂಟ್ಸ್ ವಿರುದ್ಧ ಆಡಿತ್ತು. ತವರಿನ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಕೂಡ ಡೇವಿಡ್ ವಾರ್ನರ್ ಬಳಗ 6 ವಿಕೆಟ್‌ಗಳಿಂದ ಸೋಲನುಭವಿಸುವ ಮೂಲಕ ನಿರಾಸೆ ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು. ತಂಡದ ಪ್ರಮುಖ ಬ್ಯಾಟರ್ ಗಳಾದ ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್ ಮತ್ತು ರಿಲೀ ರೊಸೊವ್ ವಿಫಲವಾದರು. ರಶೀದ್ ಖಾನ್, ಅಲ್ಜಾರಿ ಜೋಸೆಫ್, ಮತ್ತು ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ಮಾಡಿದರು.

ಈ ಮೊತ್ತವನ್ನು ಬೆನ್ನತ್ತಿದ ಗುಜರಾತ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾದರೂ, ಸಾಯಿ ಸುದರ್ಶನ್ ತಂಡಕ್ಕೆ ಆಸರೆಯಾದರು. 48 ಎಸೆತಗಳಲ್ಲಿ 4 ಬೌಂಡರಿ ಎರಡು ಸಿಕ್ಸರ್ ಸಹಿತ ಅಜೇಯ 62 ರನ್ ಗಳಿಸಿ ಗೆಲುವಿಗೆ ಕಾರಣವಾದರು. 18.1 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 163 ರನ್ ಗಳಿಸುವ ಮೂಲಕ ಈ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ಎರಡನೇ ಜಯವನ್ನು ದಾಖಲಿಸಿದೆ.
ಪಂದ್ಯದ ಬಳಿಕ ಮಾತನಾಡಿದ ತಂಡದ ಉಪನಾಯಕ ಅಕ್ಷರ್ ಪಟೇಲ್, ನಾಲ್ಕು ವರ್ಷಗಳ ಬಳಿಕ ತವರಿನಲ್ಲಿ ಅಭಿಮಾನಿಗಳ ಮುಂದೆ ಪಂದ್ಯವನ್ನಾಡಿದ್ದು ಖುಷಿ ನೀಡಿದೆ ಎಂದರು. ತವರಿನಲ್ಲಿ ನಡೆದ ಮೊದಲನೇ ಪಂದ್ಯವನ್ನು ಸೋತಿದ್ದರೂ, ಮುಂದಿನ ಪಂದ್ಯಗಳಲ್ಲಿ ಉತ್ತಮ ಆಟ ಪ್ರದರ್ಶಿಸುವ ಮೂಲಕ ಗೆಲುವು ಸಾಧಿಸುವುದಾಗಿ ಹೇಳಿದ್ದಾರೆ. ಮೊದಲನೇ ಪಂದ್ಯವನ್ನು ಅಭಿಮಾನಿಗಳು ನೋಡಿ ಸಂತಸಗೊಂಡಿರುತ್ತಾರೆ ಎಂದು ಅವರು ಹೇಳಿದರು.
ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ
ಡೆಲ್ಲಿ ಕ್ಯಾಪಿಟಲ್ಸ್ ಒಂದು ತಂಡವಾಗಿ ಒಗ್ಗಟ್ಟಾಗಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ. "ಟೂರ್ನಮೆಂಟ್‌ನಲ್ಲಿ ಇದು ಇನ್ನೂ ಆರಂಭಿಕ ದಿನಗಳು. ಸಾಕಷ್ಟು ಗ್ಯಾಪ್ ನಂತರ ನಾವು ಒಟ್ಟಿಗೆ ಆಡುತ್ತಿದ್ದೇವೆ. ಒಂದು ತಂಡವಾಗಿ ಆಡಲು ಸ್ವಲ್ಪ ಸಮಯ ಬೇಕಾಗುತ್ತದೆ. ನಮ್ಮ ಸಂಯೋಜನೆಗಳು ಕೆಲಸ ಮಾಡಿದರೆ, ನಾವು ಉತ್ತಮ ಪ್ರದರ್ಶನ ನೀಡುತ್ತೇವೆ" ಎಂದು ಹೇಳಿದರು.

ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಅಕ್ಷರ್ ಪಟೇಲ್ 22 ಎಸೆತಗಳಲ್ಲಿ 2 ಬೌಂಡರಿ ಮೂರು ಸಿಕ್ಸರ್ ಸಹಿತ 36 ರನ್ ಗಳಿಸಿದರು. ಅಲ್ಲದೇ ಒಂದೇ ಕೈಯಲ್ಲಿ ಸಿಕ್ಸರ್ ಸಿಡಿಸಿ ಮಿಂಚಿದರು. ಈ ಸಿಕ್ಸರ್ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ನಾನು ಯೋಚನೆ ಮಾಡಿ ಅದನ್ನು ಹೊಡೆಯಲಿಲ್ಲ, ಹೊಡೆಯಲು ಹೋದಾಗ ನನ್ನ ಒಂದು ಕೈನಿಂದ ಬ್ಯಾಟ್ ಜಾರಿತು, ಅದೃಷ್ಟವಶಾತ್ ಅದು ಸಿಕ್ಸ್‌ಗೆ ಹೋಯಿತು. ನಂತರ ಒಂದು ಕೈಯಲ್ಲಿ ಸಿಕ್ಸ್ ಹೊಡೆದದ್ದು ರಿಷಬ್ ಪಂತ್‌ಗಾಗಿ ಎಂದು ಹೇಳಿದೆ. " ಎಂದು ಹೇಳಿದರು.
ನನ್ನ ಬ್ಯಾಟಿಂಗ್ ಬಗ್ಗೆ ಸಂತೋಷಗೊಂಡಿದ್ದೇನೆ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ಮುಂದುವರೆಸುತ್ತೇನೆ ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ. ಪಂದ್ಯದ ಬಳಿಕ ರಿಷಬ್ ಪಂತ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. "ರಿಷಬ್ ಪಂತ್ ಅವರನ್ನು ಡ್ರೆಸ್ಸಿಂಗ್ ರೂಂನಲ್ಲಿ ಭೇಟಿ ಮಾಡಲು ತುಂಬಾ ಸಂತೋಷವಾಯಿತು. ಅವರು ಶೀಘ್ರದಲ್ಲೇ ಚೇತರಿಸಿಕೊಂಡು ಮೈದಾನಕ್ಕೆ ವಾಪಸಾಗಲಿದ್ದಾರೆ" ಎಂದು ಅಕ್ಷರ್ ಹೇಳಿದರು.












Click it and Unblock the Notifications