ಬುಮ್ರಾ ದುರಂತ; ಕ್ರಿಕೆಟಿಗರನ್ನು ಕಾಡುವ ಪ್ರಮುಖ ಗಾಯಗಳಿವು
ಭಾರತದ ಬೌಲಿಂಗ್ ಟ್ರಂಪ್ ಕಾರ್ಡ್ ಎನಿಸಿದ್ದ ಜಸ್‌ಪ್ರೀತ್ ಬುಮ್ರಾ ಈಗ ಗಾಯದ ಸುಳಿಗೆ ಸಿಲುಕಿಕೊಂಡಿದ್ದಾರೆ. ಗಾಯದ ಕಾರಣದಿಂದ ಏಷ್ಯಾ ಕಪ್ ಸೇರಿದಂತೆ ಇತ್ತೀಚೆಗೆ ಆಟದಿಂದ ಹೊರಗೆ ಉಳಿದಿದ್ದ ಬುಮ್ರಾ ಇದೀಗ ವಿಶ್ವಕಪ್‌ನಲ್ಲೂ ಆಡಲಾಗದ ಪರಿಸ್ಥಿತಿ ಇದೆ.
ಅಕ್ಟೋಬರ್ 16ರಿಂದ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ಆಡಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಜಸ್‌ಪ್ರೀತ್ ಬುಮ್ರಾ ಅವರಿಗೆ ಬ್ಯಾಕ್ ಸ್ಟ್ರೆಸ್ ಫ್ರಾಕ್ಚರ್ ಆಗಿದ್ದು ಅದರಿಂದ ಚೇತರಿಸಿಕೊಳ್ಳಲು ಕನಿಷ್ಠ ಆರು ತಿಂಗಳಾದರೂ ಬೇಕು ಎನ್ನಲಾಗುತ್ತಿದೆ. ಸದ್ಯ ಅವರು ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅವರು ಆಡಬೇಕಿತ್ತಾದರೂ ಗಾಯದ ಕಾರಣ ಅವರು ಹೊರಗುಳಿದು ಎನ್‌ಸಿಎ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಒಂದೆರಡು ವಾರದಲ್ಲಿ ಅವರ ಚೇತರಿಕೆ ಸಾಧ್ಯವೇ ಇಲ್ಲ ಎಂದು ಎನ್‌ಸಿಎಯಲ್ಲಿರುವ ವೈದ್ಯರು ಸ್ಪಷ್ಟಪಡಿಸಿದ್ದಾರೆನ್ನಲಾಗಿದೆ.

ಬುಮ್ರಾ ಬದಲು ಯಾರು?
ಜಸ್‌ಪ್ರೀತ್ ಬುಮ್ರಾ ಟಿ20 ವಿಶ್ವಕಪ್‌ನಲ್ಲಿ ಆಡದೇ ಇರುವುದು ಭಾರತ ತಂಡಕ್ಕೆ ಹಿನ್ನಡೆ ಎಂಬುದೇನೋ ಹೌದು. ಆದರೆ, ಭಾರತದ ಬೌಲಿಂಗ್ ಬ್ಯಾಕಪ್ ಉತ್ತಮವಾಗಿದೆ. ಮೊಹಮ್ಮದ್ ಶಮಿ ಮತ್ತು ದೀಪಕ್ ಚಾಹರ್ ಅವರು ಸ್ಟ್ಯಾಂಡ್‌ಬೈ ಅಗಿ ಲಭ್ಯ ಇದ್ದಾರೆ. ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು. ಬಿಸಿಸಿಐ ಮೂಲಗಳ ಪ್ರಕಾರ ಮೊಹಮ್ಮದ್ ಶಮಿ ಅವರಿಗೆ ಆಡುವ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

ಬ್ಯಾಕ್ ಸ್ಟ್ರೆಸ್ ಫ್ರ್ಯಾಕ್ಚರ್ ಏನು?
ಜಸ್‌ಪ್ರೀತ್ ಬುಮ್ರಾ ಅವರಿಗೆ ಬ್ಯಾಕ್ ಸ್ಟ್ರೆಸ್ ಫ್ರ್ಯಾಕ್ಚರ್ ಆಗಿದೆ. ಬೆನ್ನು ಮೂಳೆ ಮುರಿತದ ಗಾಯ. ಸ್ಟ್ರೆಸ್ ಫ್ರ್ಯಾಕ್ಚರ್ ಎಂದರೆ ಮೂಳೆಯಲ್ಲಿ ಬಹಳ ಸೂಕ್ಷ್ಮ ಬಿರುಕು ಬಿಡುವುದು. ಅಥ್ಲೀಟ್‌ಗಳಲ್ಲಿ, ಅದರಲ್ಲೂ ದೂರದ ಓಟ ಓಡುವ ಅಥ್ಲೀಟ್‌ಗಳಲ್ಲಿ ಇಂಥ ಇಂಜುರಿ ಹೆಚ್ಚು. ಪಾದ, ಕುಂಡಿ, ಮುಂಗಾಲು, ಕೆಳಬೆನ್ನು ಇಲ್ಲಿ ಸ್ಟ್ರೆಸ್ ಇಂಜುರಿಗಳು ಹೆಚ್ಚು.
ಇಂಥ ಗಾಯಗಳಾದಾಗ ಶೀಘ್ರ ಉಪಶಮನ ಅಸಾಧ್ಯ. ವಿಶ್ರಾಂತಿಯೇ ಇದಕ್ಕೆ ಪರಮ ಚಿಕಿತ್ಸೆ. ಮೂಳೆ ತನ್ನಂತಾನೆ ಕೂಡಿಕೊಳ್ಳುವವರೆಗೂ ವಿಶ್ರಾಂತಿಯಲ್ಲಿರಬೇಕು. ಆ ಗಾಯಕ್ಕೆ ಒತ್ತಡ ಬೀಳದ ಚಟುವಟಿಕೆಗಳನ್ನು ನಡೆಸಬಹುದು. ಅಥವಾ ಬೆನ್ನುಮೂಳೆಯ ಜಾಗವನ್ನು ಶಕ್ತಿಯುತಗೊಳಿಸುವಂಥ ಚಟುವಟಿಕೆ ಮಾಡಬಹುದು. ಉದಾಹರಣೆಗೆ, ಸೈಕ್ಲಿಂಗ್, ಸ್ವಿಮ್ಮಿಂಗ್ ಮಾಡಬಹುದು. ಸ್ಟ್ರೆಂತ್ ಟ್ರೈನಿಂಗ್‌ನಲ್ಲಿ ತೊಡಗಬಹುದು.
ಇದಲ್ಲದೇ ಕ್ರಿಕೆಟ್ ಆಟದ ವೇಳೆ ಸಾಮಾನ್ಯವಾಗಿ ಆಗುವ ಗಾಯ ಹಲವಿವೆ. ಅದರಲ್ಲಿ ಪ್ರಮುಖವಾದ ಕೆಲವು ಗಾಯಗಳಲ್ಲಿ ಹ್ಯಾಮ್‌ಸ್ಟ್ರಿಂಗ್, ಭುಜ ಗಾಯ, ಪಾದಗಂಟು ಮೊದಲಾದವು.

ಮಂಡಿರಜ್ಜು ಸಮಸ್ಯೆ
ಹ್ಯಾಮ್‌ಸ್ಟ್ರಿಂಗ್ ಎಂಬುದು ನಮ್ಮ ಮಂಡಿ ರಜ್ಜು. ಅಥವಾ ಮಂಡಿ ಹಿಂಬದಿಯಲ್ಲಿರುವ ಸ್ನಾಯು ರಜ್ಜು. ತೊಡೆಯ ಹಿಂಭಾಗ ಮತ್ತು ಮಂಡಿಗೆ ಜೋಡಿತವಾಗಿರುವ ಪ್ರಮುಖ ಸ್ನಾಯುಗಳು ಇಲ್ಲಿರುತ್ತವೆ. ಕ್ರಿಕೆಟ್ ಆಟಗಾರರು, ಅದರಲ್ಲೂ ವೇಗದ ಬೌಲರ್‌ಗಳು, ವಿಕೆಟ್ ಕೀಪರ್‌ಗಳಿಗೆ ಹ್ಯಾಮ್‌ಸ್ಟ್ರಿಂಗ್ ಜಾಗ ಬಹಳ ಬಲಿಷ್ಠವಾಗಿರುವುದು ಅಗತ್ಯ. ಇವರಿಗೆ ಗಾಯದ ಅಪಾಯ ಹೆಚ್ಚಿರುತ್ತದೆ.

ಶೌಲ್ಡರ್ ಇಂಜುರಿ
ಬೌಲರ್‌ಗಳಿಗೆ ಕಾಡುವ ಪ್ರಮುಖ ಗಾಯದ ಸಮಸ್ಯೆ ಇದು. ಸ್ಪಿನ್ನರ್ ಆಗಲಿ, ಫಾಸ್ಟ್ ಬೌಲರ್ ಆಗಲಿ ಯಾವುದೇ ಬೌಲರ್ ಆದರೂ ಭುಜವನ್ನು ಅತಿಯಾಗಿ ಬಳಸುವುದು ಅನಿವಾರ್ಯ. ಇದರಿಂದ ಭುಜದ ಗಾಯ ಉದ್ಭವಿಸುವುದು ಬಹಳ ಸಾಮಾನ್ಯ.
ಬ್ಯಾಟಿಂಗ್ ಮತ್ತು ಥ್ರೋಯಿಂಗ್ ಸಂದರ್ಭದಲ್ಲೂ ಭುಜದ ಗಾಯದ ಸಮಸ್ಯೆ ಎದುರಾಗಬಹುದು. ಬಹುತೇಕ ಕ್ರೀಡಾಪಟುಗಳಿಗೆ ಒಂದಲ್ಲ ಒಂದು ಹಂತದಲ್ಲಿ ಭುಜದ ಗಾಯದ ಸಮಸ್ಯೆ ಎದುರಾಗಿಯೇ ಆಗುತ್ತದೆ. ಇದಕ್ಕೆ ವಿಶ್ರಾಂತಿ ಪ್ರಮುಖ ಮದ್ದು. ಭುಜದ ನೋವು ಬಂದರೆ ಐಸ್ ಇಟ್ಟುಕೊಂಡರೆ ಬೇಗ ಶಮನವಾಗುತ್ತದೆ. ಕೆಲ ಆ್ಯಂಟಿ-ಇನ್‌ಫ್ಲಮೇಟರಿ ಜೆಲ್‌ಗಳನ್ನು ಹಚ್ಚಬಹುದು.
ವೇಗದ ಬೌಲರ್‌ಗಳಿಗೆ ಕಾಡುವ ಇನ್ನೊಂದು ಪ್ರಮುಖ ಗಾಯವೆಂದರೆ ದೇಹದ ಬದಿಯದ್ದು. ಬದಿಯಿಂದ ಬಗ್ಗೆ ವೇಗವಾಗಿ ಚೆಂಡೆಸೆಯುವಾಗ ಆ ಜಾಗದಲ್ಲಿ ಇಂಜುರಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರ ಜೊತೆ ಮೊಣಕಾಲು ಗಾಯ ಇತ್ಯಾದಿ ನಾನಾ ರೀತಿಯ ತೊಂದರೆಗಳು ಕ್ರಿಕೆಟಿಗರನ್ನು ಕಾಡುತ್ತವೆ. ಅದೆಲ್ಲವನ್ನೂ ಮೀರಿ ಕೆಲ ಆಟಗಾರರು ಸುದೀರ್ಘ ಕಾಲ ಆಡಬಲ್ಲರು ಎಂದರೆ ಅಚ್ಚರಿ ಆಗುತ್ತದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications