India VS Pakistan: ಭಾರತಕ್ಕೆ ಭರ್ಜರಿ ಗೆಲುವು, ಪಾಕ್‌ಗೆ ಸೋಲಿನ ಪಾಠ
ಭಾರತ ತಂಡ ಬದ್ಧವೈರಿ ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಪಾಕ್ ವಿರುದ್ಧ ಭಾರತ ತನ್ನ ಗೆಲುವಿನ ಓಟ ಮುಂದುವರಿಸಿದೆ. ಭಾರತ ತಂಡ ನೀಡಿದ್ದ 357 ರನ್ ಗುರಿ ಬೆನ್ನು ಹತ್ತಿದ್ದ ಪಾಕಿಸ್ತಾನ ತಂಡ, ಕೇವಲ 128 ರನ್ ಗಳಿಸುವಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿದೆ. ಈ ಮೂಲಕ ಭಾರತಕ್ಕೆ ಬರೋಬ್ಬರಿ 228 ರನ್‌ಗಳ ಅಂತರದಲ್ಲಿ ಗೆಲುವು ಸಿಕ್ಕರೆ, ಪಾಕಿಸ್ತಾನಕ್ಕೆ ಸೋಲಿನ ಪಾಠ ಕಲಿಸಿದಂತಾಗಿದೆ.
ಶ್ರೀಲಂಕಾ ಮಳೆ ಕಾರಣಕ್ಕೆ ನಲುಗಿ ಹೋಗಿದ್ದು 'ಏಷ್ಯಾಕಪ್-2023'ರ ಬಹುತೇಕ ಮ್ಯಾಚ್ ಇದೇ ಮಳೆಗೆ ಆಹುತಿಯಾಗಿವೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಮೀಸಲಾಗಿ ಒಂದು ದಿನ ಸಿಕ್ಕಿತ್ತು. ನಿನ್ನೆ ಮ್ಯಾಚ್ ನಿಂತರೂ ಇಂದು ಪಂದ್ಯ ಶುರುವಾಗಿತ್ತು. ಹೀಗಾಗಿ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಭಾರತದ ಮೊದಲ ಇನ್ನಿಂಗ್ಸ್‌ಗೆ ಕೊಹ್ಲಿ ಹಾಗೂ ರಾಹುಲ್ ಬಲ ತುಂಬಿದ್ದರು. ಈ ಇಬ್ಬರೂ ಆಟಗಾರರು ಭರ್ಜರಿ ಆಟ ಪ್ರದರ್ಶಿಸಿ ಭಾರತಕ್ಕೆ ಉತ್ತಮ ಸ್ಕೋರ್ ಗುರಿ ಮುಟ್ಟಲು ನೆಲೆಯಾಗಿ ನಿಂತರು. 'ಏಷ್ಯಾಕಪ್-2023'ರ ಸೂಪರ್ 4 ಹಂತದ ಪಂದ್ಯ ಇದಾಗಿತ್ತು.

ಶತಕ ಸಿಡಿಸಿದ್ದ ಕೊಹ್ಲಿ & ರಾಹುಲ್!
ಭಾರತದ ಪರ ವಿರಾಟ್ ಕೊಹ್ಲಿ 94 ಎಸೆತದಲ್ಲಿ 122 ರನ್ ಗಳಿಸಿದ್ದರು. ಮತ್ತೊಂದು ಕಡೆ ಕೆ.ಎಲ್. ರಾಹುಲ್ ಕೇವಲ 106 ಎಸೆತದಲ್ಲಿ 111 ರನ್ ಗಳಿಸಿ ಔಟ್ ಆಗದೆ ಅಜೇಯರಾಗಿ ಉಳಿದರು. ವಿರಾಟ್ ಕೊಹ್ಲಿ 9 ಬೌಂಡರಿ & 3 ಸಿಕ್ಸ್ ಹೊಡೆದ್ರು. ಕೆ.ಎಲ್. ರಾಹುಲ್ 12 ಬೌಂಡರಿ ಸೇರಿದಂತೆ ಒಟ್ಟಾರೆ 2 ಸಿಕ್ಸ್ ಬಾರಿಸುವ ಮೂಲಕ, ಪಾಕಿಸ್ತಾನದ ಬೌಲರ್‌ಗಳಿಗೆ ಚಳಿ ಬಿಡಿಸಿದ್ರು. ಪಂದ್ಯ ಮುಗಿದಾಗ ಭಾರತದ ಸ್ಕೋರ್ 50 ಓವರ್‌ಗೆ 356 ರನ್ ಆಗಿತ್ತು. ಹಾಗೇ ಭಾರತ ಕೇವಲ 2 ವಿಕೆಟ್ ಕಳೆದುಕೊಂಡು ಈ ಗುರಿ ತಲುಪಿತ್ತು. ಇನ್ನು 357 ರನ್ ಗುರಿ ಬೆನ್ನು ಹತ್ತಿದ್ದ ಪಾಕಿಸ್ತಾನ ಈಗ ಕೇವಲ 128 ರನ್‌ಗೆ ಆಲೌಟ್ ಆಗಿ ಗೂಡು ಸೇರಿದೆ.
ಪಟಪಟನೆ ಬಿದ್ದ ಪಾಕಿಸ್ತಾನ ವಿಕೆಟ್
ಇನ್ನು ತನ್ನ ಇನ್ನಿಂಗ್ಸ್ ಆರಂಭಿಸಿದ್ದ ಪಾಕಿಸ್ತಾನ ತಂಡಕ್ಕೆ, ಆರಂಭದಲ್ಲೇ ಭಾರತ ತಂಡದ ಬೌಲಿಂಗ್ ಪಡೆ ಕಾಡಲು ಆರಂಭಿಸಿತ್ತು. ಬುಮ್ರಾ ಬೌಲಿಂಗ್ನಲ್ಲಿ ಇಮಾಮ್ ಉಲ್ ಹಕ್ ಔಟ್ ಆಗುವ ಮೂಲಕ 17 ರನ್‌ಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತ್ತು ಪಾಕಿಸ್ತಾನ. ಆಗ ಪಾಕಿಸ್ತಾನ ತಂಡ ಬೆಚ್ಚಿಬಿದ್ದಾಗಲೇ ಸ್ವಲ್ಪ ಹೊತ್ತಿಗೆ ಮತ್ತೊಂದು ವಿಕೆಟ್ ಬಿತ್ತು. ಹೀಗೆ 2 ವಿಕೆಟ್ ಕಳೆದುಕೊಂಡು ಪಾಕಿಸ್ತಾನ ಪರಿತಪಿಸುವ ವೇಳೆಗೆ ಮಳೆ ಶುರುವಾಗಿತ್ತು. ಆಗ ಆಟ ನಡೆಯುವುದೇ ಅನುಮಾನ ಎಂಬಂತಾಗಿತ್ತು.

ಮಳೆ ನಿಂತ ನಂತರ ಆಲೌಟ್!
ಇನ್ನು ಮಳೆ ನಿಂತು ಪಂದ್ಯ ಮತ್ತೆ ಆರಂಭವಾದ ಸಂದರ್ಭದಲ್ಲಿ ಪಾಕಿಸ್ತಾನ ಮತ್ತೊಂದು ಹುಮ್ಮಸ್ಸಿನಲ್ಲಿ ಅಖಾಡಕ್ಕೆ ಬಂತು. ಆದ್ರೆ ಪಾಕಿಸ್ತಾನದ ಆಟಗಾರರಿಗೆ ಭಾರತದ ಸ್ಪಿನ್ ಪಡೆ ಆಘಾತ ನೀಡಿತ್ತು. ಆರಂಭದಲ್ಲಿ ವೇಗದ ಬೌಲರ್‌ಗಳ ಅಬ್ಬರಕ್ಕೆ ಪಾಕಿಸ್ತಾನ ತಂಡ ತತ್ತರಿಸಿ ಹೋಗಿತ್ತು. ನಂತರ ಭಾರತದ ಸ್ಪಿನ್ ಬೌಲಿಂಗ್ ಎದುರಿಸಲು ಪಾಕಿಸ್ತಾನ ಬ್ಯಾಟ್ಸ್‌ಮನ್‌ಗಳು ಪರದಾಡಿದರು. ಹೀಗೆ ನೋಡ ನೋಡುತ್ತಲೇ ಕುಲ್‌ದೀಪ್ ಯಾದವ್ ಬರೋಬ್ಬರಿ ಐದು ವಿಕೆಟ್ ಪಡೆದು ಮಿಂಚಿದರು. 32 ಓವರ್ ಆಟವಾಡಿದ ಪಾಕಿಸ್ತಾನ ತಂಡ, 128 ರನ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲು ಕಂಡಿತು.
ಈ ಮೂಲಕ ಭಾರತ 228 ರನ್‌ಗಳಿಂದ ಭರ್ಜರಿ ಗೆಲುವು ಕಂಡಿದೆ. ಇದಕ್ಕೂ ಮೊದಲು ಲೀಗ್ ಹಂತದಲ್ಲಿ ನಡೆದಿದ್ದ ಪಂದ್ಯ ಮಳೆಗೆ ಬಲಿಯಾಗಿತ್ತು. ಹೀಗಾಗಿ 'ಏಷ್ಯಾಕಪ್-2023' ಮತ್ತೊಮ್ಮೆ ಭಾರತ & ಪಾಕಿಸ್ತಾನ ಪಂದ್ಯಕ್ಕೆ ಸಾಕ್ಷಿಯಾಗಿತ್ತು. ಆದರೆ ಮತ್ತೆ ಅದೇ ವರುಣ ವಿಲನ್ ರೀತಿ ಎಂಟ್ರಿ ಕೊಟ್ಟ. ಈ ಹಿನ್ನೆಲೆಯಲ್ಲಿ ಮೀಸಲು ಇರಿಸಿದ್ದ ಈ ದಿನಕ್ಕೆ ಪಂದ್ಯ ಮುಂದೂಡಿಕೆ ಆಗಿತ್ತು. ನಿನ್ನೆ ಪಂದ್ಯ ಎಲ್ಲಿ ನಿಂತಿತ್ತೋ ಅಲ್ಲಿಂದಲೇ ಇಂದು ಶುರುವಾಗಿ ಭಾರತಕ್ಕೆ ಬರೋಬ್ಬರಿ 228 ರನ್‌ಗಳ ಗೆಲುವು ಸಿಕ್ಕಿದೆ. ಸೂಪರ್ 4 ಹಂತದ ಮ್ಯಾಚ್‌ನಲ್ಲಿ ಭಾರತ ವಿಜಯ ಪತಾಕೆ ಹಾರಿಸಿದೆ.












Click it and Unblock the Notifications