ಶುಭಮನ್ ಗಿಲ್, ವಾಶಿಂಗ್ಟನ್ "ಸುಂದರ" ಆಟ: ಭಾರತಕ್ಕೆ ಸರಣಿಯಲ್ಲಿ ಮುನ್ನಡೆ
ಹರಾರೆ: ನಾಯಕ ಶುಭಮನ್ ಗಿಲ್ (66 ರನ್) ಹಾಗೂ ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್ (15 ರನ್ 3 ವಿಕೆಟ್) ಇವರುಗಳ ಸೊಗಸಾದ ಆಟದ ನೆರವಿನಿಂದ ಟೀಮ್ ಇಂಡಿಯಾ ಇಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ತಂಡವನ್ನು 23 ರನ್‌ಗಳಿಂದ ಮಣಿಸಿ, 5 ಟಿ20 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಿತು. ನಿಗದಿತ 20 ಓವರ್‌ಗಳಲ್ಲಿ ಗಿಲ್ ಪಡೆ 4 ವಿಕೆಟ್‌ಗೆ 182 ರನ್ ಸೇರಿಸಿತು. ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಜಿಂಬಾಬ್ವೆ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 159 ರನ್ ಕಲೆ ಹಾಕಿ ಸೋಲು ಕಂಡಿತು.

ಭರ್ಜರಿ ಜೊತೆಯಾಟ
ಟೀಮ್ ಇಂಡಿಯಾ ಪರ ಇನ್ನಿಂಗ್ಸ್ ಆರಂಭಿಸಿದ ಶುಭಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ ತಂಡಕ್ಕೆ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 50 ಎಸೆತಗಳಲ್ಲಿ 67 ರನ್ ಕಲೆ ಹಾಕಿ ತಂಡಕ್ಕೆ ಆಧಾರವಾಯಿತು. ಯಶಸ್ವಿ ಜೈಸ್ವಾಲ್ ಉತ್ತಮ ಲಯದಲ್ಲಿ ಬ್ಯಾಟಿಂಗ್ ಮಾಡಿದರೂ ಸಹ 36 ರನ್‌ಗಳಿಗೆ ಔಟ್ ಆದರು. ಇವರ ಅಮೋಘ ಇನಿಂಗ್ಸ್‌ನಲ್ಲಿ 4 ಬೌಂಡರಿ, 2 ಸಿಕ್ಸರ್ ಸೇರಿವೆ.
ಎರಡನೇ ಪಂದ್ಯದಲ್ಲಿ ಶತಕ ಬಾರಿಸಿದ್ದ ಅಭಿಷೇಕ್ ಶರ್ಮಾ ಮೂರನೇ ಪಂದ್ಯದಲ್ಲಿ 10 ರನ್‌ಗಳಿಗೆ ಆಟ ಮುಗಿಸಿದರು. ನಾಲ್ಕನೇ ವಿಕೆಟ್‌ಗೆ ಅನುಭವಿ ಆಟಗಾರರಾದ ರುತುರಾಜ್ ಗಾಯಕ್ವಾಡ್ ಹಾಗೂ ನಾಯಕ ಶುಭಮನ್ ಗಿಲ್ ತಂಡಕ್ಕೆ ಆಧಾರವಾದರು.

ನಾಯಕನ ಆಟ
ಗಿಲ್ ಹಾಗೂ ಗಾಯಕ್ವಾಡ್ ವಿಕೆಟ್‌ಗಳನ್ನು ನೀಡದಂತೆ ರನ್ ವೇಗಕ್ಕೆ ಚುರುಕು ಮುಟ್ಟಿಸುವಲ್ಲಿ ಸಫಲರಾದರು. ಈ ಜೋಡಿಯನ್ನು ಕಟ್ಟಿ ಹಾಕಲು ಜಿಂಬಾಬ್ವೆ ಮಾಡಿಕೊಂಡ ಪ್ಲ್ಯಾನ್ ಎಲ್ಲ ಕೈ ಕೊಟ್ಟಿತ್ತು. ಈ ಜೋಡಿ 44 ಎಸೆತಗಳಲ್ಲಿ 72 ರನ್ ಸೇರಿಸಿ ತಂಡಕ್ಕೆ ಆಧಾರವಾಯಿತು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಗಿಲ್ ಔಟ್ ಆದರು.
ನಾಯಕ ಗಿಲ್ 49 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಾಯದಿಂದ 66 ರನ್ ಬಾರಿಸಿ ಮಿಂಚಿದರು. ಅನುಭವಿ ರುತುರಾಜ್ ಗಾಯಕ್ವಾಡ್ 4 ಬೌಂಡರಿ, 3 ಸಿಕ್ಸರ್ ಸೇರಿದಂತೆ 49 ರನ್ ಬಾರಿಸಿ ಔಟ್ ಆದರು. ಜಿಂಬಾಬ್ವೆ ತಂಡದ ಪರ ಮುಜರಬಾನಿ ಬ್ಲೆಸ್ಸಿಂಗ್ ಹಾಗೂ ಸಿಕಿಂದರ್ ರಾಜ್ ತಲಾ ಎರಡು ವಿಕೆಟ್ ಕಬಳಿಸಿದರು.
ಕಳಪೆ ಆರಂಭ
ಜಿಂಬಾಬ್ವೆ ಆರಂಭದಲ್ಲಿ ಪಟಪಟನೇ ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡದ ಮೊತ್ತ 39 ಆಗುವಷ್ಟರಲ್ಲಿ ಅದಾಗಲೇ ಜಿಂಬಾಬ್ವೆಯ ಅರ್ಧ ತಂಡ ಪೆವಿಲಿಯನ್ ಸೇರಿ ಆಗಿತ್ತು. ಜಿಂಬಾಬ್ವೆ ಪರ ಡಿಯೋನ್ ಮೈಯರ್ಸ್ ಹಾಗೂ ಕ್ಲೈವ್ ಮದಂಡೆ ಜೋಡಿ ಟೀಮ್ ಇಂಡಿಯಾ ಬೌಲರ್‌ಗಳನ್ನು ಕೊಂಚ ಕಾಡಿತು. ಈ ಜೋಡಿ 57 ಎಸೆತಗಳಲ್ಲಿ 77 ರನ್ ಸೇರಿಸಿತು. ಕ್ಲೈವ್ ಮದಂಡೆ 37 ರನ್ ಸಿಡಿಸಿ ಔಟ್ ಆದರು.
ಒಂದು ಬದಿಯಲ್ಲಿ ವಿಕೆಟ್‌ಗಳು ಬೀಳುತ್ತಾ ಇದ್ದರೂ, ಡಿಯೋನ್ ಮೈಯರ್ಸ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 49 ಎಸೆತಗಳಲ್ಲಿ 65 ರನ್ ಸಿಡಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.
ಭಾರತದ ಪರ ವಾಶಿಂಗ್ಟನ್ ಸುಂದರ್ 3, ಆವೀಶ್ ಖಾನ್ 2 ವಿಕೆಟ್ ಕಬಳಿಸಿದರು.












Click it and Unblock the Notifications