Rohit Sharma: ಲಂಕಾ ವಿರುದ್ಧ ರೋಹಿತ್ ಅಬ್ಬರ: ಏಕದಿನ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ 'ಹಿಟ್‌ಮ್ಯಾನ್'
ಭಾನುವಾರ, ಸೋಮವಾರ ಪಾಕಿಸ್ತಾನದ ವಿರುದ್ಧ ಪಂದ್ಯವನ್ನಾಡಿದ್ದ ಭಾರತ ತಂಡ ಮಂಗಳವಾರ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯವನ್ನಾಡುತ್ತಿದ್ದು, ಬ್ಯಾಟಿಂಗ್ ಅಬ್ಬರ ಮುಂದುವರೆದಿದೆ. ನಾಯಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ದಾಖಲೆ ಬರೆದಿದ್ದಾರೆ.
ಮಂಗಳವಾರ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಭಾರತದ ಆರಂಭಿಕರಾದ ಶುಭಮನ್ ಗಿಲ್ ಮತ್ತು ನಾಯಕ ರೋಹಿತ್ ಶರ್ಮಾ ಅತ್ಯುತ್ತಮ ಫಾರ್ಮ್ ಮುಂದುವರೆಸಿದ್ದಾರೆ.

ರೋಹಿತ್ ಶರ್ಮಾ 23 ರನ್ ಗಳಿಸಿದ್ದ ಸಂದರ್ಭದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 10000 ರನ್ ಗಳಿಸಿದ ಸಾಧನೆ ಮಾಡಿದರು. ಈ ಸಾಧನೆ ಮಾಡಿದ 6ನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಬಳಿಕ ಕಡಿಮೆ ಇನ್ನಿಂಗ್ಸ್‌ನಲ್ಲಿ 10 ಸಾವಿರ ರನ್ ಗಳಿಸಿದ ಆಟಗಾರ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. 241 ಇನ್ನಿಂಗ್ಸ್‌ಗಳಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.
ಭಾರತದ ಪರವಾಗಿ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಎಂಎಸ್ ಧೋನಿ ನಂತರ 10 ಸಾವಿರ ರನ್ ಗಳಿಸಿದ ಖ್ಯಾತಿ ರೋಹಿತ್ ಶರ್ಮಾ ಅವರದ್ದಾಗಿದೆ.
ಮೂರು ದ್ವಿಶತಕ ಗಳಿಸಿರುವ ಏಕೈಕ ಬ್ಯಾಟರ್
ರೋಹಿತ್ ಶರ್ಮಾ ಅವರು ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ ಗಳಿಸಿರುವ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದೇ ಶ್ರೀಲಂಕಾ ವಿರುದ್ಧ ಅವರು ಒಂದೇ ಇನ್ನಿಂಗ್ಸ್‌ನಲ್ಲಿ 264 ರನ್ ಗಳಿಸಿದ್ದು ಈವರೆಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿದ ಅತ್ಯಧಿಕ ವೈಯಕ್ತಿಕ ರನ್ ಆಗಿದೆ. ಇದುವರೆಗೂ 241 ಇನ್ನಿಂಗ್ಸ್‌ಗಳಿಂದ 49.14 ಸರಾಸರಿಯಲ್ಲಿ 10025 ರನ್ ಗಳಿಸಿದ್ದು, ಇದರಲ್ಲಿ 30 ಶತಕ, ಮೂರು ದ್ವಿಶತಕ ಮತ್ತು 51 ಅರ್ಧಶತಕಗಳು ಸೇರಿವೆ.
10 ಸಾವಿರ ರನ್ ಪೂರೈಸಿರುವ ರೋಹಿತ್ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸುವ ಸನಿಹದಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕ್ರಿಸ್ ಗೇಲ್ ಇದುವರೆಗೂ 553 ಸಿಕ್ಸರ್ ಸಿಡಿಸಿದ್ದು, ರೋಹಿತ್ ಶರ್ಮಾ 543 ಸಿಕ್ಸರ್ ಸಿಡಿಸಿದ್ದಾರೆ, ಇನ್ನು 11 ಸಿಕ್ಸರ್ ಸಿಡಿಸಿದರೆ ಗೇಲ್ ಅವರ ದಾಖಲೆ ಮುರಿದು ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.












Click it and Unblock the Notifications