India vs Pakistan: ಪ್ರೇಮದಾಸ ಅಂಗಳದಲ್ಲಿ ಕೊಹ್ಲಿಗೆ ಸತತ ನಾಲ್ಕನೇ ಶತಕ: ಕೊಹ್ಲಿ- ರಾಹುಲ್ ಅಬ್ಬರಕ್ಕೆ ಹಲವು ದಾಖಲೆ ಸೃಷ್ಟಿ
ಕೊಲಂಬೋದ ಪ್ರೇಮದಾಸ ಅಂಗಳದಲ್ಲಿ ಭಾರತದ ಬ್ಯಾಟರ್ ಗಳು ಅಕ್ಷರಶಃ ಅಬ್ಬರಿಸಿದರು. ಅದೂ ಕೂಡ ವಿಶ್ವದ ಶ್ರೇಷ್ಠ ವೇಗದ ಬೌಲರ್ ಗಳಿರುವ ಪಾಕಿಸ್ತಾನ ತಂಡದ ವಿರುದ್ಧ ಹೇಗೆ ಬ್ಯಾಟಿಂಗ್ ಮಾಡಬೇಕು ಎನ್ನುವುದನ್ನು ಭಾರತದ ನಾಲ್ವರು ಬ್ಯಾಟರ್ ಗಳು ತೋರಿಸಿಕೊಟ್ಟರು. ಮಳೆ ಬಿಡುವು ಕೊಟ್ಟ ಬಳಿಕ ಕೊಹ್ಲಿ - ರಾಹುಲ್ ರನ್‌ಗಳ ಮಳೆ ಸುರಿಸಿದರು.
ಪಾಕಿಸ್ತಾನದ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಭಾರತ 50 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 356 ರನ್ ಗಳಿಸಿದೆ. ವಿರಾಟ್ ಕೊಹ್ಲಿ ಅಜೇಯ 122 ರನ್ ಗಳಿಸಿದರೆ, ಕೆಎಲ್ ರಾಹುಲ್ ಅಜೇಯ 111 ರನ್ ಗಳಿಸುವ ಮೂಲಕ ಬೃಹತ್ ಮೊತ್ತ ಕಲೆಹಾಕಲು ಕಾರಣವಾದರು.
ಇಂದಿನ ಪಂದ್ಯದಲ್ಲಿ ಭಾರತ ತಂಡ ಹಲವು ದಾಖಲೆಗಳನ್ನು ನಿರ್ಮಿಸಿತು. ಮುಖ್ಯವಾಗಿ ವಿರಾಟ್ ಕೊಹ್ಲಿ - ಕೆಎಲ್ ರಾಹುಲ್ ಜೊತೆಯಾಟ ಕೂಡ ದಾಖಲೆ ಬರೆಯಿತು. ಇಂದು ದಾಖಲಾದ ಪ್ರಮುಖ ದಾಖಲೆಗಳ ವಿವರ ಇಲ್ಲಿದೆ.

ಏಷ್ಯಾಕಪ್‌ನಲ್ಲಿ ಅತ್ಯಧಿಕ ಜೊತೆಯಾಟ
ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ 3ನೇ ವಿಕೆಟ್‌ಗೆ 233 ರನ್ ಕಲೆಹಾಕಿದ್ದು, ಏಷ್ಯಾಕಪ್‌ನಲ್ಲಿ ಈ ವರೆಗೆ ದಾಖಲಾದ ಉತ್ತಮ ಜೊತೆಯಾಟ ಎನಿಸಿಕೊಂಡಿದೆ. 2012ರಲ್ಲಿ ಪಾಕಿಸ್ತಾನದ ಮೊಹಮ್ಮದ್ ಹಫೀಜ್ ಮತ್ತು ಜಮಶೆದ್ ಭಾರತದ ವಿರುದ್ಧ 224 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು 11 ವರ್ಷಗಳ ಹಳೆಯ ದಾಖಲೆಯನ್ನು ಈ ಜೋಡಿ ಮುರಿಯಿತು.
3ನೇ ಕ್ರಮಾಂಕದ ಬ್ಯಾಟರ್ ಮತ್ತು ನಾಲ್ಕನೇ ಕ್ರಮಾಂಕದ ಬ್ಯಾಟರ್ ಒಂದೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ ದಾಖಲೆ ಬರೆದರು. 2009ರಲ್ಲಿ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ದ ಶತಕ ಸಿಡಿಸಿ ಈ ಸಾಧನೆ ಮಾಡಿದ್ದರು. 14 ವರ್ಷಗಳ ಬಳಿಕ ಮತ್ತೆ ಮೂರು ಮತ್ತು ನಾಲ್ಕನೇ ಕ್ರಮಾಂಕದ ಬ್ಯಾಟರ್ ಒಟ್ಟಿಗೆ ಶತಕ ಸಿಡಿಸಿದರು.
ಕೊಹ್ಲಿ ಮಾಡಿದ ದಾಖಲೆಗಳಿವು
ಇಂದಿನ ಪಂದ್ಯದಲ್ಲಿ ಕೊಹ್ಲಿ ತಮ್ಮ 47ನೇ ಶತಕ ಗಳಿಸಿದರು, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 13 ಸಾವಿರ ರನ್ ಪೂರೈಸಿದ ಬ್ಯಾಟರ್ ಎನಿಸಿಕೊಂಡರು. 13 ಸಾವಿರ ರನ್ ಗಳಿಸಿದ ವಿಶ್ವದ 5ನೇ ಬ್ಯಾಟರ್ ಎನಿಸಿಕೊಂಡರು. 267 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ 13 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು.
ಏಷ್ಯಾಕಪ್‌ನಲ್ಲಿ ವಿರಾಟ್ ಕೊಹ್ಲಿ 4 ಶತಕ ಸಿಡಿಸಿದ್ದಾರೆ. ಈ ಮೂಲಕ ಕುಮಾರ್ ಸಂಗಾಕ್ಕರ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಸನತ್ ಜಯಸೂರ್ಯ ಅವರು 6 ಶತಕ ಗಳಿಸಿದ್ದು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಪ್ರೇಮದಾಸ ಕ್ರೀಡಾಂಗಣದಲ್ಲಿ ಕೊಹ್ಲಿ ಆಡಿರುವ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೂಡ ಶತಕ ಸಿಡಿಸಿದ್ದಾರೆ. ಇಲ್ಲಿ ಆಡಿರುವ ಕೊನೆಯ ನಾಲ್ಕು ಏಕದಿನ ಪಂದ್ಯಗಳಲ್ಲಿ ಅವರು ಕ್ರಮವಾಗಿ 128, 131, 110, 122 ರನ್ ಗಳಿಸಿದ್ದಾರೆ.
ಪಾಕಿಸ್ತಾನ ವಿರುದ್ಧ ಭಾರತ ತಂಡದ 356 ರನ್ ಗಳಿಸಿದ್ದು ಇದು ಎರಡನೇ ಬಾರಿ ಅತ್ಯಧಿಕ ರನ್ ಗಳಿಸಿದ ಸಾಧನೆ ಮಾಡಿದೆ. ಈ ಮೊದಲು 2005ರಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 9 ವಿಕೆಟ್ ಕಳೆದುಕೊಂಡು 356 ರನ್ ಗಳಿಸಿದ್ದು ಸಾಧನೆಯಾಗಿತ್ತು.
ವೀಕ್ಷಣೆಯಲ್ಲೂ ವಿಶ್ವದಾಖಲೆ
ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಶತಕ ಗಳಿಸಿದ ಸಂದರ್ಭದಲ್ಲಿ ಹಾಟ್‌ಸ್ಟಾರ್ ನಲ್ಲಿ ವೀಕ್ಷಕರ ಸಂಖ್ಯೆ 2.8 ಕೋಟಿಗೆ ತಲುಪಿತ್ತು. ಇದು ಡಿಸ್ನಿ ಹಾಟ್‌ಸ್ಟಾರ್ ನಲ್ಲಿ ಈವರೆಗೆ ದಾಖಲಾದ ಅತಿ ಹೆಚ್ಚು ವೀಕ್ಷಣೆಯಾಗಿದೆ.












Click it and Unblock the Notifications