IND vs PAK : ಅಕ್ಟೋಬರ್ 15ರಂದು ನಡೆಯಲ್ಲ ಭಾರತ-ಪಾಕಿಸ್ತಾನ ಏಕದಿನ ವಿಶ್ವಕಪ್ ಪಂದ್ಯ: ಕಾರಣ ಇಲ್ಲಿದೆ
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 15 ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಐಸಿಸಿ ಏಕದಿನ ವಿಶ್ವಕಪ್ 2023 ಪಂದ್ಯವನ್ನು ಬಹುತೇಕ ಮುಂದೂಡುವ ಸಾಧ್ಯತೆ ಇದೆ.
ಭದ್ರತಾ ಏಜೆನ್ಸಿಗಳು, ವೇಳಾಪಟ್ಟಿಯನ್ನು ಮಾರ್ಪಡಿಸುವಂತೆ ಬಿಸಿಸಿಐಗೆ ಕೇಳಿಕೊಂಡಿವೆ ಎಂದು ವರದಿಯಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನವರಾತ್ರಿಯ ಮೊದಲ ದಿನದಂದು ಪಂದ್ಯವನ್ನು ನಿಗದಿಪಡಿಸಿರುವ ಕಾರಣ ಈ ಮನವಿ ಮಾಡಲಾಗಿದೆ. ಗುಜರಾತ್‌ನಾದ್ಯಂತ ಗಾರ್ಬಾ ಸಂಜೆಗಳಲ್ಲಿ ಸಾಕಷ್ಟು ಜನ ಭಾಗವಹಿಸುವುದರಿಂದ ಅಂದು ರಜಾದಿನ ಇರಲಿದೆ.

ಈಗಾಗಲೇ ಅಭಿಮಾನಿಗಳು ಈ ಪಂದ್ಯವನ್ನು ವೀಕ್ಷಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 15ರಂದು ಅಹಮದಾಬಾದ್‌ನ ಎಲ್ಲಾ ಐಷಾರಾಮಿ ಹೋಟೆಲ್‌ಗಳು ಬುಕ್ ಆಗಿವೆ. ಲಕ್ಷ ಲಕ್ಷ ಹಣ ಕೊಟ್ಟು ಹೋಟೆಲ್ ರೂಂ ಬುಕ್ ಆಗಿವೆ. ಟಿಕೆಟ್ ಇನ್ನೂ ಮಾರಾಟ ಆಗಿಲ್ಲವಾದರೂ ಈ ಮಟ್ಟದ ಕ್ರೇಜ್ ಈ ಪಂದ್ಯಕ್ಕಿದೆ. ಆದರೆ ಈಗ ದಿನಾಂಕ ಬದಲಾವಣೆ ಮಾಡಿದರೆ, ಅಭಿಮಾನಿಗಳಿಗೆ ನಿರಾಸೆಯಾಗಲಿದೆ.
ನವರಾತ್ರಿಯಿಂದ ಭದ್ರತೆ ಸಮಸ್ಯೆ
"ಈಗಾಗಲೇ ಬದಲೀ ಆಯ್ಕೆಗಳನ್ನು ಪರಿಗಣಿಸಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಮಾಡಲಾಗುವುದು ಎಂದು" ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ನವರಾತ್ರಿ ಕಾರಣ ಭದ್ರತಾ ದೃಷ್ಟಿಯಿಂದ ಭಾರತ ಮತ್ತು ಪಾಕಿಸ್ತಾನದಂತಹ ಉನ್ನತ ಮಟ್ಟದ ಪಂದ್ಯವನ್ನು ನಡೆಸದಂತೆ ಭದ್ರತಾ ಏಜೆನ್ಸಿಗಳು ಸಲಹೆ ನೀಡಿವೆ.
ಭಾರತ-ಪಾಕಿಸ್ತಾನ ಆಟಕ್ಕೆ ಹೊಸ ದಿನಾಂಕ ಘೋಷಣೆಯಾದರೆ, ಬುಕ್ ಆಗಿರುವ ಹೋಟೆಲ್‌ಗಳ ಕ್ಯಾನ್ಸಲ್ ಆಗಲಿದ್ದು, ಹೊಸ ದಿನಾಂಕದಲ್ಲಿ ಹೋಟೆಲ್ ಬುಕಿಂಗ್ ಮಾಡಲು ಮುಗಿ ಬೀಳುವ ಸಾಧ್ಯತೆ ಇದೆ.
ಮಂಗಳವಾರ ಸಂಜೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಜುಲೈ 27 ರಂದು ನವದೆಹಲಿಯಲ್ಲಿ ನಡೆಯಲಿರುವ ಸಭೆಗೆ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುವ ಸಂಸ್ಥೆಗಳಿಗೆ ಆಹ್ವಾನ ಪತ್ರವನ್ನು ಕಳುಹಿಸಿದ್ದಾರೆ. ಮಂಡಳಿಯು ಪಂದ್ಯದ ಪರಿಷ್ಕೃತ ದಿನಾಂಕ ಮತ್ತು ಅಹಮದಾಬಾದ್ ಪ್ರದೇಶದಲ್ಲಿನ ಭದ್ರತಾ ಸಮಸ್ಯೆಗಳನ್ನು ಸದಸ್ಯರಿಗೆ ತಿಳಿಸಬಹುದು ಎಂದು ಕೇಳಲಾಗಿದೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 4 ಪಂದ್ಯಗಳು
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಏಕದಿನ ವಿಶ್ವಕಪ್‌ನ ನಾಲ್ಕು ಪಂದ್ಯಗಳು ನಡೆಯಲಿದೆ. ಪಂದ್ಯಾವಳಿಯ ಆರಂಭಿಕ ಪಂದ್ಯ ಕೂಡ ಇಲ್ಲಿ ನಡೆಯಲಿದ್ದು, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ವಿರುದ್ಧ ಪಾಕಿಸ್ತಾನ, ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಪಂದ್ಯಗಳು ನಡೆಯಲಿದ್ದು ಫೈನಲ್ ಪಂದ್ಯ ಕೂಡ ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ. 1.30 ಲಕ್ಷ ಆಸನ ಸಾಮರ್ಥ್ಯ ಹೊಂದಿದ್ದು, ದಾಖಲೆಯ ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸುವ ಸಾಧ್ಯತೆ ಇದೆ.
ಏಕದಿನ ವಿಶ್ವಕಪ್ ಪಂದ್ಯಾವಳಿ ಭಾರತದ ಹತ್ತು ನಗರಗಳಲ್ಲಿ ನಡೆಯಲಿದ್ದು, ಮುಂಬೈ ಮತ್ತು ಕೋಲ್ಕತ್ತಾ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.












Click it and Unblock the Notifications