ಕೊನೆಗೂ ಆರ್‌ಸಿಬಿ ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ ಟೀಮ್ ಇಂಡಿಯಾಗೆ ಆಯ್ಕೆ, ನೆಟ್ಟಿಗರು ಹೇಳೋದೇನು?
Bhuvneshwar Kumar: ಇಷ್ಟು ದಿನ ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರೆಂದರೆ ಮೂಗು ಮುರಿಯುತ್ತಿದ್ದ ಬಿಸಿಸಿಐ ಕೊನೆಗೂ ಇದೀಗ ಆರ್‌ಸಿಬಿಯ ಸ್ಟಾರ್ ಬೌಲರ್ ಭುನನೇಶ್ವರ್ ಕುಮಾರ್ ಅವರನ್ನು ಟೀಮ್ ಇಂಡಿಯಾಗೆ ಆಯ್ಕೆ ಮಾಡಿದೆ. ಮುಂಬರುವ ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಟಿ20 ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಭುವಿ ಕೂಡ ಇರುವುದು ವಿಶೇಷತೆಯಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಿಸಿಸಿಐ ಮುಂಬರುವ ನ್ಯೂಜಿಲೆಂಡ್ ಪ್ರವಾಸಕ್ಕಾಗಿ 15 ಸದಸ್ಯರ ಭಾರತೀಯ ಟಿ20 ತಂಡವನ್ನು ಅಧಿಕೃತವಾಗಿ ಪ್ರಕಟಿಸಿದೆ. ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ನಿರತವಾಗಿರುವ ಟೀಂ ಇಂಡಿಯಾ, ಇದು ಮುಗಿದ ತಕ್ಷಣವೇ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

ಸರಣಿ ಆರಂಭ ಯಾವಾಗಿನಿಂದ?
ಅಕ್ಟೋಬರ್ 22ರಿಂದ ಆರಂಭವಾಗಲಿರುವ ಈ ಸರಣಿಗೆ ಆಯ್ಕೆ ಮಂಡಳಿಯು ಅನುಭವಿ ಮತ್ತು ಯುವ ಆಟಗಾರರನ್ನು ಆಯ್ಕೆ ಮಾಡಿದೆ. ಅಚ್ಚರಿಯ ವಿಷಯವೆಂದರೆ, ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರಿಗೆ ಬರೋಬ್ಬರಿ 4 ವರ್ಷಗಳ ದೀರ್ಘ ವಿರಾಮದ ನಂತರ ಮತ್ತೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ನೀಡಲಾಗಿರುವುದು.
ಅನುಭವಿ, ಯುವ ಆಟಗಾರರನ್ನೊಳಗೊಂಡ ತಂಡ
ತಂಡವನ್ನು ಶ್ರೇಯಸ್ ಅಯ್ಯರ್ ಅವರು ಮುನ್ನಡೆಸಲಿದ್ದು, ತಿಲಕ್ ವರ್ಮಾ ಉಪನಾಯಕ ಆಗಿರಲಿದ್ದಾರೆ. ಯುವ ಆಟಗಾರರಿಗೆ ಹೆಚ್ಚಿನ ಆದ್ಯತೆ ನೀಡಿರುವ ಆಯ್ಕೆಗಾರರು, ಉದಯೋನ್ಮುಖ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಹಾಗೂ ವೇಗಿ ಪ್ರಿನ್ಸ್ ಯಾದವ್ ಅವರಿಗೆ ಅವಕಾಶ ನೀಡಿ ಕಿವೀಸ್ ಪ್ರವಾಸಕ್ಕೆ ಆಯ್ಕೆ ಮಾಡಿದ್ದಾರೆ. ವಿಕೆಟ್ ಕೀಪರ್ ವಿಭಾಗದಲ್ಲಿ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಇಬ್ಬರಿಗೂ ಸ್ಥಾನ ಸಿಕ್ಕಿದೆ. ಆರಂಭಿಕರಾಗಿ ಉತ್ತಮ ರನ್ ವೇಗಕ್ಕಾಗಿ ಅಭಿಷೇಕ್ ಶರ್ಮಾ ಇದ್ದಾರೆ.
ಆಲ್ರೌಂಡರ್ ಹಾಗೂ ಬೌಲಿಂಗ್ ವಿಭಾಗದ ವಿವರ
ತಂಡದ ಆಲ್ರೌಂಡರ್‌ಗಳಾಗಿ ಶಿವಂ ದುಬೆ, ಅಕ್ಷರ್ ಪಟೇಲ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಜವಾಬ್ದಾರಿ ಹೊರಲಿದ್ದಾರೆ. ಸ್ಪಿನ್ ವಿಭಾಗವನ್ನು ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಮತ್ತು ಲೆಗ್-ಸ್ಪಿನ್ನರ್ ರವಿ ಬಿಷ್ಣೋಯ್ ಮುನ್ನಡೆಸಲಿದ್ದಾರೆ. ನ್ಯೂಜಿಲೆಂಡ್‌ನ ಬೌನ್ಸ್ ಮತ್ತು ವೇಗದ ಪಿಚ್‌ಗಳನ್ನು ಗಮನದಲ್ಲಿಟ್ಟುಕೊಂಡು ಬೌಲಿಂಗ್ ಪಡೆಯನ್ನು ಸಜ್ಜುಗೊಳಿಸಲಾಗಿದೆ. ಅನುಭವಿ ಭುವನೇಶ್ವರ್ ಕುಮಾರ್ ಅವರೊಂದಿಗೆ ಅರ್ಷದೀಪ್ ಸಿಂಗ್, ಮಾಯಾಂಕ್ ಯಾದವ್ ಮತ್ತು ಪ್ರಿನ್ಸ್ ಯಾದವ್ ವೇಗದ ಬೌಲಿಂಗ್ ದಾಳಿಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಭಾರತದ ಟಿ20 ತಂಡದಲ್ಲಿ ಯಾರೆಲ್ಲಾ ಇದ್ದಾರೆ?
ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ (ಉಪನಾಯಕ), ಅಕ್ಷರ್ ಪಟೇಲ್, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ನಮನ್ ಧೀರ್, ಪ್ರಿನ್ಸ್ ಯಾದವ್, ಮಾಯಾಂಕ್ ಯಾದವ್, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ.
ಟಿ-20 ಸರಣಿಯ ವೇಳಾಪಟ್ಟಿ ವಿವರ
* ಅಕ್ಟೋಬರ್ 22, 2026: ಮೊದಲ ಟಿ20ಪಂದ್ಯ, ಹ್ಯಾಗ್ಲಿ ಓವಲ್, ಕ್ರೈಸ್ಟ್‌ಚರ್ಚ್
* ಅಕ್ಟೋಬರ್ 24, 2026: 2ನೇ ಟಿ20ಪಂದ್ಯ, ಹ್ಯಾಗ್ಲಿ ಓವಲ್, ಕ್ರೈಸ್ಟ್‌ಚರ್ಚ್
* ಅಕ್ಟೋಬರ್ 27, 2026: 3ನೇ ಟಿ20ಪಂದ್ಯ, ಸ್ಕೈ ಕ್ರೀಡಾಂಗಣ, ವೆಲ್ಲಿಂಗ್ಟನ್
* ಅಕ್ಟೋಬರ್ 30, 2026: 4ನೇ ಟಿ20ಪಂದ್ಯ, ಈಡನ್ ಪಾರ್ಕ್, ಆಕ್ಲೆಂಡ್
* ನವೆಂಬರ್ 1, 2026 : 5ನೇ ಟಿ20ಪಂದ್ಯ, ಸೆಡ್ಡನ್ ಪಾರ್ಕ್, ಹ್ಯಾಮಿಲ್ಟನ್
ಭುವಿ ಆಯ್ಕೆ ಬಗ್ಗೆ ನೆಟ್ಟಿಗರು ಹೇಳೋದೇನು?
ಆರ್‌ಸಿಬಿಯ ಸ್ಟಾರ್ ವೇಗಿ ಭುವನೇಶ್ವರ್ ಕುಮಾರ್ ಸುಮಾರು 4 ವರ್ಷಗಳ ದೀರ್ಘ ವಿರಾಮದ ನಂತರ ಮತ್ತೆ ಟೀಮ್ ಇಂಡಿಯಾಗೆ ಆಯ್ಕೆಯಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. 'ಆರ್‌ಸಿಬಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರನ್ನು ಬಿಸಿಸಿಐ ನಿರ್ಲಕ್ಷಿಸುತ್ತದೆ ಎಂಬ ಮಾತು ಸದಾ ಹರಿದಾಡುತ್ತಿತ್ತು. ಆದರೆ ಭುವಿ ಅವರ ಅದ್ಭುತ ಕಮ್‌ಬ್ಯಾಕ್ ನೋಡಿ ನೆಟ್ಟಿಗರು 'RCB ಜರ್ಸಿಯಲ್ಲಿ ಮಿಂಚಿದ ಮೇಲಾದರೂ ಬಿಸಿಸಿಐಗೆ ಸ್ವಿಂಗ್ ಕಿಂಗ್‌ನ ಸಾಮರ್ಥ್ಯ ನೆನಪಾಯಿತಲ್ಲ,' ಎಂದು ಆಡಳಿತ ಮಂಡಳಿಯ ಕಾಲೆಳೆಯುತ್ತಿದ್ದಾರೆ.
ಭುವನೇಶ್ವರ್ ಕುಮಾರ್ ಅವರ ಹಳೆಯ ಪವರ್‌ಪ್ಲೇ ಸ್ವಿಂಗ್ ಬೌಲಿಂಗ್ ಮತ್ತು ಡೆತ್ ಓವರ್‌ಗಳ ಶಿಸ್ತುಬದ್ಧ ಯಾರ್ಕರ್‌ಗಳನ್ನು ನೆನಪಿಸಿಕೊಂಡಿರುವ ಅಭಿಮಾನಿಗಳು, ನಿಜವಾದ ಸ್ವಿಂಗ್ ಸುಲ್ತಾನ್ ಮತ್ತೆ ಬಂದಿದ್ದಾರೆ. ಹೊಸ ಚೆಂಡಿನಲ್ಲಿ ಇವರಿಂದ ವಿಕೆಟ್ ಪಡೆಯುವ ಕಲೆ ಬೇರೆ ಯಾರಿಗೂ ಇಲ್ಲ,' ಎಂದು ಹೇಳುತ್ತಿದ್ದಾರೆ.
36ನೇ ವಯಸ್ಸಿನಲ್ಲಿ ಯುವ ವೇಗಿಗಳ ಸವಾಲನ್ನು ಮೀರಿ ಮತ್ತೆ ಟೀಮ್ ಇಂಡಿಯಾಗೆ ಆಯ್ಕೆಯಾಗಿರುವುದಕ್ಕೆ ನೆಟ್ಟಿಗರು ಭುವಿ ಅವರ ಶ್ರಮ ಮತ್ತು ಫಿಟ್‌ನೆಸ್‌ಗೆ ಶಹಬ್ಬಾಸ್ ಎಂದಿದ್ದಾರೆ. 'ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಭುವನೇಶ್ವರ್ ಪ್ರೂವ್ ಮಾಡಿದ್ದಾರೆ,' ಎಂದು ಹಲವರು ಪೋಸ್ಟ್ ಮಾಡಿದ್ದಾರೆ. ಹೀಗೆ ಭುವನೇಶ್ವರ್ ಕುಮಾರ್ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, ಮತ್ತೊಂದೆಡೆ ಆಯ್ಕೆದಾರರ ಕಾಲೆಳೆದಿದ್ದಾರೆ.


Click it and Unblock the Notifications
