ಐಸಿಸಿ ವಿಶ್ವಕಪ್: ಸೋಲಿನ ಪಾಠದ ಜೊತೆಗೆ ಗೆಲುವಿನ ನಗೆ ಬೀರಿದ ಭಾರತ!
2023ರ ಐಸಿಸಿ ಏಕದಿನ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಗೆದ್ದು ಬೀಗಿದೆ. ನ್ಯೂಜಿಲೆಂಡ್ ತಂಡದ ವಿರುದ್ಧ ಭಾರತಕ್ಕೆ ಗೆಲುವು ಸಿಕ್ಕಿದೆ. ಆದ್ರೆ ಭಾರತ ತಂಡ ಕಿವೀಸ್ ವಿರುದ್ಧ ಈ ಸೆಮಿಫೈನಲ್ ಪಂದ್ಯದಲ್ಲಿ ಗೆಲ್ಲುವ ಜೊತೆಗೆ, ಸೋಲಿನ ಪಾಠ ಕೂಡ ಕಲಿತಿದೆ. ಎಲ್ಲಾ ಪಂದ್ಯ ಗೆದ್ದು ಆತ್ಮವಿಶ್ವಾಸದಲ್ಲಿದ್ದ ಭಾರತ ತಂಡದ ಆಟಗಾರರಿಗೆ ಇಂದು, 'ಅತಿಯಾದ ಆತ್ಮವಿಶ್ವಾಸವು ಒಳ್ಳೆಯದಲ್ಲ' ಎಂಬ ಪಾಠ ಹೇಳಿದೆ ನ್ಯೂಜಿಲೆಂಡ್ ತಂಡ.
ಹೌದು, ಕಿಂಗ್ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಐಯ್ಯರ್ ಅವರ ಶತಕದ ನೆರವಿನಿಂದ ಭಾರತ ತಂಡ ಇಂದು ಒಟ್ಟು 397 ರನ್ ಗಳಿಸಿತ್ತು. ಈ ಮೂಲಕ 2023ರ ಐಸಿಸಿ ಏಕದಿನ ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಫೈನಲ್ ಪ್ರವೇಶ ಮಾಡುವ ನಿರೀಕ್ಷೆಯಲ್ಲಿ ಭಾರತ ತಂಡ ಇತ್ತು. ಆದರೆ ಆಗಿದ್ದೇ ಬೇರೆ ಆರಂಭದಲ್ಲಿ ಅಂದ್ರೆ 30 ರನ್‌ಗೆ ಮೊದಲ ವಿಕೆಟ್ ಮತ್ತು 39 ರನ್‌ಗೆ ತನ್ನ 2ನೇ ವಿಕೆಟ್ ಕಳೆದುಕೊಂಡ ಕಿವೀಸ್ ತಂಡ, ಅಲರ್ಟ್ ಆಗಿ ಆಟವಾಡಿತು. ಹೀಗೆ ನ್ಯೂಜಿಲೆಂಡ್ ತಂಡಕ್ಕೆ ಸಂಕಷ್ಟ ಸಮಯಕ್ಕೆ, ವಿಲಿಯಮ್ಸನ್ ಮತ್ತು ಮಿಚೆಲ್ ಸಾಥ್ ಕೊಟ್ಟರು. ಇಬ್ಬರ ಜೋಡಿ ಬೇರೆಯಾಗಿದ್ದು 220 ರನ್‌ಗೆ. ಅಷ್ಟೊತ್ತಿಗೆ ಭಾರತ ತಂಡದ ಆಟಗಾರರಿಗೂ ಸೋಲಿನ ಭಯ ಆವರಿಸಿತ್ತು.

ಸೋಲದೆಯೇ ಸೋಲಿನ ಪಾಠ ಕಲಿತರು!
ಭಾರತಕ್ಕೆ ಇಂದು ನೆರವಾಗಿದ್ದು ಬೃಹತ್ ಮೊತ್ತದ ರನ್. ಅಕಸ್ಮಾತ್ ಭಾರತ ಟೀಂ ಇಂದು 350 ರನ್ ಒಳಗೆ ನ್ಯೂಜಿಲೆಂಡ್‌ಗೆ ಗುರಿ ನೀಡಿದ್ದರೆ, ಸೋಲು ಖಚಿತ ಎನ್ನಬಹುದಿತ್ತು. ಈ ಮಾತು ಯಾಕೆ ಅಂದ್ರೆ, 398 ರನ್‌ಗಳ ಬೃಹತ್ ಗುರಿ ನೀಡಿದ್ದರೂ ನ್ಯೂಜಿಲೆಂಡ್ ತಂಡವು ಹೆದರಲೇ ಇಲ್ಲ. ಬದಲಾಗಿ ಭಾರತಕ್ಕೆ ಪಂದ್ಯದ ಅಂತ್ಯದ ತನಕವೂ ಕಾಡಿತ್ತು. ಅದರಲ್ಲಿ, ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡೇರಿಲ್ ಮಿಚೆಲ್ ಅವರ ಭರ್ಜರಿ 181 ರನ್‌ಗಳ ಕೊಡುಗೆ ಸೋಲಿನ ವಾತಾವರಣ ಸೃಷ್ಟಿ ಮಾಡಿತ್ತು. ಆದರೆ ಭಾರತ ತಂಡದ ಮಿಂಚಿನ ವೇಗದ ಬೌಲರ್ ಮೊಹಮ್ಮದ್ ಶಮಿ ಈ ಜೋಡಿಯನ್ನ ಬೇರೆ ಮಾಡಿ, ಭಾರತಕ್ಕೆ ಬಲ ತುಂಬಿದರು. ಹೀಗೆ ಮೊದಲು ಕೇನ್ ವಿಲಿಯಮ್ಸನ್ 3 ಬಲಿಯಾದರು. ಆ ನಂತರವೇ ಮತ್ತೆ ಮ್ಯಾಚ್ ಭಾರತದ ಕೈಗೆ ಬಂದಿದ್ದು.
7 ವಿಕೆಟ್ ಪಡೆದು ಶಮಿ ಸಾಧನೆ!
ಇಡೀ ಪಂದ್ಯದಲ್ಲಿ ಭಾರತದ ಪರವಾಗಿ ಮಿಂಚಿದ ಏಕೈಕ ಬೌಲರ್ ಅಂದ್ರೆ ಮೊಹಮ್ಮದ್ ಶಮಿ. ಯಾಕಂದ್ರೆ ಮಿಕ್ಕೆಲ್ಲ ಬೌಲರ್‌ಗಳ ಮೇಲೆ ನ್ಯೂಜಿಲೆಂಡ್ ಬ್ಯಾಟಿಂಗ್ ಪಡೆ ಅಟ್ಯಾಕ್ ಮಾಡುತ್ತಿದ್ದರೆ, ಮೊಹಮ್ಮದ್ ಶಮಿ ಮಾತ್ರ ನ್ಯೂಜಿಲೆಂಡ್ ಬ್ಯಾಟಿಂಗ್ ಪಡೆ ಮೇಲೆ ದಾಳಿ ಮಾಡಿದರು. ಹೀಗೆ ಮೊಹಮ್ಮದ್ ಶಮಿ ಬೌಲಿಂಗ್ ದಾಳಿ ಎದುರು ಬೆಚ್ಚಿಬಿದ್ದ ಕಿವೀಸ್‌ಗೆ, ಇನ್ನೇನು ಪಂದ್ಯದ ಅಂತ್ಯದಲ್ಲಿ ಮ್ಯಾಚ್ ಕೈಬಿಟ್ಟು ಹೋಗುವುದು ಪಕ್ಕಾ ಆಗಿತ್ತು. ಇದೇ ವೇಳೆ ಮೊಹಮ್ಮದ್ ಶಮಿ ಭರ್ಜರಿ 7 ವಿಕೆಟ್ ಪಡೆದರು. ಒಟ್ಟು 9.5 ಓವರ್ ಬೌಲಿಂಗ್ ಮಾಡಿದ್ದ ಮೊಹಮ್ಮದ್ ಶಮಿ 57 ರನ್ ನೀಡಿ 7 ವಿಕೆಟ್ ಪಡೆದು ಭಾರತವನ್ನ ಸೋಲಿನ ದವಡೆಯಿಂದ ಪಾರು ಮಾಡಿದರು.
ಇನ್ನು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ, ಬ್ಯಾಟಿಂಗ್ ಅಖಾಡದಲ್ಲಿ ಭರ್ಜರಿ ಅಬ್ಬರ ತೋರಿಸಿತ್ತು. ಅದ್ರಲ್ಲೂ ವಿರಾಟ್ ಕೊಹ್ಲಿ ಕೊನೆಗೂ ತಮ್ಮ ಗುರಿಯನ್ನ ತಲುಪಿದ್ರು. 2023 ಐಸಿಸಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ಸ್ ಪಂದ್ಯಲ್ಲಿ, ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಶತಕ ಸಿಡಿಸುವ ಮೂಲಕ ಈ ಶತಮಾನದಲ್ಲಿ ಶತಕಗಳ ಸಾಧನೆ ಮಾಡಿಬಿಟ್ಟರು. ಹಾಗೇ ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದಿದ್ದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನ ಸರಿಗಟ್ಟಿದ್ದಾರೆ. ಏಕದಿನ ಕ್ರಿಕೆಟ್ ಮಾದರಿಯಲ್ಲಿ 49 ಶತಕ ಸಿಡಿಸಿದ್ದ ಸಚಿನ್ ಸಾಧನೆ ಮೀರಿಸಿ, 50ನೇ ಸೆಂಚ್ಯುರಿ ಬಾರಿಸಿದ್ದಾರೆ ಕೊಹ್ಲಿ. ಈ ಮೂಲಕ ಭಾರತ ತಂಡದ ಗೆಲುವಿನಲ್ಲಿ ಕೊಹ್ಲಿ ಕೊಡುಗೆ ಕೂಡ ಮಹತ್ವದ ಪಾತ್ರ ಪಡೆದಿದೆ.












Click it and Unblock the Notifications