India vs Bangladesh: ಪಂತ್, ಗಿಲ್ ಅಬ್ಬರ; ಗೆಲುವಿನ ಹೊಸ್ತಿಲಲ್ಲಿ ಭಾರತ
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆಲುವಿನ ಹೊಸ್ತಿಲಲ್ಲಿ ನಿಂತಿದೆ. ಮೂರನೇ ದಿನದಾಟ ಮುಕ್ತಾಯದ ಹಂತಕ್ಕೆ 158 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿರುವ ಬಾಂಗ್ಲಾದೇಶ ಗೆಲುವಿಗೆ ಇನ್ನೂ 357 ರನ್‌ಗಳನ್ನು ಗಳಿಸಬೇಕಿದೆ, ಡ್ರಾ ಮಾಡಿಕೊಳ್ಳಲು ಇನ್ನೂ ಎರಡು ದಿನ ಆಲೌಟ್ ಆಗದೆ ಬ್ಯಾಟಿಂಗ್ ಮಾಡಬೇಕಿದೆ. ಆದರೆ ಭಾರತ ಬೌಲಿಂಗ್ ಮುಂದೆ ಇದು ಬಹುತೇಕ ಅಸಾಧ್ಯವಾಗಿದ್ದು, ನಾಲ್ಕನೇ ದಿನವೇ ಪಂದ್ಯವನ್ನು ಮುಗಿಸುವ ವಿಶ್ವಾಸದಲ್ಲಿದೆ ರೋಹಿತ್ ಶರ್ಮಾ ಪಡೆ.
ಭಾರತ ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 81 ರನ್ ಗಳಿಸುವ ಮೂಲಕ 308 ರನ್‌ಗಳ ಮುನ್ನಡೆ ಪಡೆದುಕೊಂಡಿತ್ತು. ಮೂರನೇ ದಿನದಾಟಲ್ಲಿ ಶುಭಮನ್ ಗಿಲ್ ಮತ್ತು ರಿಷಬ್ ಪಂತ್ ಅಬ್ಬರಿಸಿದರು. ಇಬ್ಬರೂ ಕೂಡ ಭರ್ಜರಿ ಶತಕ ಸಿಡಿಸಿದರು. ಗಿಲ್ ಅಜೇಯ 119 ರನ್ ಗಳಿಸಿದರೆ, ರಿಷಬ್ ಪಂತ್ 109 ರನ್ ಗಳಿಸಿ ಔಟಾದರು, ಕೆಎಲ್ ರಾಹುಲ್ ಅಜೇಯ 22 ರನ್ ಗಳಿಸಿದರು. 4 ವಿಕೆಟ್ ಕಳೆದುಕೊಂಡು 287 ರನ್ ಗಳಿಸಿದ್ದಾಗ ಭಾರತ ಡಿಕ್ಲೇರ್ ಮಾಡಿಕೊಂಡಿತು.

515 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿದ್ದು ಸೋಲಿನ ಸುಳಿಗೆ ಸಿಲುಕಿದೆ. ಈಗಾಗಲೇ ಪಿಚ್ ಬೌಲರ್ ಗಳಿಗೆ ಹೆಚ್ಚಿನ ಸಹಕಾರಿಯಾಗಿದ್ದು, ಬ್ಯಾಟಿಂಗ್ ಮಾಡುವುದು ಕಷ್ಟವಾಗಿದೆ. ಭಾರತದ ಬಿಗಿ ಬೌಲಿಂಗ್ ದಾಳಿಗೆ ಸಿಲುಕಿದ್ದ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 149 ರನ್‌ಗಳಿಗೆ ಆಲೌಟ್ ಆಗಿತ್ತು.
ಎರಡನೇ ಇನ್ನಿಂಗ್ಸ್‌ನಲ್ಲಿ ಝಾಕಿರ್ ಹಸನ್ 33 ರನ್ ಗಳಿಸಿ ಔಟಾದರೆ, ಶದ್ಮನ್ ಇಸ್ಲಾಂ 35 ರನ್ ಗಳಿಸಿದರು. ಮೊಮಿನುಲ್ ಹಕ್ 13, ಮುಷ್ಫೀಕರ್ ರಹೀಮ್ 13 ರನ್ ಗಳಿಸಿ ಔಟಾಗಿದ್ದಾರೆ. ನಾಯಕ ನಜ್ಬುಲ್ ಹೊಸೈನ್ ಶಾಂಟೋ ಅಜೇಯ 51 ರನ್ ಗಳಿಸಿದ್ದು 4ನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ. ಅನುಭವಿ ಬ್ಯಾಟರ್ ಶಕೀಬ್ ಅಲ್ ಹಸನ್ ಅಜೇಯ 5 ರನ್ ಗಳಿಸಿದ್ದು ಬಾಂಗ್ಲಾದೇಶಕ್ಕೆ ಕೊನೆಯ ಭರವಸೆಯಾಗಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ರವಿಚಂದ್ರನ್ ಅಶ್ವಿನ್, ಬೌಲಿಂಗ್‌ನಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಈಗಾಗಲೇ 3 ವಿಕೆಟ್ ಪಡೆದುಕೊಂಡಿದ್ದು, ನಾಲ್ಕನೇ ದಿನ ಎದುರಾಳಿಗಳಿಗೆ ಮಾರಕವಾಗುವ ಮುನ್ಸೂಚನೆ ಕೊಟ್ಟಿದ್ದಾರೆ.












Click it and Unblock the Notifications