Champions Trophy: ಪಾಕಿಸ್ತಾನಕ್ಕೆ ಹೋಗಲ್ಲ ಎಂದ ಭಾರತ
2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟನಪಡಿಸಿದೆ. ಭಾರತ ತಂಡವನ್ನು ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಕಳಿಸಬಾರದು ಎಂದು ಬಿಸಿಸಿಐ ಭಾರತ ಸರ್ಕಾರಕ್ಕೆ ಸಲಹೆ ನೀಡಿದೆ. ಫೆಬ್ರವರಿ 19ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನ ಸಿದ್ಧತೆ ಮಾಡಿಕೊಂಡಿದ್ದು ಭಾರತ ತಂಡ ಹೋಗದೇ ಇದ್ದರೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
2025ರ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಪಾಕಿಸ್ತಾನದ ಮೂರು ಸ್ಥಳಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ನಡೆಯಲಿದೆ. ಭಾರತ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದ ಬಳಿಕ, ಐಸಿಸಿ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪರ್ಯಾಯ ಯೋಜನೆಯನ್ನು ರೂಪಿಸುವ ಅಗತ್ಯವಿದೆ. ಏಷ್ಯಾ ಕಪ್ ರೀತಿ ಚಾಂಪಿಯನ್ಸ್ ಟ್ರೋಫಿ ಕೂಡ ಹೈಬ್ರಿಡ್ ಮಾದರಿಯಲ್ಲಿ ನಡೆಯುವ ಸಾಧ್ಯತೆ ಇದೆ.

ಆದರೆ ಏಷ್ಯಾಕಪ್‌ನಲ್ಲಿ ಬಿಸಿಸಿಐ ಒತ್ತಡಕ್ಕೆ ಮಣಿದಿದ್ದ ಪಾಕಿಸ್ತಾನ ಶ್ರೀಲಂಕಾದಲ್ಲಿ ಭಾರತದ ಪಂದ್ಯಗಳನ್ನು ಆಯೋಜಿಸಿತ್ತು, ಆದರೆ ಈ ಬಾರಿ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ನಡೆಸಲು ಒಪ್ಪಬಾರದು ಎಂದು ಪಿಸಿಬಿ ನಿರ್ಧರಿಸಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳ ಆಯೋಜನೆ ಮಾಡುವ ಸಾಧ್ಯತೆ ತಳ್ಳಿಹಾಕಿದ್ದಾರೆ.
ಪಾಕಿಸ್ತಾನಕ್ಕೆ ಬೇರೆ ದಾರಿಯಿಲ್ಲ
ಪಾಕಿಸ್ತಾನ ಹೈಬ್ರಿಡ್ ಮಾದರಿಗೆ ಒಪ್ಪಲ್ಲ ಎಂದಿದ್ದರೂ ಅಂತಿಮವಾಗಿ ಐಸಿಸಿ ಸೂಚನೆಗೆ ಮಣಿಯಲೇಬೇಕಾಗುತ್ತದೆ. ಭಾರತವನ್ನು ಹೊರಗಿಟ್ಟು ಚಾಂಪಿಯನ್ಸ್ ಟ್ರೋಫಿ ಆಯೋಜಿಸುವುದು ಐಸಿಸಿಗೆ ಕೂಡ ಸಾಧ್ಯವಾಗದ ಕಾರಣ, ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ಆಯೋಜನೆಯಾಗುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಹಲವು ದೇಶಗಳು ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳ ಯೋಜನೆಗೆ ಗುರುತಿಸಿದ್ದರೂ, ಯುಎಇಯಲ್ಲಿ ಭಾರತದ ಪಂದ್ಯಗಳು ನಡೆಯುವ ಸಾಧ್ಯತೆ ಹೆಚ್ಚಾಗಿದೆ.
ಈ ವಾರದ ಆರಂಭದಲ್ಲೇ ಬಿಸಿಸಿಐ ಐಸಿಸಿಗೆ ತನ್ನ ನಿಲುವನ್ನು ತಿಳಿಸಿದೆ. ಐಸಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಈ ವಿಚಾರ ತಿಳಿಸುವ ಮೊದಲು ಬಿಸಿಸಿಐ ಲಿಖಿತವಾಗಿ ತನ್ನ ಆಕ್ಷೇಪಣೆ ಸಲ್ಲಿಸಲು ಕಾಯುತ್ತಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜನೆ ಮಾಡಲೇಬೇಕಾದರೆ ಅದನ್ನು ಸರ್ಕಾರದ ಜೊತೆ ಚರ್ಚಿಸಬೇಕು ಎಂದು ತಿಳಿಸಿದೆ.
ಎಂಟು ತಂಡಗಳು ಭಾಗಿ
ಐಸಿಸಿ ವಿಶ್ವಕಪ್ ಬಳಿಕ ಚಾಂಪಿಯನ್ಸ್ ಟ್ರೋಫಿ ಪ್ರತಿಷ್ಠಿತ ಪಂದ್ಯಾವಳಿಯಾಗಿದೆ. ಬಲಿಷ್ಠ 8 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಟ್ರೋಫಿ ಆಡಲು ಅರ್ಹತೆ ಪಡೆದುಕೊಂಡಿವೆ. ವೇಳಾಪಟ್ಟಿ ಮತ್ತು ಟಿಕೆಟಿಂಗ್ ವಿವರ ಇನ್ನಷ್ಟೇ ಬಹಿರಂಗವಾಗಬೇಕಾಗಿದೆ.












Click it and Unblock the Notifications