T20 World Cup: ಸೆಮಿಫೈನಲ್ ಪಂದ್ಯಗಳ ವೇಳಾಪಟ್ಟಿ; ಹಾಲಿ ಚಾಂಪಿಯನ್‌ಗಳ ಸದ್ದಡಗಿಸುತ್ತಾ ಭಾರತ?
ಟಿ20 ವಿಶ್ವಕಪ್ ಸೂಪರ್ 8 ಹಂತದ ಕೊನೆಯ ಪಂದ್ಯದವರೆಗೂ ಸೆಮಿಫೈನಲ್ ತಲುಪುವ ತಂಡಗಳ ಬಗ್ಗೆ ಸಾಕಷ್ಟು ಕುತೂಹಲ ಇತ್ತು. ಸೂಪರ್ 8 ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ರೋಚಕ ಗೆಲುವು ಸಾಧಿಸಿದ ಅಫ್ಘಾನಿಸ್ತಾನ ಆಸ್ಟ್ರೇಲಿಯಾವನ್ನು ವಿಶ್ವಕಪ್‌ನಿಂದ ಹೊರಹಾಕಿ, ಸೆಮಿಫೈನಲ್‌ಗೆ ಪ್ರವೇಶ ಪಡೆದು ಇತಿಹಾಸ ನಿರ್ಮಿಸಿದೆ.
ಭಾರತ, ಅಫ್ಘಾನಿಸ್ತಾನ ಗ್ರೂಪ್ 1ರಿಂದ ಸೆಮಿಫೈನಲ್‌ಗೆ ಅರ್ಹತೆ ಪಡೆದರೆ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಗ್ರೂಪ್ 2ರಿಂದ ಸೆಮಿಫೈನಲ್ ಪ್ರವೇಶಿಸಿವೆ. ಜೂನ್ 26 ಮತ್ತು 27 ರಂದು (ವೆಸ್ಟ್ ಇಂಡೀಸ್ ಸಮಯ) ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.

ಯಾರಿಗೆ ಯಾರು ಎದುರಾಳಿ?
ಸೆಮಿಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದು, ದಕ್ಷಿಣ ಆಫ್ರಿಕಾ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಭಾರತೀಯ ಕಾಲಮಾನದ ಪ್ರಕಾರ ಜೂನ್ 27 ರಂದು (ಗುರುವಾರ) ಬೆಳಗ್ಗೆ 6 ಗಂಟೆಗೆ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನದ ನಡುವೆ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ.
ಗುರುವಾರ ರಾತ್ರಿ 8 ಗಂಟೆಗೆ ನಡೆಯುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಜೂನ್ 29ರಂದು ಈ ವಿಶ್ವಕಪ್‌ನ ಫೈನಲ್ ಪಂದ್ಯ ನಡೆಯಲಿದೆ.
ಕಳೆದ ವಿಶ್ವಕಪ್ ಸೋಲಿನ ಸೇಡು!
2022ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಇಂಗ್ಲೆಂಡ್ ಭಾರತದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದ್ದರೆ, ಭಾರತದ ಪ್ರಶಸ್ತಿ ಗೆಲ್ಲುವ ಭಗ್ನವಾಗಿತ್ತು.
ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತವನ್ನು ಮಣಿಸಿದ್ದ ಆಸ್ಟ್ರೇಲಿಯಾವನ್ನು ಟಿ20 ವಿಶ್ವಕಪ್‌ನಲ್ಲಿ ಹೊರಹಾಕುವಲ್ಲಿ ಭಾರತ ಯಶಸ್ವಿಯಾಗಿದೆ. ಇಂಗ್ಲೆಂಡ್ ತಂಡವನ್ನು ಮಣಿಸಿ ಕಳೆದ ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಭಾರತದ ಬೌಲಿಂಗ್ ಈ ವಿಶ್ವಕಪ್‌ನಲ್ಲಿ ಬಲಿಷ್ಠವಾಗಿದೆ. ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿ ಇನ್ನೂ ಮಿಂಚಬೇಕಿದೆ. ಆಸ್ಟ್ರೇಲಿಯಾ ವಿರುದ್ಧ 92 ರನ್ ಗಳಿಸಿ ಮಿಂಚಿದ್ದ ರೋಹಿತ್ ಶರ್ಮಾ, ತಂಡದ ಚಿಂತೆಯನ್ನು ಕಡಿಮೆ ಮಾಡಿದ್ದಾರೆ. ಸೂರ್ಯ, ಪಂತ್, ಪಾಂಡ್ಯ ಲಯದಲ್ಲಿರುವುದು ಭಾರತದ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದೆ.
ಬೌಲಿಂಗ್‌ನಲ್ಲಿ ಬುಮ್ರಾ, ಅರ್ಷದೀಪ್ ಸಿಂಗ್ ಮ್ಯಾಜಿಕ್ ಮಾಡಿದ್ದಾರೆ. ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಕೂಡ ಅಬ್ಬರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಕೊಹ್ಲಿ ಲಯ ಕಂಡುಕೊಂಡರೆ ಭಾರತದ ಗೆಲುವು ಸುಲಭವಾಗಲಿದೆ.
ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿಗೂ ಐಸಿಸಿ ಟ್ರೋಫಿ ಗೆಲ್ಲಲು ಇದು ಉತ್ತಮ ಅವಕಾಶವಾಗಿದೆ. ಚೋಕರ್ಸ್ ಹಣೆಪಟ್ಟಿಯನ್ನು ಕಳಚಲು ದಕ್ಷಿಣ ಆಫ್ರಿಕಾಗೆ ಇದಕ್ಕಿಂತ ಉತ್ತಮ ಅವಕಾಶ ಸಿಕ್ಕಲಾರದು. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಬಾಂಗ್ಲಾದೇಶಗಳನ್ನೇ ಮಣಿಸಿರುವ ಅಫ್ಘಾನಿಸ್ತಾನ ಕೂಡ ದಕ್ಷಿಣ ಆಫ್ರಿಕಾ ಮಣಿಸಿ ಚೊಚ್ಚಲ ಫೈನಲ್ ಆಡುವ ಕನಸು ಕಾಣುತ್ತಿದೆ.












Click it and Unblock the Notifications