Champions Trophy Ind vs NZ: ಪಾಂಡ್ಯ, ಅಯ್ಯರ್, ಅಕ್ಷರ್ ಆಸರೆ; ನ್ಯೂಜಿಲೆಂಡ್ ವಿರುದ್ಧ ಭಾರತ 249 ರನ್‌ಗಳಿಗೆ ಆಲೌಟ್
ಚಾಂಪಿಯನ್ಸ್ ಟ್ರೋಫಿ 2025ರ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 249 ರನ್‌ಗಳಿಗೆ ಆಲೌಟ್ ಆಗಿದೆ. ನ್ಯೂಜಿಲೆಂಡ್ ಶಿಸ್ತಿನ ಬೌಲಿಂಗ್ ದಾಳಿ ಎದುರು ಭಾರತದ ಬ್ಯಾಟರ್ ಗಳು ರನ್ ಗಳಿಸಲು ಪರದಾಡಿದರು. ಎರಡೂ ತಂಡಗಳು ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದ್ದರು ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಯಾರು ಸೆಮಿಫೈನಲ್ ಪ್ರವೇಶಿಸುತ್ತಾರೆ ಎನ್ನುವುದನ್ನು ಈ ಪಂದ್ಯ ನಿರ್ಣಯಿಸಲಿದೆ.
ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ಸತತ 13ನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಕೆಟ್ಟ ದಾಖಲೆ ಮುಂದುವರೆಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಶುಭಮನ್ ಗಿಲ್ ಕೇವಲ 2 ರನ್ ಗಳಿಸಿ ಔಟಾದರೆ, ನಾಯಕ ರೋಹಿತ್ ಶರ್ಮಾ 15 ರನ್ ಗಳಿಸಿ ಔಟಾದರು.

ತಮ್ಮ 300ನೇ ಏಕದಿನ ಪಂದ್ಯ ಆಡುತ್ತಿರುವ ವಿರಾಟ್ ಕೊಹ್ಲಿ 11 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಬಂದ ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ಭಾರತಕ್ಕೆ ಆಸರೆಯಾದರು. ಈ ಜೋಡಿ 4 ನೇ ವಿಕೆಟ್‌ಗೆ 98 ರನ್ ಕಲೆಹಾಕಿತು. 42 ರನ್ ಗಳಿಸಿ ಅಕ್ಷರ್ ಪಟೇಲ್ ಔಟಾದರು.
ಶ್ರೇಯಸ್ ಅಯ್ಯರ್ ತಮ್ಮ ಅರ್ಧಶತಕ ಗಳಿಸಿ ಮಿಂಚಿದರು. 79 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಅವರು ಮತ್ತೊಮ್ಮೆ ಶಾರ್ಟ್ ಬಾಲ್ ಆಡಲು ಹೋಗಿ ಔಟಾದರು. ಕೆಎಲ್ ರಾಹುಲ್ 23 ರನ್ ಗಳಿಸಿದರೆ, ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ 45 ಎಸೆತಗಳಲ್ಲಿ 45 ರನ್ ಗಳಿಸಿದರು. ರವೀಂದ್ರ ಜಡೇಜಾ 16 ರನ್ ಗಳಿಸಿದರು.
ನ್ಯೂಜಿಲೆಂಡ್ ಶಿಸ್ತಿನ ಬೌಲಿಂಗ್
ನ್ಯೂಜಿಲೆಂಡ್ ಶಿಸ್ತಿನ ಬೌಲಿಂಗ್ ಮಾಡಿತು, ಮ್ಯಾಟ್ ಹೆನ್ರಿ 8 ಓವರ್ ಗಳಲ್ಲಿ 42 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆದುಕೊಂಡು ಮಿಂಚಿದರು. ಕೈಲ್ ಜೇಮಿಸನ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ವಿಲಿಯಮ್ ಓರೂರ್ಕ್ ತಲಾ 1 ವಿಕೆಟ್ ಪಡೆದರು.
ಪಿಚ್ ಬ್ಯಾಟಿಂಗ್ ಮಾಡಲು ಕಷ್ಟವಾಗಿದ್ದು ಬೌಲರ್ ಗಳು ಪರಿಣಾಮಕಾರಿಯಾಗಿದ್ದಾರೆ. ಭಾರತ ತಂಡ ಇಂದು ನಾಲ್ಕು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿದಿದ್ದು ಈ ಮೊತ್ತವನ್ನು ರಕ್ಷಿಸಿಕೊಳ್ಳುವ ವಿಶ್ವಾಸದಲ್ಲಿದೆ.












Click it and Unblock the Notifications